ಪೌರಕಾರ್ಮಿಕರಿಗೆ ಕನಿಷ್ಟ ವೇತನ, ಅಗತ್ಯ ಸೌಲಭ್ಯ ಖಾತ್ರಿಪಡಿಸದಿದ್ದರೆ ಕ್ರಮ: ನಾರಾಯಣ

0
29
loading...

20-kwrjpg3ಕಾರವಾರ,21 : ಜಿಲ್ಲೆಯ ಎಲ್ಲಾ ನಗರಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಟ ವೇತನ, ಇಎಸ್‍ಐ ಸೌಲಭ್ಯ, ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ನಾರಾಯಣ ಅವರು ಹೇಳಿದರು.

ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೌರಕಾರ್ಮಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಪರಿಶೀಲನಾ ಸಭೆ ನಡೆಸಿದರು. ಉತ್ತರಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ 252ಮಂದಿ ಖಾಯಂ ಹಾಗೂ 208ಮಂದಿ ಹೊರಗುತ್ತಿಗೆ ಆಧಾರದ ಪೌರಕಾರ್ಮಿಕರಿದ್ದಾರೆ. ಯಲ್ಲಾಪುರ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಕನಿಷ್ಟ ವೇತನ ನೀಡುತ್ತಿಲ್ಲ. ಗುತ್ತಿಗೆದಾರರು ಸರಿಯಾಗಿ ವೇತನ ನೀಡದೆ, ಕಾರ್ಮಿಕರ ಪಾಲಿನ ಭವಿಷ್ಯ ನಿಧಿಯನ್ನು ಸರಿಯಾಗಿ ತುಂಬದೆ ಇರುವ ಪ್ರಕರಣಗಳಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಒಂದು ತಿಂಗಳ ಒಳಗಾಗಿ ಈ ಎಲ್ಲಾ ನ್ಯೂನತೆಗಳನ್ನು ಸರಿಪಡಿಸಿ ಎಲ್ಲಾ ಹಳೆಯ ಬಾಕಿಗಳನ್ನು ಪೌರಕಾರ್ಮಿಕರಿಗೆ ಚುಕ್ತಾ ಮಾಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಪೌರಕಾರ್ಮಿಕರಿಗೆ ನಗರ, ಪಟ್ಟಣ ವ್ಯಾಪ್ತಿಯಲ್ಲಿ ವಾಸಕ್ಕೆ ಮನೆಗಳನ್ನು ನಿರ್ಮಿಸಬೇಕು. ಇದಕ್ಕಾಗಿ ಸೂಕ್ತ ನಿವೇಶನವನ್ನು ಆದ್ಯತೆ ಮೇರೆಗೆ ಗುರುತಿಸಬೇಕು. ಕಾರವಾರ ನಗರ ವ್ಯಾಪ್ತಿಯಲ್ಲಿ ನಿವೇಶನಗಳ ಕೊರತೆಯಿರುವುದರಿಂದ ಬಹುಮಹಡಿ ನಿವಾಸಗಳನ್ನು ನಿರ್ಮಿಸುವ ಜಿಲ್ಲಾಡಳಿತದ ಪ್ರಸ್ತಾವನೆಯನ್ನು ಆದಷ್ಟು ಬೇಗನೆ ಕಾರ್ಯಗತಗೊಳಿಸಬೇಕು. ಪೌರಕಾರ್ಮಿಕರಿಗೆ ಕರ್ತವ್ಯ ನಿರ್ವಹಿಸಲು ಅಗತ್ಯ ಶೂ, ಕೈಗವಸು, ಮಾಸ್ಕ್ ಇತ್ಯಾದಿಗಳನ್ನು ನೀಡದಿರುವುದು ಆಯೋಗದ ಗಮನಕ್ಕೆ ಬಂದಿದೆ. ಕರ್ತವ್ಯ ನಿರ್ವಹಿಸಲು ಅಗತ್ಯ ವಸ್ತುಗಳು, ಗುರುತಿನ ಚೀಟಿ ಸೇರಿದಂತೆ ಸರ್ಕಾರದಿಂದ ಮಂಜೂರಾಗಿರುವ ಎಲ್ಲಾ ಸೌಲಭ್ಯಗಳನ್ನು ತಕ್ಷಣ ಒದಗಿಸಬೇಕು ಎಂದು ಸೂಚನೆ ನೀಡಿದರು.

ಪೌರಕಾರ್ಮಿಕರು ಸರ್ಕಾರಿ ರಜಾ ದಿನ ಕಾರ್ಯ ನಿರ್ವಹಿಸಿದರೆ ದುಪ್ಪಟ್ಟು ವೇತನ ನೀಡಬೇಕಾಗಿದೆ. ಕರ್ತವ್ಯ ನಿರ್ವಹಿಸುವ ಪೂರ್ವದಲ್ಲಿ ಬೆಳಗ್ಗಿನ ಉಪಾಹಾರ ಒದಗಿಸಬೇಕಾಗಿದ್ದು, ಇದಕ್ಕಾಗಿ 30ರೂ ನಿಗದಿಪಡಿಸಲಾಗಿದೆ. ಇದನ್ನು ಜಿಲ್ಲೆಯಲ್ಲಿ ನೀಡುತ್ತಿಲ್ಲ. ಈ ಮೊತ್ತವನ್ನು ನೀಡುವ ಬದಲು ಕಡ್ಡಾಯವಾಗಿ ಉಪಾಹಾರ ನೀಡಲು ವ್ಯವಸ್ಥೆ ಮಾಡಬೇಕು. ಗುತ್ತಿಗೆ ಆಧಾರಿತ ಪೌರಕಾರ್ಮಿಕರ ಆರೋಗ್ಯ ತಪಾಸಣೆಯನ್ನು ವರ್ಷಕ್ಕೆ ಕನಿಷ್ಟ ಎರಡು ಬಾರಿ ನಡೆಸಬೇಕು. ಈ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಎಲ್ಲಾ ರೀತಿಯ ತಪಾಸಣೆಗಳನ್ನು ನಡೆಸಬೇಕು. ಗುತ್ತಿಗೆ ಪೌರಕಾರ್ಮಿಕರನ್ನು ಸಹ ಇಎಸ್‍ಯ ವ್ಯಾಪ್ತಿಗೆ ತರಲಾಗಿದ್ದು, ಇಎಸ್‍ಐ ವೈದ್ಯಕೀಯ ಸೌಲಭ್ಯ ಪಡೆಯಬಹುದಾಗಿದೆ. ಇದಕ್ಕಾಗಿ ಇಎಸ್‍ಐ ಕಾರ್ಡ್‍ಗಳನ್ನು ಎಲ್ಲರಿಗೂ ಒದಗಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಪ್ರಸಾದ್ ಮನೋಹರ್, ಆಯೋಗದ ಸದಸ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here