ಗುಡಿಕೈಗಾರಿಕೆ ತರಬೇತಿ ಶಿಬಿರ

0
41
loading...

2 SDP 4ಸಿದ್ದಾಪುರ,3: ಕಸೂತಿ, ನೇಯ್ಗೆ, ಹೆಣಿಗೆಯಂತಹ ಸಾಂಪ್ರದಾಯಿಕ ಗುಡಿಕೈಗಾರಿಕೆ ಮತ್ತೂ ಪೇಪರ್ ಕ್ರಾಪ್ಟ್‍ನಂತಹ ಕರಕುಶಲ ಕಲೆಗಳತ್ತ ಹೊಸ ತಲೆಮಾರು ಆಕರ್ಷಿತವಾಗುತ್ತಿದೆ. ಸಾಂಪ್ರದಾಯಿಕ ಕಲೆಗೆ ವಾಣಿಜ್ಯ ಲೋಕದ ಬಾಗಿಲು ತೆರೆದಿರುವುದು ಮತ್ತು ಅಭಿವ್ಯಕ್ತಿಗೆ ಹೊಸತನ ಬಂದಿರುವದು ಈ ಆಕರ್ಷಣೆಗೆ ಕಾರಣವಾಗಿದೆ. ಶಿರಸಿಯ ‘ಪ್ರಕೃತಿ’ ಸಂಸ್ಥೆ ಆಸಕ್ತರಿಗೆ ಉಚಿತ ತರಬೇತಿ ನೀಡುವ ಮೂಲಕ ಹೊಸ ತಲೆಮಾರನ್ನು ಗುಡಿಕೈಗಾರಿಕೆಯತ್ತ ಸೆಳೆಯುತ್ತಿದೆ.

ಇತ್ತೀಚೆಗೆ ತಾಲೂಕಿನ ಕೋಡ್ಸರದಲ್ಲಿ ಎರಡು ದಿನದ ನಾರು-ನೇಯ್ಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಧ್ಯಮದ ಪ್ರತಿನಿಧಿಯಾದ ಶೈಲಜಾ ಗೋರ್ನಮನೆ ನೇರವೆರಿಸಿದರು.
ಚೇತನ ಸಂಸ್ಥೆಯ ಸಹಯೋಗದಲ್ಲಿ ಬಾಳೆನಾರಿನಿಂದ ವಸ್ತುಗಳನ್ನು ತಯಾರಿಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು. 86 ವರ್ಷದ ಮಂಜುನಾಥ ಹೆಗಡೆ ನಾರುನೇಯ್ಗೆಯ ಕುಶಲಕರ್ಮಿ. ಅವರ ಮಾರ್ಗದರ್ಶನದಲ್ಲಿ ವಿವಿಧ ತರಬೇತಿಯನ್ನು ನೀಡಲಾಯಿತು.
ಉತ್ತರಕನ್ನಡದ ಕಾಡುಗಳಲ್ಲಿ ಸಿಗುವ ನಾರು-ಬೇರುಗಳಿಂದ ಇಲ್ಲಿನ ಮೂಲ ನಿವಾಸಿಗಳು ಹಲವು ಬಗೆಯ ಕಲಾಕೃತಿಗಳನ್ನು ತಯಾರಿಸಿ ಬಳಸುತ್ತ ಬಂದಿದ್ದಾರೆ. ಕೂಗಲಬಳ್ಳಿಯೆಂಬ ಕಾಡುಜಾತಿಯ ಬಳ್ಳಿಯಿಂದ ಹೂವಿನ ಕುಕ್ಕೆ, ಸಾಂಬಾರ ಬಟ್ಟಲು, ತೂಗುವ ತೊಟ್ಟಿಲಿನಂತಹ ಗೃಹಬಳಕೆಯ ಸಾಂಪ್ರದಾಯಿಕ ವಸ್ತುವನ್ನು ತಯಾರಿಸುತ್ತಾರೆ. ಶತಮಾನಗಳು ಕಳೆದರೂ ಕಲಾಕೃತಿಗಳು ಹಾಳಾಗದಿರುವದು ಈ ವಸ್ತುಗಳ ವಿಶೇಷವಾಗಿದೆ. ಸಾಂಪ್ರದಾಯಿಕ ಕಲಾಕೃತಿಗಳನ್ನು ಇಂದಿನ ಅಗತ್ಯಕ್ಕೆ ಅನುಗುಣವಾಗಿ ಹ್ಯಾಟು, ಹೂದಾನಿ, ಟೀ ಮತ್ತು ಹಣ್ಣಿನ ಟ್ರೇ ಹೀಗೆ ಬೇರೆಬೇರೆ ರೂಪಗಳಲ್ಲಿ ತಯಾರಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಪೇಪರ್ ಕ್ರಾಫ್ಟ್ ಬಗ್ಗೆ ಅಂಜನಾ ಭಟ್ ತರಬೇತಿ ನೀಡಿದರು. ವಿವಿಧ ರೀತಿಯ ಹೂವುಗಳ ತಯಾರಿಕೆಯನ್ನು ಕ್ಷಣ ಮಾತ್ರದಲ್ಲಿ ತಯಾರಿಸುತ್ತಿದ್ದ ಅವರ ಕೈಚಳಕ ಗಮನ ಸೆಳೆಯಿತು. ಕಲಿಕಾಸಕ್ತರು ಕಲಿಸುತ್ತಿದ್ದನ್ನು ನೋಡಿ ಕಲಿಯುವುದೊಂದೆ ಅಲ್ಲ, ಮೊಬೈಲ್‍ನಲ್ಲಿ ದಾಖಲಿಸಿ ಮನನ ಮಾಡಿಕೊಳ್ಳುತ್ತಿದ್ದ ದೃಶ್ಯಗಮನ ಸೆಳೆಯುವಂತಿತ್ತು.
ಶಿಬಿರದಲ್ಲಿ ಕೋಡ್ಸರದ ಚಂದ್ರಶೇಖರ ಹೆಗಡೆ, ಅಂಜನಾ ಭಟ್, ಗಣಪತಿ ಹೆಗಡೆ, ಮಾದೇವಿ ಗೌಡ, ಮತ್ತು ಭವಾನಿ ಗೌಡ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು. 80 ಜನ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here