ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣಾ ಕಾರ್ಯಾಗಾರ

0
32
loading...


ಶಿರಹಟ್ಟಿ : ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ, ಗದಗ ತಾಲೂಕು ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗದಗ ಗ್ರಾಮೀಣ ವಲಯ ಇವರ ಸಹಯೋಗ ಹಾಗೂ ಮಾರ್ಗದರ್ಶನದಲ್ಲಿ ಹಳ್ಳಿ-ಹಳ್ಳಿಗಳಲ್ಲಿ ಸಾಯಂಕಾಲದ ಅವಧಿಯಲ್ಲಿ “ಬಾಲಕ-ಪಾಲಕ-ಶಿಕ್ಷಕರ ಸಮಾವೇಶ”ವನ್ನು ಸಂಘಟಿಸುವುದರ ಮೂಲಕ ಅತ್ಯಂತ ಮಾದರಿಯಾದ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿದೆ ಎಂದು ಜಿಲ್ಲಾ ಗಣಿತ ವಿಷಯ ಪರಿವೀಕ್ಷಕರಾದ ಎ.ಎ.ಖಾಜಿ ಅವರು ತಿಳಿಸಿ, ಶಿಕ್ಷಕ ಸಂಘದ ಕಾರ್ಯವೈಖರಿಯನ್ನು ಅಭಿನಂದಿಸಿದರು.

ಅವರು ಇತ್ತೀಚಿಗೆ ಗದಗ ತಾಲೂಕು ಸೊರಟೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಬಾಲಕ-ಪಾಲಕ-ಶಿಕ್ಷಕರ ಸಮಾಲೋಚನೆ ಕಾರ್ಯಾಗಾರವನ್ನು ಉಧ್ಘಾಟಿಸಿ ಮಾತನಾಡಿ, ಪಾಲಕರು ಮನೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಬೇಕು. ಮಕ್ಕಳು ದೃಢಸಂಕಲ್ಪ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದಾಗ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದು ತಿಳಿಸಿದರು.
ಪ್ರೌಢಶಾಲಾ ಸಹಶಿಕ್ಷಕ ಸಂಘದ ಅಧ್ಯಕ್ಷರಾದ ಬಿ.ಎಫ್.ಪೂಜಾರ ಅವರು ಮಾತನಾಡಿ ‘ಸಂಘ ಕೇವಲ ಶಿಕ್ಷಕರ ಬೇಕು-ಬೇಡಿಕೆಗಳಿಗೆ ಮಾತ್ರ ಹೋರಾಟ ಮಾಡುತ್ತಿಲ್ಲ ಶಿಕ್ಷಣದ ಗುಣಾತ್ಮಕ ಬದಲಾವಣೆಗಾಗಿ, ಪ್ರೌಢಶಾಲೆಗಳಿರುವ ಹಳ್ಳಿಗಳಲ್ಲಿ ಕಾರ್ಯಾಗಾರ ಏರ್ಪಡಿಸುವದರ ಮೂಲಕ ಬಾಲಕ ಮತ್ತು ಪಾಲಕರಲ್ಲಿ ಆತ್ಮ ಸ್ಥೈರ್ಯ ತುಂಬಿ ಜಾಗೃತಿಯನ್ನು ಮೂಡಿಸುವ ಪ್ರೇರಣಾತ್ಮಕ ಕೆಲಸವನ್ನು ಮಾಡುತ್ತಿದೆ. ಗದಗ ಗ್ರಾಮೀಣ ವಲಯದ ಫಲಿತಾಂಶ ಸುಧಾರಣೆಗೋಸ್ಕರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಆರ್.ಹೂಗಾರ ಇವರ ಮಾರ್ಗದರ್ಶನದಲ್ಲಿ ಸಂಘ ಇಂತಹ ರಚನಾತ್ಮಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿ ಫಲಿತಾಂಶ ಉತ್ತಮೀಕರಣವಾದರೆ ನಮ್ಮ ಶ್ರಮ ಸಾರ್ಥಕ ಎಂದು ತಿಳಿಸಿದರು. ಪರೀಕ್ಷೆ ಮುಗಿಯುವವರೆಗೆ ಮನೆಯಲ್ಲಿನ ಟಿ.ವ್ಹಿ ಗಳಿಂದ ದೂರವಿರಿ ವಿಶೇ ಷವಾಗಿ ತಾಯಂದಿರು ಧಾರಾವಾಹಿಗಳನ್ನು ನೋಡುವ ಕಾರ್ಯವನ್ನು ನಿಲ್ಲಿಸುವದರ ಮೂಲಕ ತಮ್ಮ ಮಕ್ಕಳ ಫಲಿತಾಂಶ ಉತ್ತಮವಾಗಿ ಬರಲು ಸಹಕರಿಸಿ ಎಂದು ತಿಳಿಸಿದರು.
ಇನ್ನೋರ್ವ ಜಿಲ್ಲಾ ವಿಜ್ಞಾನ ವಿಷಯ ಪರಿವೀಕ್ಷಕರಾದ ಜೆ.ಡಿ.ದಾಸರರವರು ಮಾತನಾಡಿ ಮಕ್ಕಳು ನಕಲು ಎಂಬ ಪರಿಕಲ್ಪನೆಯಿಂದ ಹೊರಬಂದು ಸ್ವಾವಲಂಬಿಯಾಗಿ ಪರೀಕ್ಷೆ ಬರೆಯುವ ಸಂಕಲ್ಪ ಮಾಡಿರಿ. ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ತಿಳಿಸಿದರು. ದಂಪತಿಗಳ ಕಲಹ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯ ಕುಂಠಿತಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಾಮರಸ್ಯದ ಜೀವನವನ್ನು ಪಾಲಕರು ರೂಢಿಸಿಕೊಳ್ಳಬೇಕೆಂದು ತಿಳಿಸಿದರು.
. ಪ್ರೌಢಶಾಲೆಯ ಪ್ರಧಾನ ಗುರುಮಾತೆ ಶ್ರೀಮತಿ ಎಸ್.ಎಮ್.ಮನ್ನಾಪೂರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಂಧರ್ಭೋಚಿತವಾಗಿ ಮಾತನಾಡಿದರು. ಪ್ರಥಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಕೆ.ಎ. ಬಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌಡಾನಾಯ್ಕರ ಗುರುಗಳು ಸ್ವಾಗತಿಸಿದರೆ, ಕೊನೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿರಾಜ್ ಯಳವತ್ತಿ ವಂದಿಸಿದರು. ಶಿಕ್ಷಕ ಸಂಘದ ಸಹಕಾರ್ಯದರ್ಶಿಗಳಾದ ಎಮ್.ಎ.ಯರಗುಡಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು 64 ಮಕ್ಕಳ ಪಾಲಕರು ಹಾಗೂ ಪ್ರೌಢಶಾಲೆಯ ಎಲ್ಲ ಗುರುವೃಂದ ಮತ್ತು ಹಿರಿಯರಾದ ಮಠಪತಿ ಹಾಗೂ ಪರಸಪ್ಪ ಮಲ್ಲಾರಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here