ಕಚ್ಚಾತೈಲದ ಬೆಲೆ ಇಳಿಕೆಯಾದರೆ ಬಸ್‍ದರ ಕಡಿಮೆಮಾಡುವ ಬಗ್ಗೆ ಸರ್ಕಾರ ಪರಿಶೀಲನೆ

0
21
loading...

ಬೆಳಗಾವಿ, ಡಿ.16- ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನೊಂದು ಬಾರು ಕಚ್ಚಾತೈಲದ ಬೆಲೆ ಇಳಿಕೆಯಾದರೆ ಬಸ್‍ದರ ಕಡಿಮೆಮಾಡುವ ಬಗ್ಗೆ ಸರ್ಕಾರ ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್‍ನಲ್ಲಿ ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರಾಮಚಂದ್ರೇಗೌಡ ಅವರ ಪ್ರಶ್ನಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉತ್ತರಿಸುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ, ಕಚ್ಚಾತೈಲದ ಬೆಲೆ ಕಡಿಮೆಯಾದರೆ ಬಸ್ ದರ ಇಳಿಕೆ ಮಾಡುವ ಪ್ರಸ್ತಾವನೆಯನ್ನು ಪರಿಶೀಲನೆ ಮಾಡಲಾಗುವುದು. ಸರ್ಕಾರ ಈ ವಿಷಯದಲ್ಲಿ ಸಕಾರತ್ಮಕವಾಗಿ ಸ್ಪಂಧಿಸಲಿದೆ ಎಂದು ಭರವಸೆ ಕೊಟ್ಟರು.
ಕೇಂದ್ರ ಸರ್ಕಾರ ತೈಲ ಬೆಲೆಗಳ ಬೆಲೆಯನ್ನು ಇಳಿಕೆ ಮಾಡಿದ್ದರೂ ದೇಶದ ಯಾವುದೇ ರಾಜ್ಯಗಳು ಬಸ್‍ದರವನ್ನು ಕಡಿಮೆ ಮಾಡಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಸ್ಥಿರವಾಗದೆ ಇರುವದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.
ತೈಲ ಬೆಲೆ ಇಳಿಕೆಯಾಗಲು ಕೇಂದ್ರ ಸರ್ಕಾರ ಕಾರಣವಲ್ಲ. ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಮುಖವಾಗಿದ್ದರಿಂದ ಸಹಜವಾಗಿ ಬೆಲೆ ಇಳಿಯಬೇಕಾಗಿತು.ಇದಕ್ಕೂ ಅದಕ್ಕೂ ಸಂಬಂಧ ಕಲ್ಪಿಸುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಪ್ರತಿಪಕ್ಷದ ನಾಕಯ ಈಶ್ವರಪ್ಪ ಅವರಿಗೆ ಚುಚ್ಚಿದರು.
ಇದಕ್ಕೂ ಮುನ್ನಾ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ಬಸ್ ದರ ಇಳಿಕೆ ಮಾಡುವುದರಿಂದ ಸಂಸ್ಥೆಯ ಮೇಲೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತದೆ. ಡೀಸಲ್ ದರ ಮಾರ್ಚ್ ತಿಂಗಳವರೆದೂ ಇದೇ ಸ್ಥಿತಿಯಲ್ಲಿ ಮುಂದುವರೆದರೆ 146 ಕೋಟಿ ಉಳಿತಯವಾಗುತ್ತದೆ. ಸಿಬ್ಬಂಧಿ ವೇತನ , ಪಿಂಚಣಿ, ಸೇರಿದಂತೆ ನೌಕರರಿಗೆ ಹಲವು ಸೌಲಭ್ಯಗಳನ್ನು ನೀಡುತ್ತದೆ ಎಂದು ವಿವರಿಸಿದರು.
2008-2009 ರಲ್ಲಿ ಸಿಬ್ಬಂಧಿಗೆ 300 ಕೋಟಿ ನೀಡಲಾಗುತ್ತಿತ್ತು.ಪ್ರಸ್ತುತ 700 ಕೋಟಿಗೂ ಹೆಚ್ಚಿನ ವೇತನ ನೀಡಬೇಕಾಗಿದೆ. ಕೇಂದ್ರ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿದ ಮೇಲೆಯೂ ದೇಶದ ಯಾವುದೇ ರಾಜ್ಯದಲ್ಲೂ ಬಸ್ ದರ ಕಡಿಮೆಮಾಡಿಲ್ಲ. ಪ್ರಧಾನ ಮಂತ್ರಿ ನರೇಂದ್ರಮೋದಿ ಪ್ರತಿನಿಧಿಸುವ ಗುಜರಾತ್‍ನಲ್ಲೂ ದರ ಇಳಿಕೆ ಮಾಡಿಲ್ಲ ಎಂದರು.
ತೈಲ ಬೆಲೆ ಇಳಿಕೆ ಮಾಡಿದ್ದ ಕೇಂದ್ರ ಸರ್ಕಾರ ಮತ್ತೊಂದಡೆ ಸುಂಕ ತೆರಿಗೆಯನ್ನು ಹೆಚ್ಚಳ ಮಾಡಿತು. ಇದರಿಂದ ಸಂಸ್ಥೆಯ ಮೇಲೆ ಹೆಚ್ಚಿನ ಹೊರೆಯಾಗಿದೆ.ಕಚ್ಚಾ ತೈಲದ ಬೆಲೆ ಆಗಾಗ್ಗೆ ಏರಿಕೆಯಾಗುವುದು ಇಲ್ಲವೇ ಇಳಿಕೆಯಾಗುವುದು ಸರ್ವೇ ಸಾಮಾನ್ಯ. ಒಂದು ವೇಳೆ ಆತುರದ ನಿರ್ಧಾರ ಕೈಗೊಂಡರೆ ಜನರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದರು.
ಪ್ರತಿ ಲೀಟರ್ ಡೀಸೆಲ್ ದರ ಕಳೆದ ಎರಡು ತಿಂಗಳಲ್ಲಿ ಮೂರು ಬಾರಿ ಒಟ್ಟು ಸುಮಾರು 6 ರೂ. ಕಡಿಮೆಯಾಗಿದ್ದರೂ ದೇಶದ ಯಾವ ರಾಜ್ಯದಲ್ಲೂ ಬಸ್ ದರ ಇಳಿಕೆಯಾಗಿಲ್ಲ. ಇದೇ ದರ ಮುಂದುವರಿದಲ್ಲಿ ಮಾರ್ಚ್ 2015ರ ಅಂತ್ಯದಲ್ಲಿ 146.80 ಕೋಟಿ ರೂ. ಉಳಿತಾಯವಾಗಲಿದೆ. ಆದರೆ ಮುಂದಿನ ದಿನಗಳಲ್ಲಿ ಡೀಸೆಲ್ ದರ ಹೆಚ್ಚಳವಾಗುವ ಸಂಭವವೂ ಇದೆ. ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳಿಂದ ಹೆಚ್ಚುವರಿಯಾಗಿ 129 ಕೋಟಿ ರೂ. ಭರಿಸಬೇಕಾಗಿದ್ದು, ನಾಲ್ಕೂ ಸಂಸ್ಥೆಗಳಿಗೆ ಒಟ್ಟಾರೆ 543.79 ಕೋಟಿ ರೂ. ಆರ್ಥಿಕ ಹೊರೆ ಬೀಳಲಿರುವುದರಿಂದ ಬಸ್ ದರ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರು, ಡೀಸೆಲ್ ದರ ಜಾಸ್ತಿ ಆಗಲಿದೆ ಎಂಬ ಊಹೆಯಿಂದ ಬಸ್ ದರ ಇಳಿಸದೇ ಇರುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರ ಅಬಕಾರಿ ಶುಲ್ಕ ಹೆಚ್ಚಿಸಿದ್ದಾರೆಂದು ಸಭಾನಾಯಕ ಎಸ್.ಆರ್. ಪಾಟೀಲ ಹೇಳಿದಾಗ, ಗರಂ ಆದ ಈಶ್ವರಪ್ಪ ಅವರು, ನೀವ್ಯಾಕೆ ಉತ್ತರ ಕೊಡ್ತೀರಾ? ಸಾರಿಗೆ ಸಚಿವರು ಉತ್ತರಿಸುತ್ತಾರೆ. ಇಲ್ಲ ನೀವೇ ಸಾರಿಗೆ ಸಚಿವರಾಗಿ ಎಂದರು.
ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿರುವುದರಿಂದ ಡೀಸೆಲ್ ದರ ಇಳಿಕೆಯಾಗಿದೆ. ಇನ್ನೊಮ್ಮೆ ಕಡಿಮೆಯಾದರೆ ಬಸ್ ದರ ಇಳಿಕೆಗೆ ಪರಿಶೀಲಿಸುವುದಾಗಿ ಹೇಳಿದರು
ಇದಕ್ಕೂ ಮುನ್ನಾ ಮಾತನಾಡಿದ ರಾಮಚಂದ್ರೇಗೌಡ ಅವರು, ಬಸ್ ದರ ಏರಿಕೆಯಾಗಿರುವುದರಿಂದ ಜನಸಾಮಾನ್ಯರ ಮೇಲೆ ಹೊರೆಯಾಗಿದೆ ಎಂದು ವಿಷಾದಿಸಿದರು.
ಖಾಸಗಿ ಬಸ್, ಅಟೋ. ಟ್ಯಾಕ್ಸಿ ಸೇರಿದಂತೆ ಎಲ್ಲ ವಾಹನಗಳ ಬೆಲೆ ಹೆಚ್ಚಳವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಮಾಡಿದರು.

loading...

LEAVE A REPLY

Please enter your comment!
Please enter your name here