ಕುಮಾರಸ್ವಾಮಿ, ಶೆಟ್ಟರ, ಜೋಶಿ ಬ್ರಹ್ಮಾಂಡ ಭ್ರಷ್ಟರು : ಬಸವರಾಜ ದೇವರು

0
52
loading...

ಬೈಲಹೊಂಗಲ 07: ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದ ಎಲ್ಲ ಸಮುದಾಯದವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಜಗದೀಶ ಶೆಟ್ಟರ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ ಬ್ರಹ್ಮಾಂಡ ಭ್ರಷ್ಟರಾಗಿದ್ದಾರೆಂದು ಧಾರವಾಡದ ಮನಸೂರ ರೇವಣಸಿದ್ದೇಶ್ವರ ಮಹಾಮಠದ ಬಸವರಾಜ ದೇವರು ಹೇಳಿದರು.
ಅವರು ರವಿವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇವರೆಲ್ಲರೂ ಸಿದ್ದರಾಮಯ್ಯವರಿಗೆ ವಾಚ್ ಪ್ರಕರಣದಲ್ಲಿ ಅವರನ್ನು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಮುಗ್ದ ಸಮಾಜದ ಸಿದ್ದರಾಮಯ್ಯನವರನ್ನು ಅವಹೇಳನಕಾರಿಯಾಗಿ ಮಾತನಾಡಿ, ಅವರನ್ನು ತೇಜೋವಧೆ ಮಾಡಲು ಹುನ್ನಾರ ನಡೆಸಿದ್ದಾರೆಂದು ಆಪಾದಿಸಿದರಲ್ಲದೆ ಇದನ್ನು ಕುರುಬ ಸಮಾಜ ಸಹಿಸುವದಿಲ್ಲವೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದಾಗ ಆರೋಪ ಪ್ರತ್ಯಾರೋಪ ಮಾಡುವದು ಸಾಮಾನ್ಯ. ಅಸಂಖ್ಯಾತ ಶರಣರಿಗೂ ಕೂಡಾ ಶೋಷಿತ ನಡೆದಿತ್ತು. ಸಿದ್ದರಾಮಯ್ಯನವರ ಚಾರಿತ್ರ್ಯ ವಧೆಗೆ ಎಂದು ಸಹಿಸುವದಿಲ್ಲ. ಕರ್ನಾಟಕ ಅಭೀವೃದ್ದಿ ಪಡಿಸುವಲ್ಲಿ ಸಿದ್ದರಾಮಯ್ಯ ಶ್ರೇಷ್ಠರಾಗಿದ್ದಾರೆ ಎಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರವನ್ನು ಅಂತರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಅಭಿವೃದ್ದಿಗೋಳಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಕ್ರಾಂತವೀರ ಸಂಗೋಳ್ಳಿ ರಾಯಣ್ಣನ ಅಭಿವೃದ್ದಿ ಪ್ರಾಧಿಕಾರದ ವಿಧೇಯಕಕ್ಕೆ ವಿಧಾನಸೌದದಲ್ಲಿ ಅಂಗೀಕಾರ ನೀಡಿರುವದು ಸ್ವಾಗತಾರ್ಹವಾಗಿದೆ. ಖಾನಾಪೂರ, ಸವದತ್ತಿ, ಸುರಪುರ ಮತ್ತು ಬೈಲಹೊಂಗಲ ತಾಲೂಕಿನಲ್ಲಿ ಸಂಗೊಳ್ಳಿ ರಾಯಣ್ಣನ ಕುರುಹುಗಳಿವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಮೀತಿಯು ಸಮಾಜ ಕಲ್ಯಾಣ, ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕಂದಾಯ ಇಲಾಖೆಗಳ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು, ಸಂಸದರು, ಜಿಪಂ ಅಧ್ಯಕ್ಷ, ಸಂಬಂದಪಟ್ಟ ಇಲಾಖೆ ಕಾರ್ಯದರ್ಶಿಗಳ, ನಾಮನಿರ್ದೇಶಿತ ಸದಸ್ಯ ನಂದಗಡ ಮತ್ತು ಸಂಗೊಳ್ಳಿ ಗ್ರಾಪಂ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಪ್ರಾಧಿಕಾರದ ಆಯುಕ್ತರು ಕಾರ್ಯದರ್ಶಿಯಾಗಿರುತ್ತಾರೆ.
ಪ್ರಾಧಿಕಾರಕ್ಕೆ ಸರಕಾರ ರೂ.50 ಕೋಟಿ ಮೀಸಲಿಟ್ಟಿದೆ. ಪ್ರಾಧಿಕಾರವು ನಂದಗಡದಲ್ಲಿರುವ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ, ಸಮಾಧಿ ಸ್ಥಳ, ಸ್ನಾನಕ್ಕಾಗಿ ಬಳಸುತ್ತಿದ್ದ ಕೆರೆ, ಆಲದ ಮರ, ರಾಧಾಕೃಷ್ಣ ದೇವಸ್ಥಾನ, ಗುಹೆಗಳು ಮತ್ತು ರಾಯಣ್ಣನ ಜನ್ಮ ಸ್ಥಳವಾದ ಸಂಗೊಳ್ಳಿ, ಗರಡಿ ಮನೆ, ರಾಯಣ್ಣನ ಮನೆ, ರಕ್ತಮಾನ್ಯದ ಭೂಮಿಯನ್ನು ಪಾರಂಪರಿಕ ತಾಣವನ್ನಾಗಿ ಅಭಿವೃದ್ದಿ ಪಡಿಸಲು ಮುಂದಾಗಿರುವ ಸರಕಾರದ ಕ್ರಮ ಶ್ಲಾಘಣೀಯವಾಗಿದೆ ಎಂದರು.
ಕಳೆದ ಬುಧವಾರ ವಿದಾನಸೌದದಲ್ಲಿ ಕರೆದ ಆಯವ್ಯಯ ಚರ್ಚೆಯ ಸಭೆಗೆ ಹಿಂದುಳಿದ ವರ್ಗಗಳ ವಿವಿಧ ಸಂಘಸಂಸ್ಥೆಗಳನ್ನು ಆಹ್ವಾನಿಸಲಾಗಿತ್ತು. ಈ ಸಭೆಯಲ್ಲಿ ನಾನು ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚಿಸುವ ಕುರಿತು ಅಧ್ಯಕ್ಷತೆ ವಹಿಸಿದ್ದ ಸಮಾಜ ಕಲ್ಯಾಣ ಸಚಿವ ಹಾಗೂ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದೆ. ಪ್ರಾಧಿಕಾರಕ್ಕೆ 100 ಕೋಟಿ ರೂ. ಮೀಸಲಿಟ್ಟು ರಾಯಣ್ಣನ ಸಂಗೊಳ್ಳಿ, ನಂದಗಡ ಗ್ರಾಮಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಒತ್ತಾಯಿಸಿದ್ದನ್ನು ಸ್ಮರಿಸಿದರು.
ಕಳಸಾ ಬಂಡೂರಿ, ಮಹದಾಯಿ ನದಿ ಜೋಡಣೆಗೆ ಒತ್ತಾಯಿಸಿ ಪ್ರಧಾನಿ ಬಳಿ ಮತ್ತೊಮ್ಮೆ ಸರ್ವಪಕ್ಷಗಳ ನಿಯೋಗ ಒಯ್ಯುತ್ತಿರುವ ಕ್ರಮ ಸ್ವಾಗತಾರ್ಹವಾಗಿದ್ದು ರಾಜ್ಯದಲ್ಲಿ ಬರಗಾಲ ಛಾಯೆ ಆವರಿಸಿದ್ದರಿಂದ ಮುಂಬರುವ ದಿನಗಳಲ್ಲಿ ಈ ಭಾಗದ ಜನತೆ, ದನಕರುಗಳು ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುವ ಮುನ್ಸೂಚನೆ ಇದ್ದು ಕೂಡಲೇ ರಾಜ್ಯದ ಸಂಸದರು, ಪಕ್ಷಭೇದ ಮರೆತು ನಾಡಿನ ಹಿತ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವಿಸೃತವಾಗಿ ಚರ್ಚೆ ಮಾಡಿ ಗೋವಾ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಲು ಪ್ರಧಾನಿಗಳು ಮಧ್ಯಸ್ಥಿಕೆ ವಹಿಸವದು ಅವಶ್ಯವಾಗಿದೆ ಎಂದರು.
ಸಂಸದ ಪ್ರಲ್ಹಾದ ಜೋಶಿ ಪ್ರಾಮಾಣಿಕ ಪ್ರಯತ್ನ ಮಾಡುವದು ಅವಶ್ಯವಾಗಿದ್ದು ಲೋಕಸಭೆಯಲ್ಲಿ ಯಾವುದೇ ವಿಷಯಕ್ಕೆ ಮೇಜು ಕುಟ್ಟಿ ಕುಟ್ಟಿ ಮಾತನಾಡುವ ಜೋಶಿ ಅವರು ರಾಜ್ಯದ ಹಿತವನ್ನೆ ಬಲಿಕೊಡುತ್ತಾ ಬಂದಿದ್ದಾರೆ. ಪ್ರಧಾನಿ ಬಳಿ ನಿಯೋಗ ಒಯ್ದಾಗ ಪ್ರಾಮಾಣಿಕವಾಗಿ ಮೋದಿ ಅವರ ಮನವೊಲಿಸಿ, ಈ ಭಾಗದ ಜನತೆಯ ಹಿತ ಕಾಪಾಡುವಗೋಸ್ಕರ ತ್ಯಾಗ ಮನೋಭಾವನೆ, ಬದ್ದತೆ ತೋರ್ಪಡಿಸಬೇಕೆಂದು ಒತ್ತಾಯಿಸಿದರು.
ರೈತರು ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೂ ಅವರಿಗೆ ಬೆಲೆ ಇಲ್ಲ ಬೆಂಗಳೂರಿನಲ್ಲಿ ಶಾಶ್ವತ ನೀರಾವರಿಗಾಗಿ ಒತ್ತಾಯಿಸಿ, ಪ್ರತಿಭಟಿಸುವ ಸಂದರ್ಭದಲ್ಲಿ ರೈತರ ಮೇಲೆ ಪೊಲೀಸರ ದೌರ್ಜನ್ಯ, ಸರ್ಕಾರದ ನಡುವಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಶಿವರಾತ್ರಿ ನಿಮಿತ್ಯ ರೇವಣ ಸಿದ್ದೇಶ್ವರ ಮಹಾಮಠದಲ್ಲಿ ಮಾ.7 ರಿಂದ 9 ರವರೆಗೆ ವಿಶೇಷ ಶಿವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ ಪ್ರತಿ ದಿವಸ ಪ್ರವಚನ, ಜಪ, ತಪ, ಪಂಚಾಕ್ಷರಿ ಮಂತ್ರ ಪಠಣ, ಸಾಮೂಹಿಕ ಪ್ರಾರ್ಥನೆ, ಅಭಿಷೇಕ, ಸಹಸ್ರ ಬಿಲ್ವಾರ್ಚನೆ ಹಾಗು ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ನೀಲಗಾರ, ಕನಕ ಯುವ ಸೇನೆ ಅಧ್ಯಕ್ಷ ವಿಠಲ ಅಜ್ಜನಕಟ್ಟಿ, ವಿಜಯಕುಮಾರ ದಳವಾಯಿ, ಸಿದ್ದಪ್ಪ ಡೊಳ್ಳನ, ರಾಯಪ್ಪ ಚಂದರಗಿ, ಸುನೀಲ ಪಠಾತ, ಮಂಜುನಾಥ ಗೋವನಕೊಪ್ಪ ಮುಂತಾದವರು ಇದ್ದರು.

loading...

LEAVE A REPLY

Please enter your comment!
Please enter your name here