ಪ್ರಕೃತಿ ನಾಶವಾಗದಂತೆ ಮುಂಜಾಗೃತೆ ವಹಿಕೊಳ್ಳಬೇಕು: ಸ್ವಾಮೀಜಿ

0
23
loading...

news-1ಮುಂಡರಗಿ,7: ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೆ ವೇಗವಾಗಿ ಬೆಳೆದರೂ ಮನುಷ್ಯ ಪ್ರಕೃತಿಯ ಮುಂದೆ ತುಂಬಾ ಚಿಕ್ಕವನಾಗುತ್ತಾನೆ. ಮನುಷ್ಯನ ಅತಿಯಾದ ದುರಾಸೆಯು ಕೆಲವು ಸಂದರ್ಭದಲ್ಲಿ ಪ್ರಕೃತಿಯು ತನ್ನ ಸಮತೋಲನ ಕಳೆದುಕೊಳ್ಳುವಂತೆ ಮಾಡುತ್ತದೆ. ಆದ್ದರಿಂದ ನಾವೆಲ್ಲ ಪ್ರಕೃತಿ ನಾಶವಾಗದಂತೆ ಮುಂಜಾಗೃತೆ ವಹಿಕೊಳ್ಳಬೇಕು ಎಂದು ಕೊಟ್ಟೂರಿನ ಜಾನಕೋಟಿಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬೀಡನಾಳ ಗ್ರಾಮದಲ್ಲಿ ಶನಿವಾರ ರಾತ್ರಿ ಏರ್ಪಡಿಸಿದ್ದ ಮಾರುತಿ ದೇವರ ಹತ್ತನೇ ವರ್ಷದ ಸಹಸ್ರ ದೀಪೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಭಾರಿ ಮಳೆಯಿಂದ ಚನ್ನೈ ನಗರ ತತ್ತರಿಸಿ ಹೋಗಿದ್ದು, ಅಲ್ಲಿಯ ಜನರು ಹಲವು ದಿನಗಳಿಂದ ನೀರು ಆಹಾರವಿಲ್ಲದೆ ಪರಿತಪಿಸುತ್ತಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಅವರಿಗೆ ನಾವೆಲ್ಲ ಸಾಧ್ಯವಾದ ನೆರವು ನೀಡಬೇಕು. ಚನ್ನೈನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪವು ನಮ್ಮ ರಾಜ್ಯದಲ್ಲಿಯೂ ಸಂಭವಿಸಬಹುದಾಗಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ನಾವೆಲ್ಲ ಹಲವು ಮುಂಜಾಗೃತಾ ಕ್ರಮಗಳನ್ನು ಈಗಲೇ ಕೈಗೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದರು.
ಕಲಕೇರಿ ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಮನೆಯಲ್ಲಿ ಹಚ್ಚುವ ದೀಪವು ನಮ್ಮ ಮನೆಯ ಕತ್ತಲನ್ನು ಹೊಡೆದೋಡಿಸುತ್ತದೆ. ಅದೇ ರೀತಿ ನಮ್ಮ ಮನಸ್ಸಿನೊಳಗೆ ಶಾಂತಿ, ಸಹನೆ, ಸಹಬಾಳ್ವೆ, ಪರೋಪಕಾರ ಮೊದಲಾದ ಜ್ಞಾನ ಜ್ಯೋತಿ ಬೆಳಗಬೇಕು. ಅಂತರಂಗ ಹಾಗೂ ಬಹಿರಂಗದ ಕತ್ತಲಿನಿಂದ ಆಚೆ ಬರಬೇಕು. ಆ ಮೂಲಕ ನಾವು ನಿತ್ಯ ದೀಪೋತ್ಸವವನ್ನು ಆಚರಿಸುವಂತಾಬೇಕು ಎಂದು ತಿಳಿಸಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಇಂತಹ ಧಾರ್ಮಿಕ ಸಭೆ ಸಮಾರಂಭಗಳು ನಮ್ಮ ನಡುವೆ ಇರುವ ಮೇಲು ಕೀಳುಗಳನ್ನು ಹೊಡೆದು ಹಾಕಿ ನಮ್ಮಲ್ಲಿ ಸಹೋದರತ್ವವನ್ನು ಮೂಡಿಸುತ್ತವೆ. ಇಂದು ನಮಗೆ ಬದುಕಲು ಸಾಕಷ್ಟು ಸೌಲಭ್ಯಗಳಿದ್ದರೂ, ನಾವೆಲ್ಲರೂ ಒಂದಾಗಿ ಬಾಳುವುದನ್ನು ಮರೆಯುತ್ತಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಹೂವಿಹಡಗಲಿಯ ಹಿರಿಶಿವಶಾಂತವೀರ ಸ್ವಾಮೀಜಿ, ಹಿರೇಹಡಗಲಿಯ ಹಾಲಸೋಮೆಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಅಶ್ವಿನಿ ಹಡಪದ ಭರತ ನಾಟ್ಯ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಹಲವಾರು ಗಣ್ಯ ಮಾನ್ಯರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮೀತಿ ಅಧ್ಯಕ್ಷ ಹೇಮಗಿರಿಶ ಹಾವಿನಾಳ, ಅಂದಪ್ಪ ಮೇಟಿ, ಮಂಜುನಾಥಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಗಾಳೆಪ್ಪ ಬಂಡಿವಡ್ಡರ, ಉಪಾಧ್ಯಕ್ಷೆ ಮಂಜುಳಾ ಹುಜರತ್ತಿ, ಹುಲಿಗೆವ್ವ ಸಣ್ಣಕಲ್ಲ, ಭೀಮಪ್ಪ ಕರಕಣ್ಣವರ, ಶಿವಲಿಂಗವ್ವ ಹರಿಜನ, ದೇವು ಹಡಪದ, ದೇವಪ್ಪ ಕಂಬಳಿ, ಮೊದಲಾದವರು ಹಾಜರಿದ್ದರು. ಎಂ.ಎಸ್.ತಿಪ್ಪಾಪೂರ ಕಾರ್ಯಕ್ರಮ ನಿರ್ವಹಿಸಿದರು

loading...

LEAVE A REPLY

Please enter your comment!
Please enter your name here