ಜಿಪಂ, ತಾಪಂ ಚುನಾವಣೆ; ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಘೋಷ್

0
30
loading...


ಕಾರವಾರ : ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜನವರಿ 25ರಂದು ಜಿಲ್ಲಾಧಿಕಾರಿ ಮಟ್ಟದಲ್ಲಿ ಅಧಿಸೂಚನೆ ಹೊರಡಿಸಲಿದ್ದು ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು ಹೇಳಿದ್ದಾರೆ.
ರಾಜ್ಯ ಚುನಾವಣಾ ಆಯೋಗವು ಸ್ಥಳೀಯ ಸಂಸ್ಥೆಗಳ ಚುನಾವಣಾ ಸಂಬಂಧದಲ್ಲಿ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಮಾದರಿ ಸದಾಚಾರ ಸಂಹಿತೆಯ ಕೈಪಿಡಿಯನ್ನು ಪ್ರಕಟಿಸಿದೆ. ಸದಾಚಾರ ಸಂಹಿತೆಯು ಜನವರಿ 18ರಿಂದ ಫೆಬ್ರವರಿ 24ರವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆಯು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾಗಿ ಉನ್ನತೀಕರಿಸಿರುವ ಆದರೆ ಚುನಾವಣೆ ನಡೆಯದೇ ಇರುವ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಗೆ ಅನ್ವಯವಾಗುತ್ತದೆ. ಉಳಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ನೀತಿ ಸಂಹಿತೆ ಅನ್ವಯವಾಗುವುದಿಲ್ಲ.
ತಾಪಂ ಹಾಗೂ ಜಿಪಂಗಳು ಚುನಾವಣಾ ಪೂರ್ವದಲ್ಲಿ ಪ್ರಾರಂಭಿಸಿರುವ ಕಾಮಗಾರಿಗಳನ್ನು ಮುಂದುವರೆಸಲು ಹಾಗೂ ಈ ಸಂಬಂಧ ಬಿಲ್ಲುಗಳನ್ನು ಪಾವತಿಸಲು ನೀತಿ ಸಂಹಿತೆ ಅಡ್ಡಿಯಾಗದು. ಆದರೆ ಯಾವುದೇ ಹೊಸ ಕಾಮಗಾರಿಗಳನ್ನು ಪ್ರಾರಂಭಿಸಬಾರದು. ಆದರೆ ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರಿನ ಕಾಮಗಾರಿಗಳನ್ನು ಪ್ರಾರಂಭಿಸಿ ಅನುಷ್ಟಾನಗೊಳಿಸಲು ಅಡ್ಡಿಯಿಲ್ಲ. ಆದರೆ ಅಂತಹ ಸಂದರ್ಭದಲ್ಲಿ ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರ ಉಪಸ್ಥಿತಿಯಿರಬಾರದು ಎಂದು ತಿಳಿಸಿದ್ದಾರೆ.
ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಒದಗಿಸಲಾಗಿರುವ ಸರ್ಕಾರಿ ವಾಹನಗಳನ್ನು ಚುನಾವಣಾ ಪ್ರಾರಂಭದಿಂದ ಮುಕ್ತಾಯದವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಸುಪರ್ದಿಗೆ ಪಡೆಯಬೇಕು. ಆದರೆ ವಿಧಾನಮಂಡಲ ಹಾಗೂ ಸಂಸತ್ ಸದಸ್ಯರಿಗೆ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕು ಮಟ್ಟದಲ್ಲಿ ಅವರ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಿರುವ ಸರ್ಕಾರಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಆದರೆ ಸದರಿ ವಾಹನವನ್ನು ಚುನಾವಣಾ ಪ್ರಚಾರ ಅಥವಾ ಸಂಬಂಧಿತ ಕಾರ್ಯಗಳಿಗೆ ಬಳಸಿದ್ದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗುವುದು.
ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಸರ್ಕಾರಿ ಕಾರ್ಯಕ್ರಮ ಆಯೋಜಿಸಬಾರದು. ಮಂತ್ರಿಗಳು ಅಥವಾ ಶಾಸಕರು ಯಾವುದೇ ಸರ್ಕಾರಿ ಕಾರ್ಯಕ್ರಮದಲ್ಲಿ ಮತದಾರರನ್ನು ಪ್ರಭಾವಿಸುವಂತಹ ಹೇಳಿಕೆಗಳನ್ನು ನೀಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಜಿ.ಪಂ 39, ತಾ.ಪಂ 130ಸ್ಥಾನಗಳಿಗೆ ಚುನಾವಣೆ; 8.21ಲಕ್ಷ ಮತದಾರರು:ಉತ್ತರಕನ್ನಡ ಜಿಲ್ಲಾ ಪಂಚಾಯತ್‍ನ 39 ಸ್ಥಾನಗಳಿಗೆ ಹಾಗೂ ತಾಲೂಕು ಪಂಚಾಯತ್‍ನ ಒಟ್ಟು 130ಕ್ಷೇತ್ರಗಳಿಗೆ ಫೆಬ್ರವರಿ 13ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 821203 ಮತದಾರರು ಹಕ್ಕು ಚಲಾಯಿಸುವ ಅರ್ಹತೆ ಹೊಂದಿದ್ದಾರೆ.
ಜಿಲ್ಲಾ ಪಂಚಾಯತ್ ವಿವರ: ಕಾರವಾರ, ಅಂಕೋಲಾ, ಸಿದ್ದಾಪುರ ಮತ್ತು ಮುಂಡಗೋಡು ತಾಲೂಕುಗಳಲ್ಲಿ ತಲಾ ಮೂರು ಸ್ಥಾನಗಳಿವೆ. ಕುಮಟಾ, ಹೊನ್ನಾವರ, ಶಿರಸಿಯಲ್ಲಿ ತಲಾ 5ಸ್ಥಾನಗಳು, ಭಟ್ಕಳ ಮತ್ತು ಹಳಿಯಾಳದಲ್ಲಿ ತಲಾ 4ಸ್ಥಾನಗಳು, ಯಲ್ಲಾಪುರ ಮತ್ತು ಜೊಯಿಡಾ ತಾಲೂಕಿನಲ್ಲಿ ತಲಾ 2 ಜಿ.ಪಂ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ತಾಲೂಕು ಪಂಚಾಯತ್ ವಿವರ: ಕಾರವಾರ, ಅಂಕೋಲಾ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು, ಹಳಿಯಾಳ ಮತ್ತು ಜೊಯಿಡಾ ತಾಲೂಕುಗಳಲ್ಲಿ ತಲಾ 11ಸ್ಥಾನಗಳು, ಕುಮಟಾ ಮತ್ತು ಶಿರಸಿಯಲ್ಲಿ ತಲಾ 13ಸ್ಥಾನಗಳು ಹಾಗೂ ಹೊನ್ನಾವರದಲ್ಲಿ 15ತಾಲೂಕು ಪಂಚಾಯತ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಮತಗಟ್ಟೆಗಳು: ಒಟ್ಟು 1143 ಮತಗಟ್ಟೆಗಳು ಇದ್ದು, ಇದರಲ್ಲಿ 204ಸೂಕ್ಷ್ಮ, 107ಅತಿಸೂಕ್ಷ್ಮ ಮತ್ತು 832ಸಾಮಾನ್ಯ ಎಂದು ಗುರುತಿಸಲಾಗಿದೆ. ಕಾರವಾರದಲ್ಲಿ 98, ಅಂಕೋಲಾದಲ್ಲಿ 95, ಕುಮಟಾದಲ್ಲಿ 127, ಹೊನ್ನಾವರದಲ್ಲಿ 156, ಭಟ್ಕಳದಲ್ಲಿ 106, ಶಿರಸಿಯಲ್ಲಿ 138, ಸಿದ್ದಾಪುರದಲ್ಲಿ 106, ಯಲ್ಲಾಪುರ 88, ಮುಂಡಗೋಡು 72, ಹಳಿಯಾಳ 99 ಮತ್ತು ಜೊಯಿಡಾದಲ್ಲಿ 58 ಮತಗಟ್ಟೆಗಳಿವೆ.
ಮತದಾರರ ವಿವರ: ಜಿಲ್ಲೆಯಲ್ಲಿ 2015ರ ಡಿಸೆಂಬರ್ 27ರವರೆಗೆ 821203 ಮತದಾರರು ಇದ್ದಾರೆ. ಇವರಲ್ಲಿ 417397 ಮಂದಿ ಪುರುಷ ಹಾಗೂ 403806 ಮಂದಿ ಮಹಿಳಾ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಕಾರವಾರದಲ್ಲಿ 73127, ಅಂಕೋಲಾದಲ್ಲಿ 71980, ಕುಮಟಾದಲ್ಲಿ 101312, ಹೊನ್ನಾವರದಲ್ಲಿ 120003, ಭಟ್ಕಳದಲ್ಲಿ 87098, ಶಿರಸಿಯಲ್ಲಿ 93705, ಸಿದ್ದಾಪುರದಲ್ಲಿ 67315, ಯಲ್ಲಾಪುರ 45461, ಮುಂಡಗೋಡು 53011, ಹಳಿಯಾಳ 68771 ಮತ್ತು ಜೊಯಿಡಾದಲ್ಲಿ 39420ಮತದಾರರು ಇದ್ದಾರೆ. ಕಾರವಾರ ಹಾಗೂ ಅಂಕೋಲಾ ತಾಲೂಕುಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾರವಾರದಲ್ಲಿ 36050 ಪುರುಷ ಹಾಗೂ 37077 ಮಹಿಳಾ ಮತದಾರರು ಇದ್ದಾರೆ. ಅಂಕೋಲಾದಲ್ಲಿ 35812ಪುರುಷ ಹಾಗೂ 36168 ಮಹಿಳಾ ಮತದಾರರಿದ್ದಾರೆ.

loading...

LEAVE A REPLY

Please enter your comment!
Please enter your name here