ಪಕ್ಷೇತರ ಶಾಸಕನಾಗಿಯೇ ಮುಂದುವರೆಯುವೆ : ಯತ್ನಾಳ

0
25
loading...


ವಿಜಯಪುರ : ನಾನು ಪಕ್ಷೇತರ ಶಾಸಕನಾಗಿಯೇ ಮುಂದುವರೆಯುತ್ತೇನೆ. ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ನಾನು ಯಾವುದೇ ಪಕ್ಷದ ಬಾಗಿಲು ತಟ್ಟುವುದಿಲ್ಲ ಎಂದು ವಿಧಾನ ಪರಿಷತ್ ನೂತನ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ಶಿವಾನುಭವ ಮಂಟಪದಲ್ಲಿ ಸಿದ್ಧಸಿರಿ ಸೌಹಾರ್ದ ನಿಯಮಿತ ಸಿಬ್ಬಂದಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷವನ್ನು ವಿಜಯಪುರ ಜಿಲ್ಲೆಯಲ್ಲಿ ಕಟ್ಟಲು ನನು ಶಕ್ತಿ ಮೀರಿ ಶ್ರಮಿಸಿದ್ದೇನೆ, ಆದರೆ ಪಕ್ಷದ ಕೆಲವು ನಾಯಕರೇ ನನಗೆ ಟಿಕೇಟ್ ನೀಡಲು ನಿರಾಕರಿಸಿದರು. ಆದರೂ ಸಹ ನಾನು ಧೃತಿಗೆಡಲಿಲ್ಲ. ಅಭಿಮಾನಿಗಳ, ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಚುನಾವಣಾ ಕಣಕ್ಕಿಳಿದು ವಿಜಯಶಾಲಿಯಾಗಿದ್ದೇನೆ ಎಂದರು.
ಮತದಾರರ ಆಶೀರ್ವಾದ, ಅಭಿಮಾನಿಗಳ ಪ್ರೀತಿ-ವಿಶ್ವಾಸ ಹಾಗೂ ಗೋಮಾತೆಯ ಕೃಪಾಶೀರ್ವಾದದಿಂದ ರಾಜಕೀಯ ಜೀವನದಲ್ಲಿ ಪುನರ್‍ಜನ್ಮ ಪಡೆಯಲು ಸಾಧ್ಯವಾಯಿತು. ನನಗೆ ಬರುವ ವೇತನದಲ್ಲಿ ಅರ್ಧಪಾಲನ್ನು ಗೋಮಾತೆಯ ಸೇವೆಗೆ ಮೀಸಲಿರಿಸುವುದಾಗಿ ಘೋಷಿಸಿದರು.
ವಿಜಯಪುರದಿಂದ ಹಲವಾರು ದಶಕಗಳಿಂದ ವಿಧಾನ ಪರಿಷತ್‍ಗೆ ಯಾರೂ ಸಹ ಆಯ್ಕೆಯಾಗಿರಲಿಲ್ಲ. ಇದು ಕೇವಲ ನನ್ನ ಗೆಲುವಲ್ಲ, ವಿಜಯಪುರ ಜಿಲ್ಲೆಯ ಸ್ವಾಭಿಮಾನದ ಗೆಲುವಾಗಿದೆ ಎಂದ ಯತ್ನಾಳ, ನಾನು ರಾಜಕೀಯವಾಗಿ ಏಳು-ಬೀಳು ಕಂಡಿದ್ದೇನೆ, ಆದರೂ ಸಹ ಅನೇಕರು ಅಧಿಕಾರ ಇರಲಿ, ಇಲ್ಲದಿರಲಿ ನನ್ನ ಜೊತೆಗಿದ್ದಾರೆ, ಅವರೆಲ್ಲರ ಪ್ರೀತಿ-ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು.
ಹಲವಾರು ಜನ ನಾಯಕರನ್ನು, ಮುಖಂಡರನ್ನು ಬೆಳೆಸಿದೆ, ಅವರನ್ನು ಬೆಳೆಸಲು ನನ್ನ ಶಕ್ತಿಮೀರಿ ಪ್ರಯತ್ನಿಸಿದೆ, ಅದರಲ್ಲಿ ಕೆಲವು ನನ್ನ ಜೊತೆಗಿದ್ದಾರೆ, ಇನ್ನೂ ಕೆಲವರು ನನ್ನ ವಿರೋಧಿಗಳಾಗಿ ನನ್ನ ವಿರುದ್ಧವೇ ಷಡ್ಯಂತ್ರ ಮಾಡುವಷ್ಟು ದೊಡ್ಡವರಾಗಿದ್ದಾರೆ ಎಂದರು.
ನನ್ನ ರಾಜಕೀಯ ಜೀವನದಲ್ಲಿ ಯಾವತ್ತಿಗೂ ಸಹ ಜಾತಿ ರಾಜಕಾರಣ ಮಾಡಿಲ್ಲ. ಎಲ್ಲ ಸಮಾಜದವರನ್ನು ಸಮಾನವಾಗಿ ಕಂಡಿದ್ದೇನೆ, ಆದರೆ ನನ್ನ ರಾಜಕೀಯ ವಿರೋಧಿಗಳು ಇಲ್ಲ-ಸಲ್ಲದ ಆಪಾದನೆಗಳನ್ನು ನನ್ನೆ ಮೇಲೆ ಹೊರಿಸುತ್ತಿದ್ದಾರೆ ಎಂದರು.
ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ನಿರ್ದೇಶಕ ಸಂ.ಗು. ಸಜ್ಜನ, ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ರುದ್ರಗೌಡ ಪಾಟೀಲ, ವಿಜಯಕುಮಾರ ಚವ್ಹಾಣ, ಜಗದೀಶ ಕ್ಷತ್ರಿ, ಚಿದಾನಂದ ಇಟ್ಟಂಗಿ, ರಾಘವ ಅಣ್ಣಿಗೇರಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here