ಮಗು ಹೆಣ್ಣು ಅಥವಾ ಗಂಡು ದೇವರ ಕೂಡುಗೆ: ಹನುಮಂತ

0
58
loading...


ಸಿದ್ದಾಪುರ : ಮಗು ಹೆಣ್ಣಾಗಲಿ ಅಥವಾ ಗಂಡಾಗಲಿ,ಅದು ದೇವರ ಕೊಡುಗೆ. ಯಾವುದೇ ಮಗುವಿಗೆ ಉತ್ತಮ ಶಿಕ್ಷಣ ನೀಡುವುದರೊಂದಿಗೆ ಉತ್ತಮ ಸಾಮಾಜಿಕ ವ್ಯಕ್ತಿಯಾಗಿ ರೂಪಿಸುವುದು ಪಾಲಕರು ಹಾಗೂ ತಂದೆ-ತಾಯಿಗಳ ಕರ್ತವ್ಯ’ ‘ಎಂದು ಸ್ಥಳೀಯ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಧೀಶ ಹನುಮಂತ ಜಿ.ಎಚ್.ಅಭಿಪ್ರಾಯಪಟ್ಟರು.
ತಾಲ್ಲೂಕು ಕುಟುಂಬ ಮತ್ತು ಕಲ್ಯಾಣ ಇಲಾಖೆ,ತಾಲ್ಲೂಕು ಕಾನೂನು ಸೇವಾ ಸಮಿತಿ,ವಕೀಲರ ಸಂಘ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ಪಟ್ಟಣದ ಬಾಲಭವನದಲ್ಲಿ ಶುಕ್ರವಾರ ನಡೆದ ‘ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಮಾಡುವ ತಂತ್ರ(ದುರ್ಬಳಕೆ ಮತ್ತು ತಡೆ)-1994’ ಕಾಯ್ದೆಯ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜದಲ್ಲಿ ಸಮತೋಲನವಿರಲು ಗಂಡು ಮಕ್ಕಳೊಂದಿಗೆ ಹೆಣ್ಣು ಮಕ್ಕಳು ಕೂಡ ಅಗತ್ಯ’ ಎಂದರು.
‘ ನಮ್ಮ ಸಮಾಜದಲ್ಲಿರುವ ಪುತ್ರ ವ್ಯಾಮೋಹದಿಂದ ಪ್ರತಿಯೊಬ್ಬ ದಂಪತಿಗೂ ಗಂಡು ಮಗು ಬೇಕು ಎಂಬ ಸಂಕುಚಿತ ಭಾವನೆ ಕಂಡು ಬರುತ್ತದೆ.ಗಂಡು ಮಗು ಅಥವಾ ಹೆಣ್ಣು ಮಗುವಿನ ನಡುವೆ ಭೇದ-ಭಾವ ಮಾಡಬಾರದು ಎಂಬ ಅರಿವು ಉಂಟಾಗುವ ಅಗತ್ಯವಿದೆ’ ಎಂದರು.
ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಮಾತನಾಡಿ,’ಗಂಡು ಮಗುವೇ ಬೇಕು ಎಂಬ ಧೋರಣೆ ನಮ್ಮ ಪುರುಷ ಪ್ರಧಾನವಾದ ಸಮಾಜದಲ್ಲಿದೆ. ಆದರೆ ಇಂದು ಸಮಾಜದಲ್ಲಿ ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕಾರ್ಯನಿರ್ವಹಿಸುವುದನ್ನು ಕಾಣುತ್ತೇವೆ’ ಎಂದರು.
ಮುಖ್ಯ ಅತಿಥಿಯಾಗಿದ್ದ ಸಹಾಯಕ ಸರ್ಕಾರಿ ಅಭಿಯೋಜಕ ರಾಜಶೇಖರ ಮಲ್ಲಿಕಾರ್ಜುನ ತಿಳಿಗಂಜಿ ಈ ಕಾಯ್ದೆಯ ಕುರಿತು ವಿಡಿಯೊ ಪ್ರದರ್ಶನದೊಂದಿಗೆ ವಿಶೇಷ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಂಗಲಾ ವಸಂತ ನಾಯ್ಕ,ತಹಶೀಲ್ದಾರ್ ಡಿ.ಜಿ.ಹೆಗಡೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ,ಎಎಸ್ಐ ಮೋಹಿನಿ ಶೆಟ್ಟಿ, ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್,ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಆರ್.ವಿ.ಮಡಿವಾಳ,ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ ಗೌಡರ್ ಮತ್ತಿತರರು ಉಪಸ್ಥಿತರಿದ್ದರು.ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಪುಷ್ಪಾ ಗೌಡರ್ ಅಧ್ಯಕ್ಷತೆ ವಹಿಸಿದ್ದರು.
ದಾಕ್ಷಾಯಿಣಿ ಪ್ರಾರ್ಥನಾ ಗೀತೆ ಹಾಡಿದರು. ವೆಂಕಟ್ರಮಣ ಸ್ವಾಗತಿಸಿದರು. ಮಮತಾ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here