ಭ್ರಮರಾಂಬಾ ದೇವಸ್ಥಾನದ ನವೀಕರಣ ಕಾಮಗಾರಿಗೆ ಚಾಲನೆ

0
25
loading...


ಯಲ್ಲಾಪುರ : ಯಾವುದೇ ಪ್ರದೇಶದ ಮೂಲಭೂತ ಅವಶ್ಯಕತೆಗಳು ಸಮರ್ಥವಾಗಿ ಅನುಷ್ಠಾನಗೊಂಡರೆ ಅಲ್ಲಿಯ ನಿವಾಸಿಗಳ ಆಧುನಿಕ ಯುಗದ ಪರಿಕಲ್ಪನೆಗಳು ನನಸಾಗಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಭಾನುವಾರ ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಭರತನಹಳ್ಳಿಯ ಭ್ರಮರಾಂಬಾ ದೇವಸ್ಥಾನದ ಮಹಾದ್ವಾರ ಮತ್ತು ಚಂದ್ರಸಾಲೆಯ ನವೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಅಭಿವೃದ್ಧಿ ಎಂಬುದು ನಿರಂತರ ಪ್ರಕ್ರಿಯೆ ಎಂದು ಭಾವಿಸಿರುವ ನಾನು, ಅಧಿಕಾರಾವಧಿಯ ಮುಂದಿನ ಎರಡು ವರ್ಷಗಳಲ್ಲಿ ಯಲ್ಲಾಪುರಕ್ಕಿರುವ ಇಲ್ಲಗಳ ಪುರವೆಂಬ ಕುಖ್ಯಾತಿಯನ್ನು ಅಳಿಸಿ ಹಾಕುವ ಸಂಕಲ್ಪ ಮಾಡಿದ್ದೇನೆ ಎಂದರು. ತಾಲೂಕಿನ ವಿವಿಧ ಪ್ರದೇಶಗಳಲ್ಲಿರುವ ಜಿ.ಪಂ.ಗೆ ಸಂಬಂಧಿಸಿದ ರಸ್ತೆಗಳೆಲ್ಲವೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೊಳಪಟ್ಟರೆ, ಸುಧಾರಣೆ ಕುರಿತಂತ ಸಾರ್ವಜನಿಕರ ಬೇಡಿಕೆಯ ಈಡೇರಿಕೆ ಸುಲಭವಾಗುತ್ತದೆ ಎಂದ ಶಾಸಕರು, ಉಮ್ಮಚಗಿ-ಭರತನಹಳ್ಳಿ ನಡುವಿನ ರಸ್ತೆ ಸುಧಾರಣೆಯ ಸಾರ್ವಜನಿಕರ ಬೇಡಿಕೆಗೆ ಸಾಧ್ಯವಿದ್ದಷ್ಟು ಶೀಘ್ರ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಜಾತ್ರೆಯ ಸಂದರ್ಭದಲ್ಲಿ ಭರತನಹಳ್ಳಿಗೆ ಬಂದಾಗ ನೀಡಿದ್ದ ಭರವಸೆಯಂತೆ ಇಲ್ಲಿಯ ದೇವಾಲಯ ಅಭಿವೃದ್ಧಿಗೆ ಹಣ ನೀಡಿದ್ದೇನೆ ಎಂದ ಹೆಬ್ಬಾರ, ಕ್ಷೇತ್ರ ವ್ಯಾಪ್ತಿಯ ದೇವಾಲಯ, ಮಸೀದಿ, ಚರ್ಚ್‍ಗಳಿಗೆ ಈ ಬಾರಿ ಸುಮಾರು 4.5 ಕೋಟಿಗೂ ಮಿಕ್ಕು ಹಣ ನೀಡಲಾಗಿದೆ ಎಂದ ಅವರು, ವಿವೇಚನೆಯಂತೆ ದೇವಾಲಯಗಳಿಗೆ ಅನುದಾನ ನೀಡಲು ಅಡ್ಡಿಯಾಗಿರುವ ಕಾನೂನು ತಿದ್ದುಪಡಿ ಕುರಿತು, ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.
ಏನೇ ಇರಲಿ; ಐತಿಹಾಸಿಕ ದೇವಾಲಯದ ಪುನರುಜ್ಜೀವನ ನನ್ನ ಜವಾಬ್ದಾರಿಯಾಗಿದ್ದು, ಇದಕ್ಕೆ ಬದ್ಧನಾಗಿ ಮಂಗಲಕಾರ್ಯಗಳಿಗೂ ಅನುಕೂಲವಾಗುವ ಮಾದರಿಯಲ್ಲಿ ದೇವಾಲಯದ ಸುಧಾರಣಾ ಕಾಮಗಾರಿ ನಡೆಯುವುದೆಂದು ಆಶಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ಶಾಸಕರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ದೇವಾಲಯದ ಧರ್ಮದರ್ಶಿ ಮಂಡಳಿ ಗೌರವಾಧ್ಯಕ್ಷ ನಾ. ಸು. ಭರತನಹಳ್ಳಿ ಮಾತನಾಡಿ, ದೇವಾಲಯ ಮತ್ತು ರಸ್ತೆಗಳು ಆಯಾ ಗ್ರಾಮದ ಸಂಸ್ಕøತಿಯ ದ್ಯೋತಕವಾಗಿರುತ್ತದೆ. ಪ್ರಸ್ತುತ ನಮ್ಮ ಪ್ರದೇಶದ ದೇವಾಲಯ ಮತ್ತು ರಸ್ತೆಗಳ ಸುಧಾರಣಾ ಕಾರ್ಯ ಕೈಗೊಳ್ಳಲು ಶಾಸಕರ ಮೇಲಿನ ನಂಬಿಕೆಯಿಂದ ಆಗ್ರಹಿಸಲಾಗಿದೆ ಎಂದರು.
ಅತಿಥಿಗಳಾಗಿದ್ದ ಎ.ಪಿ.ಎಂ.ಸಿ ಅಧ್ಯಕ್ಷ ಎಂ. ಜಿ. ಭಟ್ಟ, ತಾ.ಪಂ ಸದಸ್ಯ ನರಸಿಂಹ ನಾಯ್ಕ, ಸಾಮಾಜಿಕ ಕಾರ್ಯಕರ್ತ ಪ್ರೇಮಾನಂದ ನಾಯ್ಕ ಮಾತನಾಡಿದರು.
ಗ್ರಾ.ಪಂ ಉಪಾಧ್ಯಕ್ಷ ಮಾಸ್ತ್ಯಪ್ಪ ಮಡಿವಾಳ, ಸದಸ್ಯರಾದ ಅರುಣಕುಮಾರ ಗೌಡರ್, ಭವಾನಿ ನಾಯ್ಕ ವೇದಿಕೆಯಲ್ಲಿದ್ದರು.
ಕಾವ್ಯಾ ಸಂಗಡಿಗರ ಭಗವದ್ಗೀತಾ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದೇವಸ್ಥಾನದ ವಿಶ್ವಸ್ಥ ಸಮಿತಿ ಅಧ್ಯಕ್ಷ ಹೇರಂಬ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ರಾಘವೇಂದ್ರ ಹೆಗಡೆ ನಿರ್ವಹಿಸಿದರು. ವಿನಾಯಕ ಭಟ್ಟ ನರೀಸರ ವಂದಿಸಿದರು.

loading...

LEAVE A REPLY

Please enter your comment!
Please enter your name here