ಉಪ್ಪು ನೀರಿನಿಂದ ಭತ್ತ ನಾಶ

0
28
loading...

29KMT5

ಕುಮಟಾ,29: ಪುರಸಭೆ ವ್ಯಾಪ್ತಿಯ ಚಿತ್ರಿಗಿಯ ಕಲ್ಗುಡ್ಡ ರಸ್ತೆಯ ಸಮೀಪದ ಭತ್ತದ ಗದ್ದೆಗಳಿಗೆ ಗಜನಿಯ ಉಪ್ಪು ನೀರು ನುಗ್ಗಿ ಲಕ್ಷಾಂತ ರೂ. ಹಾನಿಯಾಗಿದೆ. ಇದರಿಂದ ಆ ಭಾಗದ ರೈತರ ಶ್ರಮಕ್ಕೆ ಫಲ ಬಾರದಂತಾಗಿದೆ.
ಪಟ್ಟಣದ ಚಿತ್ರಿಗಿಯ ಕಲ್ಗುಡ್ಡ ರಸ್ತೆಯ ಪಕ್ಕದಲ್ಲಿರುವ ಸುಮಾರು 30 ಎಕರೆ ಪ್ರದೇಶದಲ್ಲಿ ರೈತರು ಭತ್ತದ ಗದ್ದೆ ಮಾಡಿದ್ದಾರೆ. ಅಲ್ಲಿನ ಬಹುತೇಕ ರೈತರು ಕೃಷಿಯನ್ನೆ ಅವಲಂಭಿಸಿ ಜೀವನ ನಡೆಸುತ್ತಿದ್ದಾರೆ. ಆದರೆ ಅವರ ಗದ್ದೆಗಳಿಗೆ ಗಜನಿಯ ಉಪ್ಪು ನೀರು ನುಗ್ಗಿರುವುದರಿಂದ ರೈತರ ಶ್ರಮವೆಲ್ಲ ಹಾಳಾಗಿದೆ. ಭರತದ ಸಮಯದಲ್ಲಿ ಗಜನಿಯಲ್ಲಿ ತುಂಬುವ ನೀರನ್ನು ಬಿಟ್ಟುಕೊಡುವುದರಿಂದ ಗದ್ದೆಗಳಿಗೆ ನುಗ್ಗಿ, ಬೆಳೆ ನಾಶವಾಗುತ್ತಿದೆ. ಇದರಿಂದ ರೈತರಿಗೆ ಲಕ್ಷಾಂತರ ರೂ. ಹಾನಿಯಾಗಿದೆ.
ಸುಮಾರು 15 ವರ್ಷಗಳ ಹಿಂದೆ ಆ ಭಾಗದ ನೂರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದರು. ಆದರೆ ಅಂಕೋಲಾದ ಮಯೂರ ನಾಯಕ ಮಾಲೀಕತ್ವದ ಗಜನಿ ಶುರುವಾದ ಮೇಲಿನ ಈ ಭಾಗದ ಕೃಷಿ ಜಮೀನಿಗೆ ಉಪ್ಪ ನೀರು ನುಗ್ಗಿ ಕೃಷಿಗೆ ಅಯೋಗ್ಯವಾಗಿದೆ. ಇದರಿಂದ ಗದ್ದೆ ಮಾಡುವ ರೈತರ ಪ್ರಮಾಣ ಕಡಿಮೆಯಾಗಿದೆ. ಈಗ ಸುಮಾರು 30 ಎಕರೆ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯುತ್ತಿದ್ದು, ಆ ಬೆಳೆ ಕೂಡ ಉಪ್ಪಿನ ನೀರಿನ ಹಾವಳಿಗೆ ನಾಶವಾಗುತ್ತಿದೆ. ಸಾಲ ಮಾಡಿ ಕೃಷಿ ಮಾಡುವ ತಮಗೆ ನಷ್ಟ ಉಂಟಾಗಿದೆ. ಅದರಂತೆ ಬಾವಿಯ ನೀರು ಕೂಡ ಉಪ್ಪಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತೀರಾ ಕಾಡಿದೆ. ಅಲ್ಲದೇ ಗದ್ದೆಗೆ ಹಂದಿಗಳ ಕಾಟ ಜಾಸ್ತಿಯಾಗಿದ್ದು, ಬೆಳೆ ನಾಶವಾಗುತ್ತಿದೆ.
ಒಟ್ಟಾರ ಕೃಷಿಕನ ಬದುಕು ಸಂಕಷ್ಟದಲ್ಲಿದೆ. ಗದ್ದೆ ಹಾನಿಯಾದ ರೈತರಿಗೆ ಪರಿಹಾರ ಕೊಡಿಸುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ರೈತರಾದ ವಿನಾಯಕ ಪಟಗಾರ. ಜಟ್ಟಿ ನಾಯ್ಕ, ನಾರಾಯಣ ಪಟಗಾರ, ಅಚ್ಯುತ ನಾಯ್ಕ, ಮಂಜು ಪಟಗಾರ, ಗಣೇಶ ಭಟ್, ಜಿ.ಎನ್.ಭಟ್, ದಿನೇಶ ನಾಯ್ಕ, ದತ್ತಾತ್ರಯ, ವಿಷ್ಣು ನಾಯ್ಕ, ಮಂಜುನಾಥ ಪಟಗಾರ, ಶ್ರೀಧರ ಪಟಗಾರ , ಪ್ರವೀಣ ಪಟಗಾರ ಇತರರು ಒತ್ತಾಯಿಸಿದ್ದಾರೆ.
ನಮ್ಮ ಭಾಗದ ರೈತರ ಗದ್ದೆಗೆ ಗಜನಿಯ ಉಪ್ಪು ನೀರು ನುಗ್ಗಿ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಭಾಗದ ಗದ್ದೆಯ ನಾಶಕ್ಕೆ ಕಾರಣರಾದ ಗಜನಿ ಮಾಲೀಕರು ರೈತರಿಗೆ ಶೀಘ್ರ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್‍ಗೆ ದೂರು ನೀಡಿ ಪ್ರತಿಭಟಿಸಲಾಗುವುದು ಎಂದು ಪುರಸಭೆ ಸದಸ್ಯ ಸಂತೋಷ ನಾಯ್ಕ, ಸ್ಥಳೀಯರಾದ ಕಿರಣ ನಾಯ್ಕ, ಮಂಜುನಾಥ ಪಟಗಾರ, ರಮೇಶ ಪಟಗಾರ ಇತರರು ಎಚ್ಚರಿಸಿದ್ದಾರೆ.

loading...

LEAVE A REPLY

Please enter your comment!
Please enter your name here