ಇಂದಿನ ಮಕ್ಕಳೆ ನಾಳಿನ ನಾಯಕರು: ಡಾ.ಜಹಾಂಗೀರ ಹಾರೊಗೇರಿ

0
38
loading...

ಮುಂಡರಗಿ,4: ಇಂದಿನ ಮಕ್ಕಳೆ ನಾಳಿನ ನಾಯಕರು ಎಂದು ಅರಿತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಕ್ಕಳ ಆರೋಗ್ಯ ಕುರಿತಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಶಾಲೆಯಲ್ಲಿ ನೀಡುವ ಹಳದಿ ಕಾರ್ಡ ಹೊಂದಿರುವ ಎಲ್ಲ ಮಕ್ಕಳ ಆರೋಗ್ಯವನ್ನು ಸರಕಾರವೆ ನೋಡಿಕೊಳ್ಳುತ್ತದೆ ಎಂದು ರಾಷ್ಟ್ರೀಯ ಬಾಲ ಸ್ವಸ್ಥ ಕಾರ್ಯಕ್ರಮಾಧಿಕಾರಿ ಡಾ.ಜಹಾಂಗೀರ ಹಾರೊಗೇರಿ ಹೇಳಿದರು.
ಸಾರ್ವಜನಿಕ ಆಸ್ಪತ್ರೆಯು ಸ್ಥಳೀಯ ಎಸ್.ಎಂ.ಭೂಮರಡ್ಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಬಾಲ ಸ್ವಸ್ಥ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಬಡ ಹಾಗೂ ಮಧ್ಯಮ ವರ್ಗದ ಪಾಲಕರು ತುಂಬಾ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯು ಶಾಲಾ ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಪಾಲಕರು ಅವುಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆಗಳನ್ನು ಅಲಕ್ಷಿಸದೆ ಪಾಲಕರು ತಕ್ಷಣ ಹತ್ತಿರದ ಆಸ್ಪತ್ರೆಯ ವೈದ್ಯರನ್ನು ಅಥವಾ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಬೇಕು. ಕಾಯಿಲೆ ಚಿಕ್ಕದಿರುವಾಗ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಕ್ಕಳನ್ನು ಪ್ರಾಣಾಪಾಯದಿಂದ ತಪ್ಪಿಸಬಹುದಾಗಿದೆ. ಈ ಕುರಿತು ಶಿಕ್ಷಕರು ಮಕ್ಕಳಿಗೆ ಹಾಗೂ ಪಾಲಕರಿಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಡಾ.ನಂದಾ ಶಾಸ್ತ್ರಿ ಮಾತನಾಡಿ, ಹೆಣ್ಣು ಮಕ್ಕಳ ದೇಹ ಪ್ರಕೃತಿಯು ಗಂಡು ಮಕ್ಕಳ ದೇಹ ಪ್ರಕೃತಿಗಿಂತ ತುಂಬಾ ಭಿನ್ನವಾಗಿರುತ್ತದೆ. ದೇಹದಲ್ಲಿ ಕಂಡು ಬರುವ ಬದಲಾವಣೆಗಳನ್ನು ಯಾವುದೆ ಮುಜುಗರವಿಲ್ಲದೆ ಶಿಕ್ಷಕಿಯರಲ್ಲಿ ತಿಳಿಸಬೇಕು. ಯಾವುದನ್ನು ಮುಚ್ಚಿಟ್ಟುಕೊಳ್ಳದೆ ತಾಯಿ ಅಥವಾ ಶಿಕ್ಷಕಿಯರಲ್ಲಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯೋಪಾಧ್ಯಾಯ ಎಂ.ಬಿ.ಕನ್ಯಾಳ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಎಸ್.ಆರ್.ಹಿರೇಮಠ, ಜಿ.ಎಲ್.ಹೊಸೂರ, ಎಸ್.ಕೆ.ತಟ್ಟಿ, ಎಸ್.ಎಸ್.ಬೆಟಗೇರಿ, ಆರ್.ಎಸ್.ಚವಡಿ, ಪಿ.ಎಸ್.ಬದನೇಕಾಯಿ ಮೊದಲಾವರು ಹಾಜರಿದ್ದರು. ನಂತರ ವೈದ್ಯರ ತಂಡವು ಶಾಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.

loading...

LEAVE A REPLY

Please enter your comment!
Please enter your name here