ಕಾಮಗಾರಿ ಅಕ್ರಮ ದೂರು: ಲೋಕಾಯುಕ್ತ ತನಿಖೆ ಶುರು

0
23
loading...

29 HLY NPS-2
ಹಳಿಯಾಳ,30: ಜಿಲ್ಲಾ ಪಂಚಾಯತ ಇಂಜಿನೀಯರಿಂಗ್ ಹಳಿಯಾಳ ಉಪವಿಭಾಗದ ತೇರಗಾಂವ ಜಿ.ಪಂ. ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿರುವ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅಕ್ರಮವಾಗಿದೆ ಎಂದು ಅರ್ಲವಾಡ ಗ್ರಾ.ಪಂ. ಸದಸ್ಯರಾಗಿರುವ ಕಾಂಗ್ರೆಸ್ ಮುಖಂಡ ನಾರಾಯಣ ದಡ್ಡಿ ಇವರು ನೀಡಿದ ದೂರಿನ ಹಿನ್ನಲೆಯಲ್ಲಿ ಕರ್ನಾಟಕ ಲೋಕಾಯುಕ್ತ ನೇಮಿಸಿರುವ ಅಧಿಕಾರಿ ಅ. 29 ರಿಂದ ತನಿಖೆಯನ್ನು ಆರಂಭಿಸಿದ್ದಾರೆ.
3 ದಿನಗಳ ಪರ್ಯಂತ ನಡೆಯಲಿರುವ ಈ ತನಿಖೆಯನ್ನು ಇಂಜನೀಯರಿಂಗ್ ವಿಭಾಗದ ರಾಜ್ಯ ಲೋಕಾಯುಕ್ತ ಅಧಿಕಾರಿ ಆನಂದ ಸಿ.ಎನ್ ಅವರು ತನಿಖೆಗೆ ಆಗಮಿಸಿದ್ದು, ದೂರುದಾರರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ ಕಾಮಗಾರಿಗಳ ಬಗ್ಗೆ ಆಯಾ ಗ್ರಾಮದಲ್ಲಿ ಕಾಮಗಾರಿ ನಿರ್ವಹಿಸಿದ ಸ್ಥಳಕ್ಕೆ ತೆರಳಿ ಸಮಗ್ರ ಪರಿಶೀಲನೆ ಆರಂಭಿಸಿದ್ದಾರೆ.
ಅರ್ಲವಾಡ, ಮುಂಡಕಿ, ಹೋಮನಳ್ಳಿ, ತೇರಗಾಂವ ಮೊದಲಾದ ಗ್ರಾಮಗಳಲ್ಲಿ ಸುಮಾರು 30 ಕಾಮಗಾರಿಗಳ ಬಗ್ಗೆ ಪ್ರಾರಂಭದ ದಿನ ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹಿಸಲಾಯಿತು.
ಬಿಜೆಪಿ ಮುಖಂಡ ರಾಜು ಧೂಳಿ, ಕಾಂಗ್ರೆಸ್ ಮುಖಂಡ, ಜಿ.ಪಂ. ಮಾಜಿ ಸದಸ್ಯ ಕೈತಾನ ಬಾರಬೋಜಾ, ಜೆಡಿಎಸ್‍ನ ಕ್ಷೇತ್ರಾಧ್ಯಕ್ಷ ಕುಮಾರ ಬೋಬಾಟಿ, ತಾಲೂಕಾಧ್ಯಕ್ಷ ಎನ್.ಎಸ್.ಜಿವೋಜಿ, ತಾ.ಪಂ. ಮಾಜಿ ಉಪಾಧ್ಯಕ್ಷ ಸುರೇಶ ಮಾನಗೆ, ರೈತ ಸಂಘಟನೆಯ ಶಂಕರ ಕಾಜಗಾರ ಮೊದಲಾದವರು ವಿವಾದಿತ ಕಾಮಗಾರಿಗಳ ಬಗ್ಗೆ ಲೋಕಾಯುಕ್ತರಿಗೆ ದೂರಿ ಅಕ್ರಮವನ್ನು ಬಯಲಿಗೆಳೆದು ತಪ್ಪಿತಸ್ಥರ ಮೇಲೆ ಕ್ರಮವಾಗುವಂತೆ ಮಾಡಬೇಕೆಂದು ಆಗ್ರಹಿಸಿದರು.
ದೂರುದಾರ ನಾರಾಯಣ ದಡ್ಡಿ ತಾವು ನೀಡಿದ ದೂರುಗಳ ಬಗ್ಗೆ ತನಿಖಾಧಿಕಾರಿಗೆ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮಾಹಿತಿ ನೀಡಿದರು. ಜಿ.ಪಂ. ಇಂಜಿನೀಯರಿಂಗ್ ಹಳಿಯಾಳ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಕೆ.ಎಸ್.ದೊಡ್ಮನಿ ಹಾಗೂ ಸಧ್ಯ ಕಾರ್ಯನಿರ್ವಹಿಸುತ್ತಿರುವ ಎಸ್.ಜಿ. ಲಕ್ಕುಂಡಿ ಇವರುಗಳು ತನಿಖಾಧಿಕಾರಿ ಜೊತೆಗಿದ್ದು, ಅವರು ಕೇಳಿದ ಮಾಹಿತಿಯನ್ನು ಒದಗಿಸಿದರು.
ವರದಿ ಮೇಲಾಧಿಕಾರಿಗೆ ಸಲ್ಲಿಕೆ:- ತೇರಗಾಂವ ಜಿ.ಪಂ. ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಗಳ ಅಕ್ರಮದ ದೂರಿನ ಬಗ್ಗೆ ತನಿಖೆ ನಡೆದಿದ್ದು ಈ ಹಂತದಲ್ಲಿ ತಮಗೆ ಮಾಧ್ಯಮದವರಿಗೆ ಮಾಹಿತಿ ನೀಡಲು ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿರುವ ತನಿಖಾಧಿಕಾರಿ ಆನಂದ ಸಿ.ಎನ್. ತನಿಖೆ ಪೂರ್ಣಗೊಂಡ ನಂತರ ಮೇಲಾಧಿಕಾರಿಗಳಿಗೆ ತನಿಖಾ ವರದಿಯನ್ನು ಸಲ್ಲಿಸುವದು ಮಾತ್ರ ತಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here