ಬುಡಕಟ್ಟುಗಳ ಜನಪದ ಸೊಗಡಿನ ಖಾಪ್ರಿ ಜಾತ್ರೆ

0
34
loading...

24 joida news (2)ಜೋಯಿಡಾ 24:- ಬುಡಕಟ್ಟುಗಳ ಸಂಸ್ಕ್ರತಿಯ ನಾಡು ಜೋಯಿಡಾ ತಾಲೂಕಿನ ಗಾವಡೆವಾಡಾದಲ್ಲಿ ನಡೆಯುವ ಖಾಪ್ರಿ ಜಾತ್ರೆ ಜನಪದ ಸೊಗಡಿನ ಒಂದು ವಿಶಿಷ್ಟ ಸಾಂಪ್ರದಾಯಿಕ ಜಾತ್ರೆಯಾಗಿದ್ದು ಇದು ಮಂಗಳವಾರ ಜೋಯಿಡಾದ ಗಾವಡೆವಾಡಾದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಶತಶತಮಾನಗಳಿಂದಲ್ಲೂ ಇಲ್ಲಿನ ಬುಡಕಟ್ಟುಗಳು ಖಾಪ್ರಿ ಹಾಗೂ ಜನ್ಮಿ ಎಂಬ ಇಬ್ಬರು ದೇವರನ್ನು ಆರಾಧಿಸುತ್ತಾ ಬಂದವರಾಗಿದ್ದು, ಯಾವತ್ತೂ ಸಂಕಷ್ಟಕ್ಕೆ ಧಾವಿಸಿ ಬರುವ,ಬೇಡಿಕೆಯನ್ನು ಈಡೇರಿಸುವ ಈ ಆರಾಧ್ಯದೈವ ಅವರ ಹಿರಿಯರ ಆತ್ಮ ಎಂದು ನಂಬಲಾಗುತ್ತಿದೆ.
ತುಳಸಿ ಮದುವೆಯ ಮುನ್ನಾದಿನ ದ್ವಾದಶಿಯಂದು ಪ್ರತಿ ವರ್ಷ ನಡೆಯುವ ಈ ಜಾತ್ರೆಯ ಮೊದಲ ದಿನ ರಾತ್ರಿ ಜಾಗರಣೆ ಮಾಡಲಾಗುತ್ತಿದ್ದು, ಇದರ ನಿಮಿತ್ತ ಪೌರಾಣಿಕ ನಾಟಕಗಳನ್ನು ಬುಡಕಟ್ಟುಗಳ ಶೈಲಿಯಲ್ಲಿಯೇ ನಡೆಸುತ್ತಿರುವುದು ವಿಶೇಷ.
ಜಾತ್ರೆಯ ದಿನ ದೇವರನ್ನು ತುಳಸಿ ಮಂಟಪಕ್ಕೆ ಕರೆತರುವ ಪದ್ದತಿ ಇದೆ. ಗ್ರಾಮದ ಪ್ರಮುಖರಲ್ಲಿ ಇಬ್ಬರು ಅಂದು ಸಂಪ್ರದಾಯದಂತೆ ಉಪವಾಸವಿದ್ದು, ದೇಹದತುಂಬ ಕಂಬಳಿಯಿಂದ ಸುತ್ತಿಕೊಂಡು, ಮೈತುಂಬ ಗೊಂಡೆ ಹೂವಿನ ಹಾರ ಹಾಕಿಕೊಂಡು ಬುಧವಂತನ ಮನೆಯ ತುಳಸಿ ಕಟ್ಟೆಗೆ ಬಂದು ಭಕ್ತಾದಿಗಳು ಹಾಡುವ ಜನಪದ ಹಾಡಿಗೆ ತಾಳಹಾಕುತ್ತಾ,ತುಳಸಿಕಟ್ಟೆಯನ್ನು ಸುತ್ತುವ ಸಂಪ್ರದಾಯ ಈಗಲೂ ನಡೆಯುತ್ತಿದೆ.
[highlight]ಜನಪದ ಹಾಡಿನ ವಿಶೇಷ[/highlight]: ಜಾತ್ರೆಯ ಮೊದಲ ಜಾಗರಣೆಯ ದಿನದಂದು ಮಧ್ಯರಾತ್ರಿಯಿಂದಲ್ಲೇ ಊರಿನ ಬುದುವಂತ( ಗ್ರಾಮದ ಪ್ರಮುಖ)ನ ಮನೆಯ ಎದುರಿನ ತುಳಸಿ ಕಟ್ಟೆಯ ಸುತ್ತ ಸುತ್ತುತ್ತಾ ಬುಡಕಟ್ಟುಗಳ ಭಾಷೆಯ ಸೊಂಗಾ(ಜನಪದ ಶೈಲಿಯ ಹಾಡು) ಹಾಡುಗಳನ್ನು ಹಾಡಲಾಗುತ್ತದೆ. ದೇವರು ಕಾಡಿನ ವಾಸಿಯಾಗಿದ್ದು, ಆತನನ್ನು ಅಂದು ಜಾತ್ರೆಗೆ ಊರಿನ ತುಳಸಿ ಮಂಟಪಕ್ಕೆ ಕರೆಯುವ ಸಾಂಪ್ರದಾಯಿಕ ಪದ್ದತಿ ಇದರಲ್ಲಿ ಅಡಗಿದೆ. ಜಾಗರಣಾ ರಾತ್ರಿಯಂದು ಊರಿನ ಎಲ್ಲರೂ ಈ ಹಾಡಿನ ಮೂಲಕ ದೇವರನ್ನು ಸ್ಥುತಿಸುತ್ತಿದ್ದು, ಇದಾದನಂತರ ಬೆಳಗಾಗುವವರೆಗೂ ನಾಟಕ ನಡೆಯುತ್ತಿರುತ್ತದೆ. ಇದು ಪ್ರತಿವರ್ಷವೂ ನಡೆಸುವ ಸಂಪ್ರದಾಯವಾಗಿದ್ದು, ಸುತ್ತಮುತ್ತನ ಗ್ರಾಮಸ್ಥರು ಈ ಜಾಗರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
[highlight]ದೇವರಿಗೆ ನಿಂದನೆ:- [/highlight]ಜನಪದ ಶೈಲಿಯ ಬುಡಕಟ್ಟುಗಳ ಈ ಹಾಡಿನಲ್ಲಿ ದೇವರನ್ನು ನಿಂದಿಸುವ,ಬೈಯುವ ಮೂಲಕ ಆರಾಧನೆ ಮಾಡುವ ವಿಶೇಷತೆ ಇಲ್ಲಿ ಅಡಗಿದೆ. ದೇವರನ್ನು ಮನೆಯ ಸದಸ್ಯನಂತೆಯೂ, ಪಾಲಕನಂತೆಯೂ ಚಿತ್ರಿಸುವ, ಶ್ರೀಮಂತರನ್ನು ಅಣಕಿಸುವ ಈ ಜನಪದ ಹಾಡಿನ ಶೈಲಿ ವಿಚಿತ್ರವಾಗಿದ್ದರೂ, ನಿಜಕ್ಕು ದೇವರ ಮೇಲಿನ ಪ್ರೀತಿ,ಗೌರವದ ನಡೆ ಇವರ ಸಂಪ್ರದಾಯದಲ್ಲಿ ಕಾಣುತ್ತಿರುವುದು ವಿಶೇಷ.
ಹೊಲಕಾಯುವ ದೇವರು:- ಜಾತ್ರೆಯ ಮೊದಲ ಜಾಗರಣೆಯ ರಾತ್ರಿಯಂದು ಯಾರೂ ಹೊಲಕಾಯಲು ಹೋಗುವಂತಿಲ್ಲ ಎನ್ನುವ ಸಂಪ್ರದಾಯ ಹಿಂದಿನಿಂದಲ್ಲೂ ಇದೆ. ಅಂದು ರಾತ್ರಿ ದೇವರು ನಮ್ಮ ಹೊಲಗಳನ್ನು ಕಾಯುತ್ತಾನೆ, ನಮ್ಮಬೆಳೆಗಳಿಗೆ ಯಾವುದೆ ಪ್ರಾಣಿಗಳ ಕಾಟ ಇರಲಾರದೆನ್ನುವ ಪ್ರತೀತಿ ಇದೆ. ಇದನ್ನು ಪರೀಕ್ಷಿಸಲು ಹೋದವರು ಭಯದಿಂದ ಹೊಲಬಿಟ್ಟು ಓಡಿಬಂದ ಉದಾಹರಣೆಗಳು ಕೂಡಾ ಇದೆ. ಕಾಕತಾಳಿಯ ವೆಂಬಂತೆ ಅಂದು ಬೆಳೆಗೆ ಯಾವುದೆ ಪ್ರಾಣಿಗಳ ಕಾಟವೂ ಇರಲಾರದು. ಇದು ಒಂದೆರಡು ವರ್ಷದ ಅನುಭವವಾಗಿರದೆ ಶತಮಾನಗಳ ಇತಿಹಾಸ ಕಂಡ ಅನೇಕ ಹಿರಯರ ಮಾತಾಗಿದೆ.
[highlight]ಕಂಬಳಿ, ಚುಟ್ಟ ಪ್ರೀಯ:[/highlight]- ಖಾಪ್ರಿ ದೇವರು ಕಂಬಳಿ ಹಾಗೂ ಚುಟ್ಟ ಪ್ರೀಯನಾಗಿದ್ದು, ಜಾಗರಣೆಯ ರಾತ್ರಿ ಹೊಲದ ಮಾಲಿಕರು ತಮ್ಮ ಹೊಲದ ಮಾಳದಲ್ಲಿ(ಹೊಲಕಾಯಲು ಕಟ್ಟಿದ ಅಟ್ಟಣಿಗೆ ಮನೆ) ಖಾಪ್ರಿದೇವರಿಗೆಂದು ಚುಟ್ಟವನ್ನು ಇಟ್ಟು ಬರುವ ಪ್ರತೀತಿ ಈಗಲು ಇದೆ. ಜಾತ್ರೆಯಂದು ದೇವರಿಗೆ ಭಕ್ತಿಯಿಂದ ಕಂಬಳಿಯನ್ನು ನೀಡುವ ಸಂಪ್ರದಾಯ ಇದೆ. ದೇವರು ಕಾಡಿನ ವಾಸಿಯಾಗಿದ್ದು, ಮಳೆ, ಚಳಿಗಾಗಿ ಅವನು ಕಂಬಳಿಯನ್ನೆ ಹೊದಿಕೆಯನ್ನಾಗಿ ಮಾಡಿಕೊಂಡಿರುತ್ತಾನೆಂದು ನಂಬಿದ ಬುಡಕಟ್ಟುಗಳು ಆತನ ಮೇಲಿನ ಭಕ್ತಿಗಾಗಿ ಕಂಬಳಿಯನ್ನೆ ಹರಕೆಯಾಗಿ ನೀಡುತ್ತಾರೆ.
ಈ ಜಾತ್ರೆಗೆ ರಾಜ್ಯದ ವಿವಿದೆಡೆಗಳಿಂದ ಹಾಗೂ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯದಿಂದಲ್ಲೂ ಸಾವಿರಾರು ಭಕ್ತಾದಿಗಳು ಬರುತ್ತಿದ್ದು, ಈ ಜಾತ್ರೆ ಜೋಯಿಡಾ ತಾಲೂಕಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾಗಿದೆ.

loading...

LEAVE A REPLY

Please enter your comment!
Please enter your name here