ಸುದ್ದಿಯ ಘನತೆ ಅರ್ಥೈಸಲಾಗದವ ಪತ್ರಕರ್ತನೇ ಅಲ್ಲ-ಹೆಬ್ಬಾರ

0
13
loading...

ಬೆಳಗಾವಿ17: ಸಮಾಜಕ್ಕೆ ಉಪಯುಕ್ತವಾಗುವ ಸುದ್ದಿ ಯಾವುದು ಎಂಬುದನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದವ ಉತ್ತಮ ಪತ್ರಕರ್ತನೇ ಅಲ್ಲ ಎಂದು ಹೊನ್ನಾವರದ ನಾಗರಿಕ ವಾರಪತ್ರಿಕೆ ಸಂಪಾದಕ ಕೃಷಮೂರ್ತಿ ಹೆಬ್ಬಾರ ಅಭಿಪ್ರಾಯಪಟ್ಟರು.
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿರುವ ಎಂ.ಎಂ ಕಲ್ಬುರ್ಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 88ನೇ ನಾಡಹಬ್ಬ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಮೂಹ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಕುರಿತು ಉಪನ್ಯಾಸವನ್ನು ನೀಡಿದರು.
ಇಂದು ಪತ್ರಕರ್ತರು ಬೆಳಕಿನ ಬೀಜಗಳಾಗುವ ಬದಲು ಕತ್ತಲೆಯ ಬೀಜಗಳಾಗುತ್ತಿದ್ದಾರೆ. ಅಕ್ಷರ ಲೋಕದ ಏಜಂಟರಂತೆ ವರ್ತಿಸಿ ಹಿಂದಿನವರ ಆದರ್ಶಗಳನ್ನು ಗಾಳಿಗೆ ತೂರುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಇಂದು ಕೂಡಾ ಗ್ರಾಮೀನ ಪ್ರದೇಶದ ಶೇ.80ರಷ್ಟು ಪತ್ರಕರ್ತರು ಬಡತನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಪಟ್ಟಣದ ಕೆಲ ಸೂಟ್‍ಬೂಟ್ ಪತ್ರಕರ್ತರು ಭಟ್ಟಂಗಿತನ ಮಾಡುತ್ತಾ, ಬ್ಲಾಕ್‍ಮೇಲ್ ಮಾಡುತ್ತಾ ಪತ್ರಕೋದ್ಯಮಕ್ಕೆ ಅಪಚಾರ ತರುತ್ತಿದ್ದಾರೆ ಎಂದು ಅವರು ನೊಂದು ಕೊಂಡರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ವಿಜಯ ಸಂಕೇಶ್ವರ, ಇಂದು ಪತ್ರಿಕೋಧ್ಯಮದಲ್ಲಿ ಮೇದಾವಿ ಪತ್ರಕರ್ತರ ಕೊರತೆ ಎದ್ದು ಕಾಣುತ್ತಿದೆ. ವರದಕ್ಷಿಣೆ ಕಾಯಿದೆ ದುರುಪಯೋಗವಾಗುವ ರೀತಿಯಲ್ಲಿಯೇ ಪತ್ರಕರ್ತರ ಗುರುತಿನಪತ್ರಗಳೂ ದುರುಪಯೋಗವಾಗುತ್ತಿದೆ. ಕಾನೂನು ಕೂಡಾ ಕೆಲ ಸುದ್ದಿಗಳನ್ನು ನೇರಾ ನೇರ ಪ್ರಕಟಿಸಲು ಅವಕಾಶ ನೀಡದೆ ಇರುವುದರಿಂದ ಈ ಉದ್ಯಮದಲ್ಲೂ ಸಾಕಷ್ಟು ತೊಡಕುಗಳನ್ನು ಅನುಭವಿಸಬೇಕಾಗುತ್ತದೆ ಎಂದರು.
ಪತ್ರಕರ್ತರಲ್ಲಿ ಇತ್ತೀಚೆಗೆ ವೃತ್ತಿಪರತೆ ದೂರವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಹಿಂದೆ ಸಾಕಷ್ಟು ತಂತ್ರಜ್ಞಾನಗಳು ಇಲ್ಲದೆ ಇದ್ದಾಗಲೂ ಸುದ್ದಿಗಳನ್ನು ಹೆಕ್ಕಿ ತೆಗೆಯುವ ಕಲೆ ಪತ್ರಕರ್ತರಿಗೆ ಕರಗತವಾಗಿತ್ತು. ಆದರೆ ಈಗ ಅದು ಅಷ್ಟಾಗಿ ಕಾಣಸಿಗುತ್ತಿಲ್ಲ. ಜನರು ಜಾಗೃತರಾದಾಗ ಮಾತ್ರವೇ ಸಮಾಜವನ್ನು ಸರಿದಾರಿಗೆ ತರಲು ಸಾಧ್ಯ ಎಂದು ಅವರು ಹೇಳಿದರು.
ಹುಕ್ಕೇರಿಯ ಪತ್ರಕರ್ತ ಪ್ರಕಾಶ್ ದೇಶಪಾಂಡೆ ಕೂಡಾ ಪತ್ರಕರ್ತರ ಜವಾಬ್ದಾರಿಯ ಬಗ್ಗೆ ಕಣ್ಣಿಗೆ ಕಟ್ಟುವಂತೆ ಮಾತನಾಡಿದರು. ಕೆಎಲ್‍ಇ ಆರೋಗ್ಯ ಮತ್ತು ವಿಜ್ಞಾನ ಸಂಸ್ಥೆಯ ಡಾ. ಹೆಚ್.ಬಿ. ರಾಜಶೇಕರ್ ಸಮಾರಂಬದ ಅಧ್ಯಕ್ಷತೆ ವಹಿಸಿದ್ದರು. ಬಸವ ಬೆಳವಿ ಚರಮೂರ್ತಿ ಚರಂತೇಶ್ವರ ವಿರಕ್ತಮಠದ ಶರಣ ಬಸವ ದೇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಡಾ. ಟಿ.ಜಿ ಸಾಂಬ್ರೇಕರ್, ಎಲ್.ವಿ. ಪಾಟೀಲ್, ವಿಜಯಾ ಹಿರೇಮಠ, ಮೀನಾಕ್ಷಿ ನೆಲಗಲಿ, ಮೀನಾಕ್ಷಿ ಗಲಗಲಿ, ಮೊದಲಾದವರು ಮುಖ್ಯ ಅತಿಥಿಯಾಗಿದ್ದರು.
ಹಿರಿಯ ಪತ್ರಕರ್ತ ಎಲ್.ಎಸ್. ಶಾಸ್ತಿ ಪ್ರಾಸ್ತಾವಿಕ ನುಡಿದರು. ಸಿ.ಕೆ ಜೋರಾಪುರ ಸ್ವಾಗತಿಸಿದರು. ಪುಷ್ಪಾ ಹುಬ್ಬಳ್ಳಿ ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮದ ನಂತರ ಶಾಂತಲಾ ನೃತ್ಯವೃಂದ ಸದಾಶಿವ ನಗರ ಬೆಳಗಾವಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

loading...

LEAVE A REPLY

Please enter your comment!
Please enter your name here