ಜಾನಪದ ಹಾಡು ಹಾಡುವುದರ ಮೂಲಕ ಕ-ಬಂ ಬೆಂಬಲ

0
69
loading...

 

ಬೈಲಹೊಂಗಲ 03: ಸುಳ್ಳು ಹೇಳಿದ್ರ, ಗೊಳ್ಳ ಆಡಿದರ ನಿಮನ್ಯಾರ ಬಿಡತಾರ ಅದು ಬ್ಯಾರೇನ ಐತಿ ಎಂದು ರಾಜಕಾರಣಿಗಳು ನಾಚುವಂತೆ ತನ್ನ ಮಧುರ ಕಂಠದಿಂದ ಹಾಡುಗಳನ್ನು ಹಾಡುವ ಮೂಲಕ ಗೋವನಕೊಪ್ಪ ಗ್ರಾಮದ ಹತ್ತು ವರ್ಷದ ಬಾಲಕಿ ಸೃಷ್ಠಿ ಫಕೀರಪ್ಪ ಹುಣಸಿಕಟ್ಟಿ ಹೋರಾಟದ ಕಾವು ಹೆಚ್ಚಿಸಿದಳು.
ಗುರುವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕಾ ಕಳಸಾ ಬಂಡೂರಿ, ಮಹದಾಯಿ ನದಿ ಜೋಡಣೆ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟ ಅವಧಿಯ ಧರಣಿ ಸತ್ಯಾಗ್ರಹದ 87 ನೇ ದಿನ ಗೋವನಕೊಪ್ಪ ಗ್ರಾಮಸ್ಥರು ನಡೆಸುತ್ತಿರುವ ಧರಣಿಯಲ್ಲಿ ತನ್ನ ಸಹೋದರ ಉದ್ದಪ್ಪನ ಜೊತೆಗೂಡಿ ಹಾಡಿನ ಬಂಡಿ ಕಟ್ಟುವ ಮೂಲಕ ಕೇಳುಗರನ್ನು ಮಂತ್ರಮುಗ್ಧ ಗೊಳಿಸಿ ಹೋರಾಟಕ್ಕೆ ವಯಸ್ಸಿನ ಅಭ್ಯಂತರವಿಲ್ಲ ಎನ್ನುವದನ್ನು ಸಾಭಿತು ಮಾಡಿದಳು.
ನೀ ನೀರಿಗೆ ಬಾರೆ ಚನ್ನಿ, ಚನ್ನಪ್ಪ ಚನ್ನಗೌಡ ಮುಂತಾದ ಭಜನೆ ಪದಗಳನ್ನು ಹಾಡುವದರೊಂದಿಗೆ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದಳು. ಬಾಲಕಿಯ ಹಾಡುಗಳನ್ನಾದರೂ ಕೇಳಿ ರಾಜಕಾರಣಿಗಳು ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ತರಲಿ ಎಂದು ನೆರೆದಿದ್ದವರ ಮನದಲ್ಲಿ ಗುಸುಗುಸು ಸುದ್ದಿ ಕೇಳಿ ಬರುತ್ತಿತ್ತು.
ಗ್ರಾಮದ ಮುಖಂಡರಾದ ಈರಪ್ಪ ಹಟ್ಟಿಹೊಳಿ, ಶಂಕರ ಬಾಗಲಕೋಟ, ಬಸವರಾಜ ಹೊಂಗಲ, ಪ್ರವೀಣ ಹಿರೇಮಠ ಮಾತನಾಡಿ, ಮತ ಪಡೆಯುವಾಗ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು ಅಧಿಕಾರ ಸಿಕ್ಕ ನಂತರ ಜನತೆಯನ್ನು ಮರೆಯುತ್ತಿದ್ದಾರೆ. ಸರ್ಕಾರ ರಾಜಕೀಯ ನಾಟಕ ಮಾಡಿ ಜನತೆಯನ್ನು ಬಲಿಪಶು ಮಾಡುತ್ತಿದೆ ಎಂದು ಆರೋಪಿಸಿದರಲ್ಲದೆ ರೈತರನ್ನು ಕುಡಿಯುವ ನೀರಿಗಾಗಿ ಹೋರಾಟ ಮಾಡುವ ಪರಿಸ್ಥಿತಿಗೆ ನೂಕಿರುವ ಇವರಿಗೆ ಖಂಡಿತ ಶಾಪ ತಟ್ಟುತ್ತದೆ ಎಂದರು.
ಉತ್ತರ ಕರ್ನಾಟಕವನ್ನು ಹತ್ತಿಕ್ಕುತ್ತಿರುವ ಸರ್ಕಾರಗಳಿಗೆ ಈ ಭಾಗದ ನೆನೆಪಾದರೂ ಇದೆಯೋ ಇಲ್ಲೋ ಎಂದು ಪ್ರಶ್ನಿಸಿದರು.
ವೀರಣ್ಣ ಹಟ್ಟಿಹೊಳಿ, ಅಕ್ಷರ ಆನಿಕಿವಿ, ಲಕ್ಷ್ಮಣ ಚಿವಟಗುಂಡಿ, ಬಸವರಾಜ ಜಡಗನ್ನವರ, ನಿಂಗಪ್ಪ ಛಬ್ಬಿ, ನಮಹಾಂತೇಶ ವಾಲಿ, ಈರಪ್ಪ ನರೇಂದ್ರ, ಶಿವಾನಂದ ಆನಿಕಿವಿ, ಯಲ್ಲಪ್ಪ ನರೇಂದ್ರ, ಬಸವಣ್ಣೆಪ್ಪ ಹಣಸಿ, ಚಂಬಯ್ಯ ಹಿರೇಮಠ ಹಾಗೂ ಹೋರಾಟ ಸಮಿತಿ ಮುಖಂಡರು ಇದ್ದರು.
ಇದಕ್ಕೂ ಮುನ್ನ ಗ್ರಾಮಸ್ಥರು ಪಟ್ಟಣದ ಅಂಬೇಡ್ಕರ ಉದ್ಯಾನವನದಿಂದ ಡೊಳ್ಳು, ದಟ್ಟೆ ಕುಣಿತ ವಾದ್ಯಗಳೊಂದಿಗೆ ಬೃಹತ ಪ್ರತಿಭಟನಾ ಮೆರವಣಿಗೆಯ ಮೂಲಕ ಆಗಮಿಸಿ, ರೈತ ಗೀತೆಗೆ ಗೌರವ ಸೂಚಿಸಿ ಧರಣಿ ಆರಂಭಿಸಿದರು.

loading...

LEAVE A REPLY

Please enter your comment!
Please enter your name here