ಕಬ್ಬು ಬೆಳೆಗಾರರ ಸಂಕಷ್ಟ ನಿವಾರಣೆಯತ್ತ ಗಮನಹರಿಸಲು ಆಗ್ರಹ ರೂಪಾ ಕುಲಕರ್ಣಿ

0
23
loading...

 

ಖಾನಾಪುರ 17 : ರೈತರು ಬೆಳೆದ ಕಬ್ಬಿನ ಬೆಳೆಗೆ ಸಮರ್ಪಕ ಬೆಲೆ ನಿಗದಿಗೊಳಿಸುವಲ್ಲಿ ಸರ್ಕಾರ ಇದುವರೆಗೂ ತನ್ನ ನಿಲುವನ್ನು ಸ್ಪಷ್ಟಪಡಿಸಿಲ್ಲ. ಪರಿಣಾಮ ಸಕ್ಕರೆ ಕಾರ್ಖಾನೆಗಳು ರೈತರು ಪೂರೈಸುವ ಕಬ್ಬಿಗೆ ನೀಡುವ ದರದ ಘೋಷಣೆಯನ್ನು ಇದುವರೆಗೂ ಮಾಡಿಲ್ಲ. ಇದರಿಂದಾಗಿ ತಾಲೂಕಿನ ಕಬ್ಬು ಬೆಳೆಗಾರರು ಸಂಕಷ್ಟಕ್ಕೊಳಗಾಗಿದ್ದು, ಕೂಡಲೇ ಕಬ್ಬಿನ ದರವನ್ನು ಘೋಷಿಸುವ ಮೂಲಕ ಕಬ್ಬು ಬೆಳೆಗಾರರ ಸಂಕಷ್ಟ ನಿವಾರಣೆಯತ್ತ ಗಮನಹರಿಸಬೇಕೆಂದು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ತಾಲೂಕಿನ ರೈತರು ಆಗ್ರಹಿಸಿದ್ದಾರೆ.

ರೈತರು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕಟಾವು ಮಾಡಿದ ಕಬ್ಬು ಈ ವರ್ಷ ನವಂಬರ್ ಮುಗಿಯುತ್ತ ಬಂದರೂ ಕಟಾವುಗೊಳ್ಳುವ ಲಕ್ಷಣಗಳು ಗೋಚರಿಸದಿರುವ ಕಾರಣ ಕಂಗಾಲಾಗಿದ್ದಾರೆ. ಜೊತೆಗೆ ಕಳೆದ ವರ್ಷ ಕಬ್ಬು ಪೂರೈಸಿದವರಿಗೆ ಕಾರ್ಖಾನೆಗಳು ಇದುವರೆಗೂ ಸಂಪೂರ್ಣ ಬಿಲ್ಲು ಪಾವತಿ ಮಾಡದಿರುವುದು ಕಬ್ಬು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಆದರೆ ಪ್ರಸಕ್ತ ವರ್ಷದ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗುವ ಹಂತದಲ್ಲಿದ್ದು, ಕಾರ್ಖಾನೆಗಳು ಕಬ್ಬು ಕಟಾವು ಮಾಡುವ ಕಾರ್ಮಿಕರು ಮತ್ತು ಕಬ್ಬು ಸಾಗಿಸುವ ವಾಹನಗಳನ್ನು ಸಿದ್ಧಪಡಿಸಿಕೊಂಡಿವೆ. ತಾವು ಬೆಳೆದ ಕಬ್ಬಿಗೆ ಕಾರ್ಖಾನೆ ಯಾವ ದರ ನೀಡಲಿದೆ ಎಂದು ತಿಳಿಯದೇ ತಾವು ಬೆಳೆದ ಕಬ್ಬು ಕಟಾವು ಮಾಡಿಸುವುದು ರೈತರಿಗೆ ಇಷ್ಟವಿಲ್ಲದಿದ್ದರೂ ಜಮೀನಿನಲ್ಲಿ ಒಣಗುತ್ತಿರುವ ಬೆಳೆಯನ್ನು ಹಾಗೆಯೇ ಇಟ್ಟುಕೊಳ್ಳುವುದೂ ಅಸಾಧ್ಯವಾದ ಕಾರಣ ಸಿಹಿ ನೀಡಬೇಕಿದ್ದ ಕಬ್ಬು ರೈತರಿಗೆ ಕಹಿಯಾಗಿ ಕಾಣತೊಡಗಿದೆ.

ರೈತಪರ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳು, ರೈತಪರ ಸಂಘಟನೆಗಳು ಕಬ್ಬಿನ ಬೆಲೆ ನಿಗದಿ ವಿಷಯದಲ್ಲಿ ಚಕಾರ ಎತ್ತದಿರುವುದು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಕಬ್ಬು ಬೆಳೆಗಾರರ ಗೋಳು ಕೇಳುವಲ್ಲಿ ನಿರುತ್ಸಾಹ ತೋರುತ್ತಿರುವುದು ಕಬ್ಬು ಬೆಳೆಗಾರರಲ್ಲಿ ಅಸಮಾಧಾನ ಮೂಡಿಸಿದೆ. ಕೂಡಲೇ ಕಾರ್ಖಾನೆಗೆ ಸಾಗಿಸುವ ಕಬ್ಬಿನ ಬೆಲೆಯನ್ನು ನಿಗದಿಗೊಳಿಸಿ ನಂತರ ಕಬ್ಬು ಕಟಾವು ಮಾಡಲು ಕಾರ್ಖಾನೆಗಳು ಮುಂದಾಗಬೇಕು ಮತ್ತು ಸರ್ಕಾರ ಕಾರ್ಖಾನೆಗಳ ಮಾಲೀಕರೊಂದಿಗೆ ಈ ವಿಷಯವಾಗಿ ಚರ್ಚಿಸಿ ದರದ ಕುರಿತು ನಿರ್ಣಯವನ್ನು ಬಹಿರಂಗಪಡಿಸಬೇಕೆಂದು ತಾಲೂಕಿನ ನಾಗುರ್ಡಾ ಗ್ರಾಮದ ರಾಜು ಕುಂಭಾರ, ಅಶೋಕ ಪಾಟೀಲ ಸೇರಿದಂತೆ ಕಬ್ಬು ಬೆಳೆಗಾರರು ಒತ್ತಾಯಿಸಿದ್ದಾರೆ.

loading...

LEAVE A REPLY

Please enter your comment!
Please enter your name here