ರಸ್ತೆ, ಚರಂಡಿ ಕಾಮಗಾರಿ ಸ್ಥಗಿತಗೊಳಿಸಿ ಸಾರ್ವಜನಿಕರಿಂದ ಪ್ರತಿಭಟನೆ

0
22
loading...

ಮುಂಡರಗಿ,10: ಪಟ್ಟಣದ ಕೊಪ್ಪಳ ಕ್ರಾಸ್ ಬಳಿ ಇರುವ ದುರ್ಗಾದೇವಿ ದೇವಸ್ಥಾನವನ್ನು ನಿರ್ಮಿಸಿ ನಂತರ ಚರಂಡಿ ಹಾಗೂ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಗುರುವಾರ ಸ್ಥಳೀಯ ಕೊಪ್ಪಳ ಕ್ರಾಸ್‍ನಲ್ಲಿ ಅರಬಾವಿ ಚಳ್ಳಕೇರಿ ರಾಜ್ಯ ಮುಖ್ಯ ರಸ್ತೆಯ ಬೃಹತ್ ಚರಂಡಿ ಕಾಮಗಾರಿಯನ್ನು ಸ್ಥಗಿತಗೊಳಿಸಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಗದಗದಿಂದ ಮುಂಡರಗಿವರೆಗಿನ ಅರಬಾವಿ ಚಳ್ಳಕೇರಿ ರಸ್ತೆ ಕಾಮಗಾರಿಯು ಪೂರ್ಣಗೊಂಡಿದ್ದು, ಪಟ್ಟಣದ ಎಸ್.ಎಸ್.ಪಾಟೀಲ ನಗರದಿಂದ ಹೆಸರೂರ ಕ್ರಾಸ್‍ವರೆಗಿನ ಚರಂಡಿ ಕಾಮಗಾರಿ ಮಾತ್ರ ಬಾಕಿ ಇದೆ.
ಗುತ್ತಿಗೆದಾರರು ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿ ಚರಂಡಿ ಕಾಮಗಾರಿಯನ್ನು ಕೈಗೊಂಡಿದ್ದು, ಹೆಸರೂರ ಕ್ರಾಸ್‍ನಿಂದ ಕೊಪ್ಪಳ ಕ್ರಾಸ್‍ವರೆಗೂ ಚರಂಡಿ ಕಾಮಗಾರಿ ಪೂರ್ಣಗೊಂಡಿದೆ.
ಚರಂಡಿ ನಿರ್ಮಿಸುವುದಕ್ಕೋಸ್ಕರ ಕೊಪ್ಪಳ ಕ್ರಾಸ್‍ನಲ್ಲಿ ಗುರುವಾರ ಮುಂಜಾನೆ ಜೆಸಿಪಿಗಳಿಂದ ಕಾಮಗಾರಿ ಪ್ರಾರಂಭಿಸಲಾಗಿದೆ. ಈ ಸಂದರ್ಭದಲ್ಲಿ ಕೊಪ್ಪಳ ಕ್ರಾಸ್‍ನಲ್ಲಿದ್ದ ದುರ್ಗಾದೇವಿ ದೇವಸ್ಥಾನ ಸೇರಿದಂತೆ ಕೆಲವು ಅಂಗಡಿಗಳಿಗೆ ತೀವ್ರ ಹಾನಿಯಾಗಿದೆ. ಆಗ ಸ್ಥಳಕ್ಕಾಗಮಿಸಿದ ಕೆಲವು ಜನರು ಮೊದಲು ದುರ್ಗಾದೇವಿ ದೇವಸ್ಥಾನವನ್ನು ನಿರ್ಮಿಸಿ ನಂತರ ಚರಂಡಿ ಕಾಮಗಾರಿಯನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ಪುರಸಭೆ ಸದಸ್ಯ ಬಸವರಾಜ ರಾಮೇನಹಳ್ಳಿ ಮಾತನಾಡಿ, ಗದಗ ಮುಂಡರಗಿ ರಸ್ತೆಯ ಮಧ್ಯದಲ್ಲಿ ಬರುವ ಎಲ್ಲ ದೇವಸ್ಥಾನ ಹಾಗೂ ಶಾಲಾ ಕಂಪೌಂಡ್‍ಗಳನ್ನು ಮೊದಲೇ ಬೇರೆ ಸ್ಥಳದಲ್ಲಿ ನಿರ್ಮಿಸಿ ರಸ್ತೆಯನ್ನು ಅಗಲೀಕರಿಸಲಾಗಿದೆ. ಆದರೆ ಕೊಪ್ಪಳ ಕ್ರಾಸ್‍ನಲ್ಲಿರುವ ದುರ್ಗಾದೇವಿ ದೇವಸ್ಥಾನವನ್ನು ಮಾತ್ರ ನಿರ್ಮಿಸದೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು.

ಯುವ ಮುಖಂಡ ಚಿನ್ನಪ್ಪ ವಡ್ಡಟ್ಟಿ ಮಾತನಾಡಿ, ರಸ್ತೆ ಕಾಮಗಾರಿಯನ್ನು ಪ್ರಾರಂಭಿಸುವ ಪೂರ್ವದಲ್ಲಿ ರಸ್ತೆಯ ಬದಿಯಲ್ಲಿ ಬರುವ ಎಲ್ಲ ದೇವಸ್ಥಾನಗಳನ್ನು ಬೇರೆಡೆಗೆ ನಿರ್ಮಿಸಿ ಕೊಡಬೇಕು ಎಂದು ಒಪ್ಪಂದವಾಗಿದೆ. ಎಲ್ಲ ದೇವಸ್ಥಾನಗಳನ್ನು ನಿರ್ಮಿಸಿರುವಂತೆ ದುರ್ಗಾದೇವಿ ದೇವಸ್ಥಾನವನ್ನೂ ನಿರ್ಮಿಸಿ ನಂತರ ಚರಂಡಿ ಕಾಮಗಾರಿಯನ್ನು ಕೈಗೊಳ್ಳಬೇಕು.
ಇಲ್ಲದಿದ್ದಲ್ಲಿ ಗುತ್ತಿಗೆದಾರರು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ನೀಡಿದಂತಾಗುತ್ತದೆ. ಚರಂಡಿ ನಿರ್ಮಿಸುವ ಪೂರ್ವದಲ್ಲಿ ಮೊದಲು ದುರ್ಗಾದೇವಿ ದೇವಸ್ಥಾನ ನಿರ್ಮಿಸಿಕೊಡಬೇಕು. ನಂತರ ಚರಂಡಿ ಕಾಮಗಾರಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ನಂತರ ಯುವ ಮುಖಂಡ ದ್ರುವಕುಮಾರ ಹೊಸಮನಿ ಅವರು ದೂರವಾಣಿಯ ಮೂಲಕ ಗುತ್ತಿಗೆದಾರರನ್ನು ಸಂಪರ್ಕಿಸಿ, ಸಾಧ್ಯವಾದಷ್ಟು ಬೇಗನೆ ದುರ್ಗಾದೇವಿ ದೇವಸ್ಥಾನ ನಿರ್ಮಿಸಿಕೊಡಬೇಕೆಂದು ತಿಳಿಸಿದರು. ನಂತರ ಜನರು ಕಾಮಗಾರಿಗೆ ಅವಕಾಶ ನೀಡಿದರು. ಪುರಸಭೆ ಉಪಾಧ್ಯಕ್ಷ ಮುದುಕಪ್ಪ ಕುಂಬಾರ ಹಾಗೂ ಇತರರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here