ಮುಖ್ಯ ಮೀನು ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಸಭೆ

0
26
loading...


ಕಾರವಾರ : ನಗರದಲ್ಲಿರುವ ಮೀನು ಮಾರುಕಟ್ಟೆ ಸ್ಥಳಾಂತರವಾದರೆ ಮೀನುಗಾರರು ಮತ್ತೇ ಅತಂತ್ರರಾಗುವ ಸಾಧ್ಯತೆ ಹೆಚ್ಚಿದೆ. ಸ್ಥಳಾಂತರಕ್ಕೆ ವಿರೋಧ ವ್ಯಕ್ತ ಪಡಿಸಬೇಕಾಗಿದ್ದು ಎಲ್ಲ ಮೀನುಗಾರರು ಪಕ್ಷ, ಪಂಗಡ ಬದಿಗಿಟ್ಟು ಒಗ್ಗಟ್ಟಿನಿಂದ ಹೋರಾಡುವ ಅವಶ್ಯಕತೆ ಇದೆ ಎಂದು ನಗರಸಭೆ ಸದಸ್ಯ ಗಣಪತಿ ಉಳ್ವೇಕರ ಹೇಳಿದರು.
ಅವರು ನಗರದ ಕೋಡಿಬೀರ ದೇವಸ್ಥಾನದ ಸಭಾಂಗಣದಲ್ಲಿ ಮುಖ್ಯ ಮೀನು ಮಾರುಕಟ್ಟೆ ಸ್ಥಳಾಂತರ ವಿರೋಧಿಸಿ ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಕರೆಯಲಾದ ಮೀನುಗಾರರ ಸಭೆಯಲ್ಲಿ ಮಾತನಾಡಿದರು. ತಾಲೂಕಿನ ಮೀನುಗಾರರು ಹಲವಾರು ವರ್ಷಗಳಿಂದ ಸರಕಾರಿ ಯೋಜನೆಗಳಿಗಾಗಿ ಬಲಿಪಶುವಾಗುತ್ತಿದ್ದಾರೆ ಎಂದರು.
ಕಳೆದ ಬಾರಿ ಕಡಲತೀರದ ಮೇಲೆ ಮೀನುಗಾರರು ಕಟ್ಟಿಕೊಂಡ ಗುಡಿಸಲುಗಳನ್ನು ನೆಲಸಮ ಮಾಡಲಾಯಿತು. ಈಗ ಮತ್ತೆ ಮುಖ್ಯ ಮೀನು ಮಾರುಕಟ್ಟೆ ಸ್ಥಳಾಂತರಿಸುವ ಸಮಸ್ಯೆ ಮೀನುಗಾರರನ್ನು ಕಾಡುತ್ತಿದೆ. ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಮೀನುಮಾರುಕಟ್ಟೆ ಇರುವ ಸ್ಥಳದಲ್ಲಿ ಭವ್ಯವಾದ ಬಹುಮಹಡಿ ಕಟ್ಟಡ ತಲೆ ಎತ್ತಲಿದೆ. ಈಗ ಇರುವಲ್ಲಿಯೇ ಮೀನು ಮಾರುಕಟ್ಟೆ ನಿರ್ಮಿಸಿಕೊಡಬೇಕು ಎಂಬುದು ಮೀನುಗಾರರ ಬೇಡಿಕೆಯಾಗಿದೆ. ಕೆಲ ಸ್ಥಾಪಿತ ಹಿತಾಸಕ್ತಿಗಳಿಂದ ಒತ್ತಾಯ ಪೂರ್ವಕವಾಗಿ ಪೆÇಲೀಸ್ ಬಲದೊಂದಿಗೆ ಹಳೆಯ ಮೀನು ಮಾರುಕಟ್ಟೆ ಕಟ್ಟಡ ಕೆಡವಲಾಗುವುದು ಎಂದು ಇಲ್ಲಿನ ಮಹಿಳೆಯರಿಗೆ ಧಮಕಿ ಮಾತು ಕೇಳಿ ಬರುತ್ತಿದೆ. ಇದನ್ನು ಎದುರಿಸಲು ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದರು.
ನಗರಸಭೆ ವತಿಯಿಂದ ಕಡಲತೀರದ ಮೇಲೆ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಮೀನು ಮಾರುಕಟ್ಟೆಗೆ ಸ್ಥಳಾಂತರವಾಗಬೇಕಾದರೆ, ಈಗಿರುವ ಹಳೆಯ ಮೀನು ಮಾರುಕಟ್ಟೆ ಇರುವಲ್ಲಿಯೇ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಿಸಿಕೊಡಲಾಗುವುದು ಎಂದು ನಗರಸಭೆ ಹಾಗೂ ಜಿಲ್ಲಾಡಳಿತ ಬರೆದುಕೊಡಬೇಕು. ಆನಂತರ ಮಾತ್ರ ಮೀನು ಮಾರುಕಟ್ಟೆ ನಿರ್ಮಾಣವಾಗುವ ತನಕ ತಾತ್ಕಾಲಿಕವಾಗಿ ಸ್ಥಳಾಂತರವಾಗಲು ಒಪ್ಪಬಹುದು. ಆದರೆ ಮೀನುಗಾರ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೆಲ ಜನಪ್ರತಿನಿಧಿಗಳು ತಮ್ಮದೇ ಹಠಮಾರಿ ಧೋರಣೆ ಅನುಸರಿಸಿದರೆ, ಮೀನುಗಾರರು ಸಂಘಟಿತರಾಗಿ ಹೋರಾಟದ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹರಿಕಂತ್ರ ಖಾರ್ವಿ ಸಹಕಾರಿ ಸಂಘದ ಅಧ್ಯಕ್ಷ ಕೆ. ಟಿ. ತಾಂಡೇಲ್ ಮಾತನಾಡಿ, ಕೆಇಬಿ ಹತ್ತಿರದಲ್ಲಿರುವ 24 ಗುಂಟೆ ಜಮೀನಿನಲ್ಲಿ ಮೀನು ಮಾರುಕಟ್ಟೆ ನಿರ್ಮಿಸಕೊಡಲಾಗುವುದು ಎಂದು ನಗರಸಭೆ ಹೇಳುತ್ತಿದೆ. ಆದರೆ ಅದು ಮೀನುಮಾರುಕಟ್ಟೆ ನಿರ್ಮಿಸಲು ಯೋಗ್ಯವಾದ ಜಾಗವಲ್ಲ ಎಂದು ಸರಕಾರದ ಏಜೆನ್ಸಿಗಳೇ ವರದಿ ನೀಡಿವೆ. ಈ ಅವೈಜ್ಞಾನಿಕ ರೀತಿಯ ಸ್ಥಳಾಂತರದ ವಿರುದ್ಧ ನಗರಸಭೆಯ ಎಲ್ಲ ಸಭೆಗಳಲ್ಲಿ ಧ್ವನಿ ಎತ್ತಿದ್ದೇನೆ.ಈ ಬಗ್ಗೆ ಮೀನುಗಾರರ ಮುಖಂಡರ, ಮಹಿಳೆಯರ ಅಭಿಪ್ರಾಯ ಪಡೆಯಲು ವಿಶೇಷ ಸಭೆ ಕರೆಯಲು ಒತ್ತಾಯ ಪಡಿಸುತ್ತಲೇ ಬಂದಿದ್ದೇನೆ. ಆದರೆ ನಗರಸಭೆಯವರು ಸೂಕ್ತವಾಗಿ ಸ್ಪಂಧಿಸುತ್ತಿಲ್ಲ ಎಂದರು.
ಮೀನುಮಾರಾಟ ಫೆಡರೇಷನ್ ಅಧ್ಯಕ್ಷ ಗಣಪತಿ ಮಾಂಗ್ರೆ, ಚಿತ್ತಾಕುಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜು ತಾಂಡೇಲ್, ವಕೀಲ ಶ್ರೀನಾಥ ತಾರಿ, ಮಹೇಶ ಹರಿಕಂತ್ರ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು. ನಂತರ ಕಾರವಾರ ಮೀನುಮಾರುಕಟ್ಟೆ ಸ್ಥಳಾಂತರ ವಿರೋಧಿ ಹೋರಾಟ ಸಮಿತಿ ರಚಿಸುವುದರ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಸಮಿತಿಯ ಮುಖ್ಯ ಸಂಚಾಲಕರಾಗಿ ಗಣಪತಿ ಉಳ್ವೇಕರರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರವಾರ ತಾಲೂಕಿನ ಮುದಗಾದಿಂದ ಮಾಜಾಳಿಯ ವರೆಗಿನ ಪ್ರತಿಯೊಂದು ಗ್ರಾಮಗಳಲ್ಲಿ ನೆಲೆಸಿರುವ ಮೀನುಗಾರ ಸಮಾಜದ ಮುಖಂಡರು,ತಾಲೂಕು ಪಂಚಾಯತ್,ಗ್ರಾಮ ಪಂಚಾಯತ್ ಹಾಗೂ ನಗರಸಭೆಯಲ್ಲಿರುವ ಮೀನುಗಾರ ಸದಸ್ಯರನ್ನೊಳಗೊಂಡಂತೆ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಮೀನುಮಾರುಕಟ್ಟೆ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಾ ಹರಿಕಂತ್ರ, ಕೊಂಕಣ ಖಾರ್ವಿ ಸಮಾಜದ ಪ್ರಮುಖ ಶಿವಾನಂದ ಕುಡ್ತಳಕರ, ಅಂಬಿಗ ಸಮಾಜದ ಆನಂದು ಅಂಬಿಗ, ಬಾಬು ಅಂಬಿಗ, ಹರಿಕಂತ್ರ-ಖಾರ್ವಿ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ ಹರಿಕಂತ್ರ, ನಗರಸಭೆ ಸದಸ್ಯರಾದ ರವೀಂದ್ರ ಬಾನಾವಳಿ, ಪ್ರಶಾಂತ ಹರಿಕಂತ್ರ, ಸಂತೋಷ ತಾಂಡೇಲ್, ವಿನಾಯಕ ಹರಿಕಂತ್ರ, ಲೋಕು ತಾಂಡೇಲ್ ಮುಂತಾದ ಪ್ರಮುಖರು ಇದ್ದರು.

loading...

LEAVE A REPLY

Please enter your comment!
Please enter your name here