ಗ್ರಾಮಸ್ಥರಿಂದ ಶಾಲೆ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಕಿರುಕುಳ

0
37
loading...


ಮುಂಡರಗಿ : ಗ್ರಾಮಸ್ಥರು ಅನವಶ್ಯಕವಾಗಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಕಿರುಕುಳು ನೀಡುತ್ತಿದ್ದು, ಕಳೆದ ನಾಲ್ಕು ದಿನಗಳಿಂದ ಗ್ರಾಮಸ್ಥರು ಹಾಗೂ ಶಿಕ್ಷಕರ ನಡುವಿನ ಮನಸ್ತಾಪ ಬಿಗಡಾಯಿಸಿದ್ದು, ಗ್ರಾಮಸ್ಥರು ಹಾಗೂ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸಲು ತಹಸೀಲ್ದಾರ ಜೆ.ಬಿ.ಮಜ್ಜಗಿ, ಪಿಎಸ್‍ಐ ನರಸಿಂಹಮೂರ್ತಿ ಬೇಲೂರ, ಬಿಇಒ ಎಂ.ಎ.ರಡ್ಡೇರ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಸೋಮವಾರ ರಾತ್ರಿ ತುರ್ತುಸಭೆ ನಡೆಸಿದರು.
ಶಾಲೆಯಿಂದ ಹೊರಹೋಗುವಂತೆ ಬೆದರಿಸುತ್ತಿದ್ದಾರೆ. ನಮಗೆ ಜೀವ ಬೆದರಿಕೆ ಇದ್ದು, ತಕ್ಷಣ ನಮ್ಮೆಲ್ಲನ್ನೂ ಸಾಮೂಹಿಕವಾಗಿ ಬೇರೆ ಗ್ರಾಮಕ್ಕೆ ವರ್ಗಾಯಿಸಬೇಕು ಎಂದು ತಾಲೂಕಿನ ಹೆಸರೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಎಲ್ಲಾ ಶಿಕ್ಷಕರು ತಹಸೀಲ್ದಾರಗೆ ಮನವಿ ಮಾಡಿಕೊಂಡರು.
ಈ ಪೂರ್ವದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರೊಬ್ಬರು ಸ್ವ ಇಚ್ಛೆಯಿಂದ ಕೌನ್ಸಿಲಿಂಗ್ ಮೂಲಕ ಬೇರೆಡೆಗೆ ವರ್ಗವಾಗಿ ಹೋಗಿದ್ದಾರೆ. ಅವರು ವರ್ಗವಾಗಿ ಹೋಗಲು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಇನ್ನುಳಿದ ಶಿಕ್ಷರೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿ ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯ ಯುವರಾಜ ಮುಂಡರಗಿ ದೂರಿದರು.
ಗ್ರಾಮದ ಕೆಲವು ಜನರು ಕುಡಿದು ಶಾಲಾ ಆವರಣವನ್ನು ಪ್ರವೇಶಿಸಿ ಅವಾಚ್ಯ ಹಾಗೂ ಅಶ್ಲೀಲ ಶಬ್ದಗಳಿಂದ ಶಿಕ್ಷಕಿಯರನ್ನು ಬೈಯುತ್ತಿದ್ದಾರೆ. ಶಾಲೆಯೇ ದೇವಾಲಯ ಮಕ್ಕಳೆ ದೇವರು ಎಂದು ಭಾವಿಸಿ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರ ಮಧ್ಯದಲ್ಲಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕರ್ತವ್ಯಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಶಿಕ್ಷಕಿಯೊಬ್ಬರು ಆರೋಪಿಸಿದರು.
ಕರ್ತವ್ಯದಲ್ಲಿ ನಿರತರಾಗಿದ್ದ ಶಿಕ್ಷಕ ಶಿಕ್ಷಕಿಯರನ್ನು ಗ್ರಾಮಸ್ಥರು ಬಲವಂತದಿಂದ ಹೊರಹಾಕಿದ್ದಾರೆ. ‘ನಿಮ್ಮ ಅವಶ್ಯಕತೆ ನಮಗೆ ಹಾಗೂ ನಮ್ಮ ಮಕ್ಕಳಿಗೆ ಇಲ್ಲ, ನೀವು ಬೇರೆಲ್ಲಿಯಾದರೂ ಹೋಗಿ ನೌಕರಿ ಮಾಡಿರಿ ನಮ್ಮ ಊರಲ್ಲಿ ನೀವು ಇರುವಂತಿಲ್ಲ’ ಎಂದು ಕೆಲವು ಗ್ರಾಮಸ್ಥರು ಬೆದರಿಕೆ ಹಾಕಿದ್ದಾರೆ. ಇದರಿಂದ ನಮಗೆ ಜೀವ ಭಯವಿದ್ದು, ನಮಗೆ ಏನಾದರೂ ಆದರೆ ಅದಕ್ಕೆ ಯಾರು ಹೊಣೆ ಎಂದು ಶಿಕ್ಷಕಿಯರು ಕಣ್ಣಿರು ಸುರಿಸುತ್ತಾ ಪ್ರಶ್ನಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯು ಕೊನೆಯ ಸ್ಥಾನದಲ್ಲಿದ್ದರೂ, ಹೆಸರೂರು ಸರ್ಕಾರಿ ಪ್ರೌಢ ಶಾಲೆಯ ಫಲಿತಾಂಶ ಮಾತ್ರ ಕಳೆದ ಮೂರು ವರ್ಷಗಳಿಂದ 100 ಕ್ಕೆ 100 ರಷ್ಟಾಗಿದೆ. ಗ್ರಾಮಸ್ಥರು ಶಿಕ್ಷಕ ಶಿಕ್ಷಕಿಯರಿಗೆ ಈ ರೀತಿ ಮಾನಸಿಕ ಹಿಂಸೆಯನ್ನು ನೀಡಿದರೆ ಎಸ್‍ಎಸ್‍ಎಲ್‍ಸಿ ಫರೀಕ್ಷಾ ಫಲಿತಾಂಶ ಹೇಗೆ ಸುಧಾರಿಸುತ್ತದೆ ಎಂದು ಮುಖ್ಯೋಪಾಧ್ಯಾಯರು ಪ್ರಶ್ನಿಸಿದರು.
ನಿಮ್ಮೂರ ಮಕ್ಕಳಿಗೆ ಪಾಠ ಹೇಳಲು ಬಂದಿರುವ ಶಿಕ್ಷಕರನ್ನು ನೀವೆಲ್ಲ ನಿಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳಬೇಕು. ಪ್ರತಿ ವರ್ಷ ಅವರು ಉತ್ತಮ ಫಲಿತಾಂಶವನ್ನು ನೀಡುತ್ತಿದ್ದಾರೆ. ಗ್ರಾಮಸ್ಥರು ಹಾಗೂ ಎಸ್‍ಡಿಎಂಸಿ ಸದಸ್ಯರು ಅನವಶ್ಯಕವಾಗಿ ಶಿಕ್ಷಕ ಶಿಕ್ಷಕಿಯರಿಗೆ ಕಿರುಕುಳ ನೀಡಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಹಸೀಲ್ದಾರ ಜೆ.ಬಿ.ಮಜ್ಜಗಿ ಅವರು ಎಚ್ಚರಿಸಿದರು.
ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಿಕೊಳ್ಳುವುದಾಗಿ ಹೆಸರೂರು ಗ್ರಾಮದ ಕೆಲವು ಹಿರಿಯರು ಅಧಿಕಾರಿಗಳಿಗೆ ಭರವಸೆ ನೀಡಿದರು. ಗ್ರಾಮದ ಎಂಟು ಜನರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುವಂತೆ ತಹಸೀಲ್ದಾರರು ಪಿಎಸ್‍ಐ ಅವರಿಗೆ ಸೂಚಿಸಿದರು. ಶಿಕ್ಷಕರು ಹಾಗೂ ಗ್ರಾಮಸ್ಥರು ಹೊಂದಿಕೊಂಡು ಹೋಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ.ರಡ್ಡೇರ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಡಿ.ಭಾವಿಮನಿ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎನ್.ಡೊಣ್ಣಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ, ಸದಸ್ಯರಾದ ಭಾಗ್ಯಲಕ್ಷ್ಮಿ ಇನಾಮತಿ, ಹೆಸರೂರು ಗ್ರಾ.ಪಂ. ಅಧ್ಯಕ್ಷ ಮಾರುತಿ ಹೊಸಮನಿ, ಎಸ್‍ಡಿಎಂಸಿ ಅಧ್ಯಕ್ಷೆ ಹುಲಿಗೆವ್ವ ಹಡಗಲಿ, ಉಪಾಧ್ಯಕ್ಷ ಜಗದೀಶ ಪಾಟೀಲ, ಮುಖಂಡರಾದ ವೀರಯ್ಯ ಹಳ್ಳಿ, ಈರಯ್ಯ ಹಿರೇಮಠ, ಮಹಾದೇವಪ್ಪ ಚಿಗರಿ, ಶಂಕ್ರಪ್ಪ ಜುಟ್ಲಣ್ಣವರ, ಬಸಯ್ಯ ಹಿರೇಮಠ, ಕೊಟ್ರಪ್ಪ ಮೇಸ್ತ್ರಿ, ಗರುಡಪ್ಪ ಜಂತ್ಲಿ ಸೇರಿದಂತೆ ಅನೇಕರು ಪಾಲ್ಗೂಂಡಿದ್ದರು

loading...

LEAVE A REPLY

Please enter your comment!
Please enter your name here