ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ : ಜಗದೀಶ ಶೆಟ್ಟರ್

0
16
loading...

ಹಳಿಯಾಳ 23: ಕರ್ನಾಟಕ ರಾಜ್ಯ ಬೃಹತ್ ಕೈಗಾರಿಕಾ, ಪ್ರವಾಸೋದ್ಯಮ ಸಚಿವ, ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಆರ್.ವಿ. ದೇಶಪಾಂಡೆಯವರು ತಾವು ಉಸ್ತುವಾರಿಯಾಗಿರುವ ಜಿಲ್ಲೆಯಲ್ಲಿ, ತಮ್ಮ ಸ್ವಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪಿಸಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕಾಗಿದೆ. ಜಿಲ್ಲೆಯನ್ನು ಪ್ರವಾಸಿ ತಾಣವನ್ನಾಗಿಸಬೇಕಾಗಿದೆ. ತನ್ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವಂತೆ ಮಾಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಹಾಲಿ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಟೀಕಾತ್ಮಕವಾಗಿ ಆಶಿಸಿದರು.
ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾ ಸ್ಥಳೀಯ ಸಂಸ್ಥೆಗಳ ವತಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಗಣಪತಿ ಉಳ್ವೇಕರ ಅವರ ಪರವಾಗಿ ಮತಯಾಚಿಸಲು ಹಳಿಯಾಳದಲ್ಲಿ ಡಿ. 23 ರಂದು ಏರ್ಪಡಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಹಳಿಯಾಳ ತಾಲೂಕಿನ ಸ್ಥಳೀಯ ಸಂಸ್ಥೆಗಳಲ್ಲಿ ಆಯ್ಕೆಯಾದ ಬಿಜೆಪಿ ಬೆಂಬಲಿತ ನೂರಾರು ಸಂಖ್ಯೆಯ ಜನಪ್ರತಿನಿಧಿಗಳು ಪಕ್ಷದ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ದೇಶಪಾಂಡೆಯವರು ಬಹಳ ವರ್ಷಗಳಿಂದ ಹಳಿಯಾಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ರಾಜ್ಯದ ಪ್ರಭಾವಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಸಹ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಉತ್ತರಕನ್ನಡ ಜಿಲ್ಲೆ ಹಾಗೂ ದೇಶಪಾಂಡೆಯವರ ಸ್ವಕ್ಷೇತ್ರ ಹಿಂದುಳಿದಿರುವುದು ದುರ್ದೈವದ ಸಂಗತಿಯಾಗಿದೆ ಎಂದ ಶೆಟ್ಟರ್ ಪಕ್ಕದ ತಮ್ಮ ಕ್ಷೇತ್ರ ಧಾರವಾಡದಲ್ಲಿ ಆಗಿರುವ ಕೈಗಾರಿಕಾ ಬೆಳವಣಿಗೆಯನ್ನು ನೋಡಿಯಾದರೂ ತಮ್ಮ ಭಾಗದಲ್ಲಿ ಕೈಗಾರಿಕೆ ಸ್ಥಾಪಿಸಲು ದೇಶಪಾಂಡೆ ಮನಸ್ಸು ಮಾಡಬೇಕಾಗಿದೆ ಎಂದು ಹೇಳಿದರು.
ಆರ್.ವಿ. ದೇಶಪಾಂಡೆಯವರಿಗೆ ಸಿಕ್ಕ ಅವಕಾಶ ಬೇರೆಯವರಿಗೆ ದೊರೆತಿದ್ದಲ್ಲಿ ಉತ್ತರಕನ್ನಡ ಜಿಲ್ಲೆ ಹಾಗೂ ಹಳಿಯಾಳ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿತ್ತು ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್. ಘೋಟ್ನೇಕರ ಅವರಿಗೆ ಟೀಕೆ ಮಾಡಿದ ಅವರು ತಮ್ಮ ವಿಧಾನ ಪರಿಷತ್ ಸದಸ್ಯತ್ವ ಅವಧಿಯಲ್ಲಿ ತಾವು ಪ್ರತಿನಿಧಿಸುವ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಬಗ್ಗೆ ವಿಧಾನ ಪರಿಷತ್‍ನಲ್ಲಿ ಧ್ವನಿ ಎತ್ತದೇ ಕೇವಲ ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವುದರಲ್ಲಿ ಕಾಲ ಕಳೆದ ವ್ಯಕ್ತಿಯನ್ನು ಕಳೆದ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಈಗ ಮತ ಯಾಚಿಸಲು ಬರುವ ಅವರಿಗೆ ಮನೆಗೆ ಹೊರಡಲು ತಿಳಿಸಿ ಎಂದು ಕೋರಿದರು.
ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ ಅವರ ಗೆಲುವು ಶತಸಿದ್ಧ ಎಂದು ಮಾಜಿ ಸಿಎಂ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡುತ್ತಾ ಬಿಜೆಪಿಯಿಂದ ಮಾತ್ರ ಅಭಿವೃದ್ಧಿ ನಿರೀಕ್ಷಿಸಬಹುದಾಗಿದೆ. ಇಷ್ಟು ವರ್ಷ ಅಧಿಕಾರದಲ್ಲಿರುವ ಸಚಿವ ಆರ್.ವಿ. ದೇಶಪಾಂಡೆಯವರು ತಮ್ಮ ಸ್ವಕ್ಷೇತ್ರದಲ್ಲಿ ಏತ ನೀರಾವರಿ ಯೋಜನೆ ಏಕೆ ಮಾಡಿಲ್ಲ. ಕೈಗಾರಿಕೆಗಳನ್ನು ಏಕೆ ತಂದಿಲ್ಲ ಎಂದು ಪ್ರಶ್ನಿಸಿದರು. ಕೆಲ ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಸಕ್ಕರೆ ಕಾರ್ಖಾನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದೆ ಎಂದರು.
ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಎಸ್.ಎಲ್. ಘೋಟ್ನೇಕರ ಅವರು ತಮ್ಮ ಅನುದಾನವನ್ನು ಜಿಲ್ಲೆಯಾದ್ಯಂತ ಸಮರ್ಪಕವಾಗಿ ಹಂಚಿಲ್ಲ, ಜಿಲ್ಲೆಯಲ್ಲಿ ಸಂಚರಿಸಿಲ್ಲ ಎಂದು ಟೀಕಿಸಿದರು. ಚುನಾವಣೆಯಲ್ಲಿ ಹಣದಾಸೆಗೆ ಬಲಿಯಾಗಬೇಡಿ, ಸ್ವಾಭಿಮಾನ ಮರೆಯಬೇಡಿ ಎಂದು ಕೋರಿದ ಕಾಗೇರಿ ಕೆಲವರು ಮತ ಹಾಕಿ ಅದನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದು ಸಂಬಂಧಪಟ್ಟವರಿಗೆ ತೋರಿಸಿ ತಾವು ಅವರಿಗೆ ಮತ ಹಾಕಿದ ಬಗ್ಗೆ ಖಚಿತ ಪಡಿಸುತ್ತಾರೆ. ಇದು ಸರಿಯಲ್ಲ. ಹೀಗಾಗಿ ಮತಗಟ್ಟೆಗೆ ಮೊಬೈಲ್ ತೆಗೆದುಕೊಂಡು ಹೋಗದೇ ಇರುವ ಬಗ್ಗೆ ಚುನಾವಣಾ ಆಯೋಗ ಮಾಡಿದ ಆದೇಶ ಜಾರಿಯಾಗುವಂತೆ ಆಗ್ರಹಿಸುವುದಾಗಿ ತಿಳಿಸಿದರು. ಕಾಂಗ್ರೆಸ್‍ಗೆ ಬಂಡಾಯದ ಬಿಸಿ ತಗಲುತ್ತದೆ. ಜೆಡಿಎಸ್ ಅಭ್ಯರ್ಥಿ ಎಲ್ಲಿಂದಲೋ ಬಂದು ಸೋತ ನಂತರ ಮತ್ತೆಲ್ಲಿಗೋ ತೆರಳುತ್ತಾರೆ. ಅವರಲ್ಲಿ ಹಣ ಇರುವುದಾಗಿ ಹೇಳುತ್ತಾರೆ. ಆದರೆ ಆ ಹಣ ಮಾತ್ರ ಖರ್ಚಾಗುತ್ತದೆ ಅದು ಮತಗಳಾಗಿ ಪರಿವರ್ತನೆಯಾಗುವುದಿಲ್ಲ ಎಂದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಸ್ಥಳೀಯ ಮುಖಂಡ ರಾಜು ಧೂಳಿ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಗುತ್ತಿಗೆದಾರಿಕೆ ಕೆಲಸವನ್ನು ಗಟ್ಟಿಗೊಳಿಸಲು ತಮ್ಮ ಆರು ವರ್ಷದ ಎಂಎಲ್‍ಸಿ ಅವಧಿಯನ್ನು ವ್ಯಯಿಸಿದ ಎಸ್.ಎಲ್. ಘೋಟ್ನೇಕರ ಯಾವುದೇ ಪಂಚಾಯತಿಗಳಿಗೆ ಭೇಟಿ ನೀಡಿಲ್ಲ ಎಂದು ಟೀಕಿಸಿದರು. ಈ ಎಂಎಲ್‍ಸಿ ಚುನಾವಣೆ ಗೆಲ್ಲುವ ಮೂಲಕ ಶ್ರೀಘ್ರವಾಗಿ ಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲು ಪ್ರೇರಣೆಯಾಗುವಂತೆ ಮತ ಚಲಾಯಿಸುವಂತೆ ಕೋರಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವ್ಹಿ.ಡಿ. ಹೆಗಡೆ ಅವರೂ ಸಹ ಘೋಟ್ನೇಕರ ವಿರುದ್ಧ ಟೀಕಾ ಪ್ರಹಾರ ಮಾಡುತ್ತಾ ಕೇವಲ ಹಳಿಯಾಳ ಪುರಸಭೆಗೆ ಕೇಂದ್ರಕೃತವಾಗಿದ್ದ ಎಸ್.ಎಲ್. ಘೋಟ್ನೇಕರ ತಮ್ಮ ಆಸ್ತಿಯನ್ನು ಹೆಚ್ಚಿಸುವುದರಲ್ಲಿಯೇ ಕಾಲ ಕಳೆದರು ಎಂದು ನುಡಿದರು.
ಪಕ್ಷದ ತಾಲೂಕಾಧ್ಯಕ್ಷ ಎಲ್.ಎಸ್. ಅರಸಿನಗೇರಿ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ತಾಲೂಕಿನ ಮುಖಂಡ ಎಸ್.ಕೆ. ಗೌಡಾ ಸಾಂದರ್ಭಿಕವಾಗಿ ಮಾತನಾಡಿದರು.
ಮಾಜಿ ಶಾಸಕ ಸುನೀಲ ಹೆಗಡೆ ತಮ್ಮ ರಾಜಕೀಯ ಎದುರಾಳಿಗಳಾದ ಎಸ್.ಎಲ್. ಘೋಟ್ನೇಕರ ಹಾಗೂ ಆರ್.ವಿ. ದೇಶಪಾಂಡೆ ವಿರುದ್ಧ ಟೀಕೆಗಳ ಸುರಿಮಳೆಗೈದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಾಳಿನದಿ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ಆರ್.ವಿ. ದೇಶಪಾಂಡೆಯವರಿಗೆ ತಕ್ಕ ಶಾಸ್ತಿ ಮಾಡಬೇಕೆಂದರೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಲ್. ಘೋಟ್ನೇಕರ ಅವರಿಗೆ ಸೋಲಿಸಬೇಕಾಗಿದೆ. ಬಿಜೆಪಿ ಬೆಂಬಲಿತ ಸದಸ್ಯರ ಪಂಚಾಯತಿಗಳಿಗೆ ಆಶ್ರಯ ಮನೆ ಹಂಚಿಕೆಯಲ್ಲಿ ತಾರತಮ್ಯ ಎಸಗಿದ ಕಾಂಗ್ರೆಸ್‍ನವರಿಗೆ ತಮ್ಮನ್ನು ಬೆಂಬಲಿಸಿ ಎಂದು ಮತ ಕೇಳುವ ನೈತಿಕ ಅಧಿಕಾರ ಇದೆಯೇ ಎಂದು ಪ್ರಶ್ನಿಸಿದರು.
ಡಿಗ್ರಿ ಕಾಲೇಜು, ಜ್ಯೂನಿಯರ್ ಕಾಲೇಜು ಅಭಿವೃದ್ಧಿ ಸಮಿತಿಗಳ ಅಧ್ಯಕ್ಷತೆಯನ್ನು ಹೊಂದಿರುವ ಎಸ್.ಎಲ್. ಘೋಟ್ನೇಕರ ಹಳಿಯಾಳ ಪುರಸಭೆಗಳಲ್ಲಿ ಪಾಲ್ಗೊಳ್ಳುವದು ಎಲ್ಲಾ ಗುತ್ತಿಗೆ ಕೆಲಸಗಳು ತಮ್ಮ ಮಗನಿಗೆ ಬೇಕು ಎಂದು ಹೇಳುತ್ತಾ ಅದನ್ನೇ ತನ್ನ ನಿತ್ಯದ ಕಾಯಕವನ್ನಾಗಿಸಿ ತಮ್ಮ ಆಸ್ತಿಯನ್ನು ಸಿಕ್ಕಾಪಟ್ಟೆ ಬೆಳೆಸಿದ್ದಾರೆ ಎಂದು ಅಂಕಿ-ಅಂಶಗಳ ಸಮೇತ ವಿವರಿಸಿದರು. ಲೆಕ್ಕಾಚಾರ ಹಾಕಿದರೆ ಎಸ್.ಎಲ್. ಘೋಟ್ನೇಕರ ಪ್ರತಿದಿನ 1 ಲಕ್ಷ ರೂ. ನಿವ್ವಳ ಲಾಭಾದಾಯ ಹೊಂದಿದ್ದಾರೆ ಎಂದು ವಿವರಿಸಿದರು.
ಈ ಸಾರ್ವಜನಿಕ ಸಮಾರಂಭದಲ್ಲಿ ವೇದಿಕೆಯ ಮೇಲೆ ಮುಖಂಡ ಮಂಗೇಶ ದೇಶಪಾಂಡೆ, ಪುರಸಭೆ ಸದಸ್ಯರಾದ ಎಸ್.ಎಂ. ಹೂಲಿ, ಎಸ್.ಎ. ಶೆಟವಣ್ಣವರ, ಸೈಯದಅಲಿ ಅಂಕೋಲೆಕರ, ಸುಬಾನಿ ಹುಬ್ಬಳ್ಳಿ, ತೇರಗಾಂವ ಪಂಚಾಯತಿ ಸದಸ್ಯ ಈರಣ್ಣಾ ನಾವಲಗಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಅಳ್ನಾವರಕರ, ಪ್ರಮುಖರಾದ ತುಕಾರಾಮ ಮಿರಾಶಿ, ಸುಭಾಸ ಕಾಮ್ರೇಕರ ಉಪಸ್ಥಿತರಿದ್ದರು.

ನಿಷ್ಕ್ರೀಯ ಸರ್ಕಾರ ಟೀಕೆ
ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ನಿಷ್ಕ್ರೀಯವಾಗಿದ್ದು, ಅಭಿವೃದ್ಧಿಯಲ್ಲಿ ರಾಜ್ಯವು 10 ವರ್ಷಗಳಷ್ಟು ಹಿನ್ನಡೆಯಾಗಿದೆ ಎಂದು ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಟೀಕಿಸಿದರು.
ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಜನಪರ ಯೋಜನೆಗಳನ್ನು ಈ ಸರ್ಕಾರ ಮುಂದುವರಿಸುತ್ತಿದೆ. ಹೊರತು ಹೊಸದಾಗಿ ಜನಪರ ಯೋಜನೆಗಳಿಲ್ಲ. ನಮ್ಮ ಸರ್ಕಾರದ ಅವಧಿಯ `ನಮ್ಮ ಗ್ರಾಮ-ನಮ್ಮ ರಸ್ತೆ’, `ಸುವರ್ಣ ಗ್ರಾಮೋದಯ’ ಮೊದಲಾದ ಗ್ರಾಮೀಣ ಜನಪರ ಯೋಜನೆಗಳನ್ನು ಈ ಸರ್ಕಾರ ರದ್ದುಗೊಳಿಸಿದೆ. ನಾವು ಪಂಚಾಯತಿ ಜನಪ್ರತಿನಿಧಿಗಳ ಗೌರವಧನ ಹೆಚ್ಚಳ ಮಾಡಿದ್ದೆವು. ಆದರೆ ಕಾಂಗ್ರೆಸ್ ಸರ್ಕಾರ ಹಲವಾರು ತಿಂಗಳುಗಳಿಂದ ಗೌರವಧನ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ನೀಡಿದ ಅನುದಾನದ ಪೈಕಿ ದೊಡ್ಡ ಮೊತ್ತದ ಅನುದಾನ ಬಳಕೆಯಾಗಿಲ್ಲ. ರೈತರು ಸಂಕಷ್ಟದಲ್ಲಿದ್ದರೂ ಸಹ ಸಾಲಮನ್ನಾ ಮಾಡಿಲ್ಲ. ಬರಪರಿಹಾರ ಕಾಮಗಾರಿಗಳನ್ನು ಸರಿಯಾಗಿ ಆರಂಭಿಸಿಲ್ಲ. ಕಬ್ಬು ಬೆಳೆಗಾರರಿಗೆ ಉತ್ತಮ ದರವನ್ನು ಸರ್ಕಾರ ಘೋಷಣೆ ಮಾಡಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೊಸದಾಗಿ ವೈನ್‍ಶಾಪ್‍ಗಳಿಗೆ ಪರವಾನಿಗೆ ನೀಡುವ ಮೂಲಕ ಸರ್ಕಾರ `ಮದ್ಯಭಾಗ್ಯ’ ಯೋಜನೆ ಜಾರಿಗೊಳಿಸಲು ಹೊರಟಿದೆ. ಅನ್ನಭಾಗ್ಯದ ಜೊತೆಗೆ ರೈತರ ಸಾವಿನಭಾಗ್ಯ, ರಾಜ್ಯದ ಸಾಲದ ಭಾಗ್ಯ, ಕರೆಂಟ್ ಕಟ್ ಭಾಗ್ಯ ಅನುಷ್ಠಾನಗೊಂಡಿದೆ. ಸಿದ್ಧರಾಮಯ್ಯನವರು ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿಯಾಗಲಿದ್ದು, ಕಾಂಗ್ರೆಸ್ ಮುಕ್ತ ಕರ್ನಾಟಕದ ನೇತೃತ್ವ ವಹಿಸಲಿದ್ದಾರೆ ಎಂದರು ಜಗದೀಶ ಶೆಟ್ಟರ್.

loading...

LEAVE A REPLY

Please enter your comment!
Please enter your name here