ಬರಿದಾಗಿ ನಿಂತ ಹಿರಣ್ಯಕೇಶಿ ಒಡಲು ಗೂಳೆ ಹೋರಟ ಜನ

0
24
loading...

**ಗೋಪಾಲ ಚಿಪಣಿ
ಹುಕ್ಕೇರಿ 16: ತಾಲೂಕಿನ ಬಡಕುಂದ್ರಿ ಹೊಳೆಮ್ಮಾ ದೇವಿ ದೇವಸ್ಥಾನ ಪಕ್ಕದಲ್ಲಿ ಪೂರ್ವಕ್ಕೆ ಮುಖಮಾಡಿ ಹರಿದಿರುವ ಹಿರಣ್ಯಕೇಶಿ ನದಿಯು ಬೇಸಿಗೆಯ ಮುಂಚಿತವೇ ತನ್ನ ವೈಭವವನ್ನು ಕಳೆದುಕೊಂಡು ಬರಿದಾದ ಒಡಲಾಗಿ ನಿಂತಿದೆ. ಪ್ರತಿ ವರ್ಷದ ವಾಡಿಕೆಯಂತೆ ಕಳೆದ 2015 ನೇ ಸಾಲಿನಲ್ಲಿ ಮುಂಗಾರು ಮಳೆಯು ಕೈಕೊಟ್ಟಿದ್ದು, ಅದರಿಂದ ತಾಲೂಕಿನ ಯಾವ ನದಿಗಳಿಗೂ ಮಹಾಪೂರ ಬರದೆ ಕೇವಲ ಕಾಟಾಚಾರಕ್ಕಾಗಿ ನದಿಗಳು ಹರಿಯುತ್ತಿದ್ದವು. ಅದರಂತೆ ರೈತರ ಆಶಾಕಿರಣವಾಗಿದ್ದ ಹಿಂಗಾರು ಮಳೆಯು ಸಹ ಈ ವರ್ಷ ಸಂಪೂರ್ಣ ಕೈಕೊಟ್ಟಿದ್ದು, ರೈತರು ಹಿಂಗಾರು ಬಿತ್ತನೆಯಾದ ಕಡಲೆ, ಜೋಳ, ಇತರೆ ಬೆಳೆಗಳು ಸಂಪೂರ್ಣವಾಗಿ ಬತ್ತಿ ಹೋಗಿವೆ.
ಅಲ್ಲದೇ ಜಾನುವಾರುಗಳಿಗೆ ಆಹಾರವಿಲ್ಲದಂತಾಗಿದೆ ತಾಲೂಕಿನ ಅರ್ಧಭಾಗದ ರೈತರು ಕಂಗಾಲಾಗಿ ಜಾನುವಾರುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಪರಿಸ್ಥಿತಿ ಉಂಟಾಗಿದೆ. ಹುಕ್ಕೇರಿ ತಾಲೂಕಿನ ಅರ್ಧ ಭಾಗದಷ್ಟು ರೈತರು ತಾಲೂಕಿನಲ್ಲಿ ಹರಿದಿರುವ ಹಿರಣ್ಯಕೇಶಿ ನದಿಯ ಮೇಲೆ ಅವಲಂಬನೆಯಾಗಿದ್ದು, ಈ ನದಿಯು ದಂಡೆಗೆ ಬರುವ ರೈತರು ಅವರ ಪ್ರಮುಖ ಬೆಳೆಯಾಗಿರುವ ಕಬ್ಬಿನ ಬೆಳೆ ಬೆಳಸುವುದೇ ಅವರ ಮೂಲ ಕಸಬು ಆಗಿರುತ್ತದೆ.
ಈ ಹಿರಣ್ಯಕೇಶಿ ನದಿಯು ಗಡಿ ಮಹಾರಾಷ್ಟ್ರದ ರಾಮತೀರ್ಥ ಬೆಟ್ಟ ಪ್ರದೇಶದಲ್ಲಿ ಉಗಮಗೊಂಡಿದ್ದು, ಅಲ್ಲಿಂದ ಮಹಾರಾಷ್ಟ್ರದ ಗಡಿಂಗ್ಲಜ ಮಾರ್ಗವಾಗಿ ಹರಿದು ಬಂದಿರುವ ಈ ಹಿರಣ್ಯಕೇಶಿ ನದಿಯು ಗಡಿಂಗ್ಲಜ ತಾಲೂಕಿನ ಅರ್ದ ಭಾಗದಷ್ಟು ರೈತರ ಕಬ್ಬಿನ ಬೆಳೆಗೆ ಜೀವನಾಡಿಯಾಗಿತ್ತು. ಅಲ್ಲದೇ ಕೆಲವೊಂದು ಗ್ರಾಮಗಳಿಗೆ ಈ ನದಿಯಿಂದ ಕುಡಿಯುವ ನೀರಿನ ವ್ಯವಸ್ಥೆಯು ಪೂರೈಕೆಯಾಗುತ್ತಿತ್ತು. ಅಲ್ಲಿಂದ ಹಿರಣ್ಯಕೇಶಿ ನದಿಯು ಪೂರ್ವಕ್ಕೆ ಹರಿದು ಕರ್ನಾಟಕದ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣ ಪ್ರವೇಶಿಸಿ ಸುಮಾರು ಹಳ್ಳಿ ಪಟ್ಟಣಗಳಿಗೆ ಕುಡಿಯುವ ನೀರಿನ ಆಸರೆಯಾಗಿದೆ. ಈ ನದಿಯು ನೇರವಾಗಿ ಹುಕ್ಕೇರಿ ತಾಲೂಕು ಪ್ರವೇಶಿಸಿದಾಗ ಸುಮಾರು 50 ರಿಂದ 60 ಕೀ.ಮೀ ವರೆಗೆ ಅಂದರೆ ಸಂಕೇಶ್ವರ ಬಡಕುಂದ್ರಿ ಮಾರ್ಗವಾಗಿ ತಾಲೂಕಿನ ಘೋಡಗೇರಿ ಹತ್ತಿರ ಹರಿದಿರುವ ಘಟಪ್ರಭೆ ನದಿಗೆ ಕೂಡಿ ಸಂಗಮ ಕ್ಷೇತ್ರವೆನಿಸಿಕೊಂಡಿದೆ.
ಸಂಕೇಶ್ವರದಿಂದ ಘೋಡಗೇರಿಯವರೆಗೆ ಸುಮಾರು 10 ಸಾವಿರ ಹೆಕ್ಟರ ಕಬ್ಬಿನ ಬೆಳೆಗೆ ಅನುಕೂಲವಾಗಿರುವ ಈ ನದಿಯು ಇತ್ತೀಚಿನ ದಿನಗಳಲ್ಲಿ ಸಂಪೂರ್ಣ ಬತ್ತಿ ಬರಿದಾಗಿದೆ. ನದಿಯಲ್ಲಿ ಜಾನುವಾರುಗಳಿಗೆ ಅಲ್ಲದೇ ಪಕ್ಷಿ ಪ್ರಾಣಿಗಳಿಗೂ ಕುಡಿಯಲು ನೀರಿಲ್ಲದಂತಾಗಿದೆ. ಅಲ್ಲದೇ ಅಕ್ಕ ಪಕ್ಕದ ಬಹುತೇಕ ಎಲ್ಲ ಕಬ್ಬಿನ ಬೆಳೆಗಳು ಸಹ ಒಣಗಿ ಹೋಗಿದೆ. ಹೀಗಾಗಿ ರೈತರು ಹಳ್ಳಿ ಪಟ್ಟಣಗಳು ಸಹಿತ 2016 ನೇ ಸಾಲಿನ ಬರಗಾಲ ಪರಿಸ್ಥಿತಿಯನ್ನು ಎದುರಿಸುವ ಸ್ಥಿತಿ ಎದುರಾಗಿ ನಿಂತಿದೆ.
ಮುಂಬರುವ ದಿನಗಳಲ್ಲಿ ಈ ಭಾಗದಲ್ಲಿ ಜಾತ್ರೆ ಸಮಾರಂಭಗಳು ಬಹಳ ಜರುಗುತ್ತಿದ್ದು, ಆದರೆ ಬೀಕರ ಬರಗಾಲದಿಂದಾಗಿ ಜನರು ಚಿಂತಿಸುವ ಪರಿಸ್ಥಿತಿಯು ನಿರ್ಮಾಣವಾಗಿದೆ. ಅದರಂತೆ ಸಮೀಪದ ಹಿಡಕಲ್ ಜಲಾಶಯವು ಸಹ ಈ ವರ್ಷದ ಮುಂಗಾರು ಹಂಗಾಮಿನಲ್ಲೂ ಭರ್ತಿಯಾಗದೆ ಬರಿದಾಗಿ ನಿಂತಿದೆ. ಅಲ್ಲದೆ ಅಕ್ಕ ಪಕ್ಕದ ಕೊಳವೆ ಭಾವಿಗಳು ಸಹ ಬತ್ತಿ ಹೋದ ಬಗ್ಗೆ ವರಿದಗಳು ಕೇಳಿ ಬರುತ್ತಿದ್ದು, ಸರ್ಕಾರವು ಬೇರೆ ಕಡೆಯಿಂದ ಟ್ಯಾಂಕರ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಮಾತ್ರ ಎಲ್ಲ ಜೀವರಾಶಿಗಳು ಬದುಕಲು ಸಾದ್ಯ. ಇಲ್ಲವಾದಲ್ಲಿ ದುಡಿಮೆಗಾಗಿ ಜನರು ಗೊಳೆ ಹೋಗುವ ಪರಿಸ್ಥಿತಿ ಬಹುತೇಕ ದೂರವಿಲ್ಲದಂತೆ ತೋರುತ್ತದೆ.

loading...

LEAVE A REPLY

Please enter your comment!
Please enter your name here