ಕಸಾಪ ಚುನಾವಣೆ ಪೂರ್ವಭಾವಿಯಾಗಿ ಪ್ರೊ.ಜಯಪ್ರಕಾಶ ಗೌಡ ಜಿಲ್ಲಾ ಪ್ರವಾಸ

0
23
loading...

3srs1
ಶಿರಸಿ,4: ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ನಡೆಯಲಿರುವ ಚುನವಣೆಗೆ ಆಕಾಂಕ್ಷಿಗಳು ಈಗಿನಿಂದಲೇ ಶ್ರಮಿಸುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ಅವರು ಚುನಾವಣೆ ಪೂರ್ವಭಾವಿಯಾಗಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಪ್ರವಾಸದ ಅಂಗವಾಗಿ ಶಿರಸಿಗೆ ಭೇಟಿ ನೀಡಿದ್ದ ಅವರು ಸುದ್ದಿಗೋಷ್ಟಿ ನಡೆಸಿ, ಕನ್ನಡ ಹೆಮ್ಮೆಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್. ಅದರಲ್ಲಿ ಕಾರ್ಯ ನಿರ್ವಹಿಸುವುದು ಸಮಾಜ ಸೇವೆಯ ಇನ್ನೊಂದು ಭಾಗವಾಗಿದೆ.

ಹೀಗಾಗಿ ಅಧ್ಯಕ್ಷ ಗಾದಿಗೆ ಸ್ಪರ್ಧಿಸುತ್ತಿದ್ದೇನೆ ಎಂದರು. ಮಂಡ್ಯದಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿ ಇತ್ತೀಚಿಗೆ ನಿವೃತ್ತಿಯನ್ನು ಹೊಂದಿದ್ದೇನೆ. ಇಡೀ ವೃತ್ತಿಯ ಉದ್ದಕ್ಕೂ ಕನ್ನಡ ಸಾಹಿತ್ಯ ಸಂಸ್ಕøತಿ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ಮಂಡ್ಯ ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯದ ಎಲ್ಲಾ ಭಾಗಗಳಲ್ಲೂ ಭಾಗವಹಿಸುತ್ತಾ, ಕೆಲಸ ಮಾಡುತ್ತಿದ್ದೇನೆ. ಪ್ರಸ್ತುತ ಕರ್ನಾಟಕ ಸಂಘದ ಅಧ್ಯಕ್ಷನಾಗಿ ಅದೊಂದು ಪೂರ್ಣಾವಧಿಯ ಸಂಸ್ಥೆಯಾಗಿ ರೂಪುಗೊಳ್ಳುವುದರಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದೇನೆ.

ರಾಜ್ಯದ ವಿವಿಧ ಸಂಘಟನೆಗಳ ಅಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ರಾಜ್ಯ ಮಟ್ಟದ ಸರ್ಕಾರದ ವಿವಿಧ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯನಾಗಿ ಕೆಲಸ ನಿರ್ವಹಿಸಿದ ಅನುಭವವಿದ್ದು, ಇದನ್ನು ಗಮನಿಸಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ನೀಡಿದೆ. ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವುದಲ್ಲದೇ ಮಂಡ್ಯದಲ್ಲಿ ಸುಮಾರು 20ಕ್ಕೂ ಮಿಕ್ಕಿ ಪ್ರಶಸ್ತಿಗಳನ್ನು ಸ್ಥಾಪಿಸಿ ನಾಡಿನ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರಿಗೆ ಪ್ರಶಸ್ತಿಯನ್ನು ನೀಡಿ ಸನ್ಮಾಸಿಸುತ್ತಾ ಬರಲಾಗಿದೆ. ಈ ಎಲ್ಲಾ ಹಿನ್ನೆಲೆಗಳನ್ನು ಮುಂದಿಟ್ಟುಕೊಂಡು ಕಳೆದ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಚುನಾವಣೆಗೆ ನಿಂತಿದ್ದು, ಹಲವು ಕಾರಣಗಳಿಂದ ಸೋಲನ್ನು ಅನುಭವಿಸಬೇಕಾಯಿತು. ಹೀಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಈ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಆಯ್ಕೆಯಾದರೆ ನಾಡು-ನುಡಿಯ ಸಂಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ಇಚ್ಛೆ ಇದೆ ಎಂದರು.
ಅಧ್ಯಕ್ಷನಾಗಿ ಆಯ್ಕೆಯಾದರೆ ಪರಿಷತ್ತಿನ ಉಪಯುಕ್ತವಾದ ಚಟುವಟಿಕೆಗಳನ್ನು ಮುಂದುವರೆಸುವ ಜೊತೆಗೆ ವಾರ್ಷಿಕ ಸಮ್ಮೇಳನದಲ್ಲಿ ಆಗುವ ತೊಂದರೆಗಳನ್ನು ನಿವಾರಿಸಲು ಪ್ರಯತ್ನಿಸುತ್ತೇನೆ ಎಂದ ಅವರು, ಸಂಖ್ಯೆಯಲ್ಲಿ ಕಡಿಮೆಯಾದರೂ ಮೌಲಿಕ ಕೃತಿಗಳನ್ನು ಹೊರ ತರಲು ಶ್ರಮಿಸುತ್ತೇನೆ. ಹಿರಿಯ ಮತ್ತು ಪ್ರಾಚೀನ ಕವಿಗಳನ್ನು ಆಧುನಿಕ ಯುವ ಲೇಖಕರಿಗೆ ಮುಖಾಮುಖಿಯಾಗಿಸುತ್ತಾ ಅವರ ನಿಲುವುಗಳನ್ನು ಪ್ರಚುರ ಪಡಿಸಲಾಗುವುದು ಹಾಗೂ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ಮತ್ತಷ್ಟು ಕ್ರಿಯಾಶಾಲಿಯಾಗಿ ಮಾಡುವುದರ ಮೂಲಕ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗದರ್ಶಕ ಹಾಗೂ ಪ್ರೇರಕ ಸಂಸ್ಥೆಯಾಗಿ ಕೆಲಸ ಮಾಡುವಂತಾಗಲು ಪ್ರಯತ್ನಿಸುತ್ತೇನೆ.

ಸುಮಾರು 2 ಲಕ್ಷಕ್ಕೂ ಹೆಚ್ಚು ಸದಸ್ಯರಿರುವ ಕರ್ನಾಟಕದ ಏಕೈಕ ಕನ್ನಡಿಗರ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ನೆಲ, ಜಲ, ಭಾಷೆಗೆ ಅಪಾಯ ಒದಗಿದಾಗ ಬಹುದೊಡ್ಡ ಪ್ರತಿಭಟನೆಯನ್ನು ಸಲ್ಲಿಸುವ ಪರಿವರ್ತನೆಯನ್ನು ತರುವ ಧೀಶಕ್ತಿಯಾಗಿ ಕೆಲಸ ಮಾಡುವಂತೆ ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಕಳೆದ 40 ವರ್ಷಗಳಿಂದ ಕನ್ನಡಕ್ಕಾಗಿ ಕೆಲಸ ಮಾಡಿರುವ ಅನುಭವದ ಕಾರಣದಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸಮರ್ಥವಾಗಿ ಮುನ್ನಡೆಸ ಬಲ್ಲೆ ಎಂಬ ಆತ್ಮ ವಿಶ್ವಾಸದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಈ ವೇಳೆ ಬೆಂಗಳೂರಿನ ದಯಾನಂದ ಕಟ್ಟೆ, ಮಂಡ್ಯದ ಸೋಮಶೇಖರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here