ವೇದಾಂತ ಸಾಮ್ರಾಜ್ಯದ ಧೃವ ತಾರೆ ಸತ್ಯಪ್ರಮೋದ ತೀರ್ಥರು

0
90
loading...

HH Swamiji
. ವಿಷ್ಣು ಕುಲಕರ್ಣಿ
ಹರಿ ಸರ್ವೋತ್ತಮತ್ವವನ್ನು ಹಾಗೂ ಮಧ್ವ ಸಿದ್ಧಾಂತವನ್ನು ಆಶೇತು ಹಿಮಾಚಲ ಪರ್ವತ ವರೆಗೆ ಪ್ರಚಾರ ಪಡಿಸಿದ ಕೀರ್ತಿ ಅಭಿನವ ಸತ್ಯಧ್ಯಾನರಾದ ಶ್ರೀ ಶ್ರೀ 1008 ಶ್ರೀ ಸತ್ಯಪ್ರಮೋದತೀರ್ಥ ಶ್ರೀಪಾದಂಗಳವರಿಗೆ ಸಲ್ಲುತ್ತದೆ. ಶ್ರೀ ಸತ್ಯಪ್ರಮೋದರು ಅಖಂಡ 5 ದಶಕಗಳ ಕಾಲ ಬ್ರಹ್ಮಕರಾರ್ಚಿತ ಶ್ರೀ ಮೂಲ ಸೀತಾ ರಾಮಚಂದ್ರ ದೇವರನ್ನು ಪೂಜಿಸಿ ಮಹಾನ ಯೋಗಿಗಳಾಗಿ ವೇದಾಂತ ಸಾಮ್ರಾಜ್ಯದ ಧೃವ ತಾರೆಯಾಗಿ ಮೆರೆದರು.
ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರು ಶಾಲಿವಾಹನ ಶಕೆ 1840(ಕ್ರಿ.ಶ. 1918)ನೇಯ ಕಾಳಯುಕ್ತಿ ನಾಮ ಸಂವತ್ಸರ, ಭಾದ್ರಪದ ವದ್ಯ ಪಂಚಮಿ, ಕೃತ್ತಿಕಾ ನಕ್ಷತ್ರದ ಶುಭ ಮುಹೂರ್ತದಲ್ಲಿ ಜನಿಸಿದರು. ಶ್ರೀಗಳ ಪೂವ್ರಾಶ್ರಮದ ಹೆಸರು ಗುರುರಾಜಾಚಾರ್ಯ ಗುತ್ತಲ. ಗುರುರಾಜಾಚಾರ್ಯರು ತಮ್ಮ ತಂದೆಯವರು ತೀರಿಕೊಂಡ ನಂತರ ಧಾರವಾಡ ನಗರಕ್ಕೆ ಬಂದು ಅಲ್ಲಿ ಕ್ರೀಯಾಕರ್ಮಗಳನ್ನು ಮುಗಿಸಿಕೊಂಡು ಏಕಾಂಗಿಯಾಗಿ ಉನ್ನತ ವ್ಯಾಸಂಗಕ್ಕೆ ಮೈಸೂರಿಗೆ ತೆರಳಿದರು. ನಿತ್ಯ ಊಟಕ್ಕಾಗಿ ವಾರಾನ್ನ ಹಚ್ಚಿಕೊಂಡು ವಿದ್ಯಾಭ್ಯಾಸದಲ್ಲಿ ತಲ್ಲೀನರಾದರು.

ಈ ಶುಚಿರ್ಭೂತ ಬ್ರಾಹ್ಮಣನನ್ನು ಕಂಡು ಮೈಸೂರಿನ ಜನತೆ ಗುರುರಾಜಾಚಾರ್ಯರಿಗೆ ಉಣ ಬಡಿಸಲು ನಾ ಮುಂದೆ ತಾ ಮುಂದೆ ಎನ್ನುತ್ತಿದ್ದರು. ವಾರನ್ನ ಉಂಡು ಗುರುಗಳ ಮನೆಯಲ್ಲಿ ವಾಸ ಮಾಡಿ ತರ್ಕಶಾಸ್ತ್ರ ಅಧ್ಯಯನ ಮಾಡಿದರು.
ಕುಸುನೂರಿನ ಪ್ರಸಿದ್ಧ ವಕೀಲರಾದ ಗೋವಿಂದಾಚಾರ್ಯ ಕಟ್ಟಿ ಅವರ ಮಗಳಾದ ಸೌಭಾಗ್ಯವತಿ ಕಾಂಕ್ಷಿಣಿ ಮಂದಾಕಿನಿಯವರೊಂದಿಗೆ ಗುರು-ಹಿರಿಯ ಸಮ್ಮುಖದಲ್ಲಿ ಮೈಸೂರಿನಲ್ಲಿ ವಿವಾಹವಾದರು.
ಗ್ರಹಸ್ಥಾಶ್ರಮ ಸ್ವಿಕರಿಸಿದ ನಂತರ ಋಷಿ ಮುನಿಗಳಂತೆ ಕಂಗೊಳಿಸ ತೊಡಗಿದರು. ಗುರುರಾಜಾಚಾರ್ಯರ ವಿದ್ವತ್ತು ಕೀರ್ತಿ ಎಲ್ಲಡೆ ಹರಿಯಿತು. ಈ ವಿಷಯ ಅಂದಿನ ಉತ್ತರಾದಿಮಠಾಧೀಶರಾದ ಶ್ರೀ ಸತ್ಯಪ್ರಜ್ಞತೀರ್ಥರ ಕಿವಿಗೆ ತಲುಪಿತು.
ಕೂಡಲೇ ಶ್ರೀಗಳು ಗುರುರಾಜಾಚಾರ್ಯರನ್ನು ಮೈಸೂರಿಗೆ ಕರೆಯಿಸಿಕೊಂಡು ತಮ್ಮ ಮಠದ ಸಂಸ್ಕøತ ಪಾಠಶಾಲೆಯ ಶಿಕ್ಷಕರನ್ನಾಗಿ ನೇಮಿಸಿದರು. ತದನಂತರ ಗುರುರಾಜಾಚಾರ್ಯರು ಮಠದ ವಿದ್ವಾಂಸರಾಗಿ ಗುರುತಿಸಿಕೊಂಡರೂ ಕೂಡ ತಮ್ಮ ಮೈಸೂರಿನ ಶ್ರೀಮಠದಲ್ಲಿ ಭೋಧನೆ ಮುಂದುವರೆಸಿದರು. ಮಧ್ವಸಿದ್ಧಾಂತವನ್ನು ಅಭ್ಯಾಸ ಮಾಡುವುದೇ ಅವರ ಧ್ಯೇಯ ವಾಕ್ಯವಾಯಿತು. ನಂತರ ಅವರನ್ನು ಶ್ರೀಗಳು ಮುಂಬೈ ಊರಿಗೆ ಕಳುಹಿಸಿಕೊಟ್ಟರು.
ಶ್ರೀ ಸತ್ಯಾಭಿಜ್ಞತೀರ್ಥರು ಸಂಚಾರ ಮಾಡುತ್ತಾ ರಾಣಿಬೆನ್ನೂರಿಗೆ ಆಗಮಿಸಿದರು. ಅವರಿಗೆ ತಮ್ಮ ಅಂತ್ಯಕಾಲ ಸಮೀಪವಾಗಿದೆ ಎಂದು ತಿಳಿದ ಮೇಲೆ ಶ್ರೀಹರಿಗೆ ಪ್ರಾರ್ಥಿಸಿ ನನ್ನ ಉತ್ತರಾಧಿಕಾರಿಯನ್ನು ನೇಮಿಸುವ ಹೊಣೆ ನಿನ್ನದು ಎಂದಾಗ ಒಂದು ದಿನ ಸ್ವಪ್ನದಲ್ಲಿ ಶ್ರೀ ವಾಯುದೇವರು ಬಂದು ಗುತ್ತಲ ಗುರುರಾಜಾಚಾರ್ಯರಿಂದ ಸೇವೆಯನ್ನು ಸೀತಾಪತೆ ಶ್ರೀಮನ್ಮೂಲರಾಮಚಂದ್ರ ದೇವರು ಅಪೇಕ್ಷಿಸುತ್ತಾರೆ ಎಂದು ಹೇಳಿ ಅದೃಶ್ಯರಾದರು. ಕೂಡಲೇ ಶ್ರೀಗಳು ದಿವಾನರಿಗೆ ಗುರುರಾಜಾಚಾರ್ಯರನ್ನು ಬರಹೇಳಲು ತಿಳಿಸಿದರು.
ಶ್ರೀಗಳ ಆಜ್ಞೆಯಂತೆ ಗುರುರಾಜಾಚಾರ್ಯರು ರಾಣಿಬೆನ್ನೂರಿಗೆ ಆಗಮಿಸಿದರು. ಅಂದು ಸೇರಿದ ಮಠದ ಪಂಡಿತರಾದ ಗಲಗಲಿಯ ಕೂರ್ಮಾಚಾರ್ಯರು, ಮಧ್ವಾಚಾರ್ಯರು, ವರಖೇಡ ನರಸಿಂಹಾಚಾರ್ಯರು, ಮಳಗಿ ವೇದವ್ಯಾಸಾಚಾರ್ಯರು, ಚಿಂಚೋಳಿ ಕೃಷ್ಣಾಚಾರ್ಯರು, ಪಾಂಡುರಂಗಿ ಗುರುರಾಜಾಚಾರ್ಯರು, ಗುತ್ತಲ ಹಯಗ್ರೀವಾಚಾರ್ಯರು, ಮಾಹುಲಿ ಗೋಪಾಲಾಚಾರ್ಯರು ಅಲ್ಲದೇ ಗಣ್ಯರು, ಮಾಮಲೇದಾರರು ಉಪಸ್ಥಿತರಿದ್ದು ಶ್ರೀಗಳ ನಿರ್ಧಾರವನ್ನು ಸ್ವಾಗತಿಸಿದರು.
ಗುರುರಾಜಾಚಾರ್ಯರು ಶ್ರೀಗಳ ಸನ್ನಿಧಾನಕ್ಕೆ ಆಗಮಿಸುತ್ತಿದ್ದಂತೆ ಶ್ರೀಗಳಿಂದ ಫಲಮಂತ್ರಾಕ್ಷತೆ ಪಡೆದು ಗುರುಗಳ ಆಜ್ಞೆಯನ್ನು ಶಿರಸಾ ವಹಿಸಿ ಒಪ್ಪಿಕೊಂಡು ಸರ್ವಜೀತ ನಾಮ ಸಂವತ್ಸರದ ಪುಷ್ಯವದ್ಯ ಅಷ್ಟಮಿ ದಿನಾಂಕ 02-02-1948 ರಂದು ಶ್ರೀಹಂಸನಾಮಕ ಪರಮಾತ್ಮನ ಪೀಠವನ್ನು ಅಲಂಕರಿಸಿದರು. ನಂತರ ಶ್ರೀ ಸತ್ಯಾಭಿಜ್ಞತೀರ್ಥರು ಗುರುರಾಜಾಚಾರ್ಯರಿಗೆ “ಶ್ರೀ ಸತ್ಯಪ್ರಮೋದತೀರ್ಥರು” ಎಂದು ನಾಮಕರಣ ಮಾಡಿದರು. ಶ್ರೀಗಳ ಪ್ರಥಮ ಚಾತುರ್ಮಾಸ್ಯವು ವರದಾ ನದಿ ತೀರದ ಅನವಟ್ಟಿ ಗ್ರಾಮದಲ್ಲಿ ನೆರವೇರಿತು. ಶ್ರೀ ಸತ್ಯಪ್ರಮೋದ ತೀರ್ಥರು ಚಾತುರ್ಮಾಸ್ಯ ಸಂಕಲ್ಪ ಮಾಡಿ ಶ್ರೀಮನ್ಯಾಯಸುಧಾ ಪಾಠಕ್ಕೆ ನಾಂದಿ ಹಾಡಿದರು.
ನಂತರ ನಾಡಿನ ಉದ್ದಗಲಕ್ಕೂ ಹಾಗೂ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಾದ್ಯಂತ ಸಂಚರಿಸಿ ಹರಿಸರ್ವೋತ್ತಮತ್ವವನ್ನು ಕೊಂಡಾಡಿದರು ಅಲ್ಲದೇ ಮಧ್ವಸಿದ್ಧಾಂತವನ್ನು ಸಾರಿ ಸಾರಿ ಹೇಳಿದರು.
ಶ್ರೀ ಮನ್ಯಾಯಸುಧಾ ಮಂಡನಮ್, ಶ್ರೀ ವಿಜಯೀಂದ್ರ ವಿಜಯ ವೈಭವ, ಯುಕ್ತಿ ಮಲ್ಲಿಕಾ ವ್ಯಾಖ್ಯಾನ, ವಾಯುಸ್ತುತಿ ಮಂಡನಮ್, ವೈಷ್ಣವ ಸಿದ್ಧಾಂತಾರ್ಜವಮ್, ಭಾಗವತ ನಿರ್ದೋಶತ್ವ ಲಕ್ಷಣಃ ಇವು ಅವರು ರಚಿಸಿರುವ ಗ್ರಂಥಗಳು.
ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರು ದಿನಾಂಕ 24-04-1996 ರಂದು ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿ ನಂತರ ದಿನಾಂಕ 03-11-1997 ರಂದು ತಮಿಳುನಾಡಿನ ತಿರುಕೊಯಿಳೂರಿನ ಶ್ರೀ ರಘೋತ್ತಮ ತೀರ್ಥರ ಸನ್ನಿಧಾನದಲ್ಲಿ ವೃಂದಾವನಸ್ಥರಾದರು.

loading...

LEAVE A REPLY

Please enter your comment!
Please enter your name here