ಖಾನಾಪುರ ಅರಣ್ಯದಲ್ಲಿ ಹೆಚ್ಚಿದ ಮರಗಳ್ಳತನ: ತನಿಖೆಗೆ ಪರಿಸರವಾದಿಗಳ ಆಗ್ರಹ

0
20
loading...

ಖಾನಾಪುರ : ಕಳೆದ ಎರಡು ತಿಂಗಳ ಅಧಿಯಲ್ಲಿ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹಲವು ಮರಗಳ್ಳತನ ಪ್ರಕರಣಗಳು ವರದಿಯಾಗಿದ್ದು, ಅರಣ್ಯ ಇಲಾಖೆ ಕೂಡಲೇ ತಾಲೂಕಿನ ಅರಣ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಗಳ್ಳತನದ ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸಬೇಕು ಮತ್ತು ಮುಂದಿನ ದಿನಗಳಲ್ಲಿ ಮರಗಳನ್ನು ಕಡೆದು ಹಾಕುವುದನ್ನು ತಪ್ಪಿಸಲು ಕೂಡಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಾಲೂಕಿನ ಪರಿಸರವಾದಿಗಳು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿರುವ ವಿವಿಧ ಅರಣ್ಯ ವಲಯಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆದಿರುವ ಬೆಲೆಬಾಳುವ ಸಾಗವಾನಿ, ಬೀಟೆ, ಹೊನ್ನೆ, ನಂದಿ, ತೇಗ, ನೇರಲ, ಮತ್ತಿ, ಸೀಸಂ ಮುಂತಾದ ಮರಗಳನ್ನು ಮರಗಳ್ಳರು ಕಡಿದುಹಾಕುತ್ತಿದ್ದು, ಈಗಾಗಲೇ ಭೀಕರ ಬರಗಾಲ ಹಾಗೂ ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ವನ್ಯಜೀವಿಗಳ ಪ್ರಾಣಕ್ಕೆ ಈಗ ಮರಗಳ್ಳರು ಸಂಚಕಾರ ಒಡ್ಡಿದ್ದಾರೆ. ಮರ ಕಳ್ಳತನದ ಜೊತೆಗೆ ಮೂರ್ನಾಲ್ಕು ಪ್ರಾಣಿಗಳ ಬೇಟೆ ಪ್ರಕರಣಗಳೂ ವರದಿಯಾಗಿದ್ದು, ಖಾನಾಪುರ ಅರಣ್ಯಕ್ಕೆ ಭದ್ರತೆಯ ಲೋಪವಾಗಿರುವುದನ್ನು ಪುಷ್ಠೀಕರಿಸಿವೆ.
ಮರಗಳ್ಳರಿಂದ ವನ್ಯಜೀವಿಗಳಿಗೆ, ಪರಿಸರಕ್ಕೆ ಮತ್ತು ಇಲಾಖೆಯ ಮಾನ ಮರ್ಯಾದೆಗೆ ಧಕ್ಕೆ ಉಂಟಾಗುತ್ತಿದೆ. ತಾಲೂಕಿನಲ್ಲಿ ಸಾವಿರಾರು ವರ್ಷಗಳಿಂದ ದಟ್ಟವಾದ ಮತ್ತು ಸಹಜವಾದ ಸ್ವಾಭಾವಿಕ ಕಾಡು ಇದ್ದು, ಈ ಕಾಡಿನಲ್ಲಿ ಅಪರೂಪದ ವನ್ಯಜೀವಿಗಳು, ಆಳೆತ್ತರದ ಮರಗಳು ಹಾಗೂ ಔಷಧಿಸಸ್ಯಗಳಿವೆ. ಈ ಅರಣ್ಯದ ವನ್ಯ ಸಂಪತ್ತಿನ ಮೇಲೆ ಇತ್ತೀಚಿನ ದಿನಗಳಲ್ಲಿ ಮರಗಳ್ಳರು ವಕ್ರದೃಷ್ಟಿ ಬೀರಿದ್ದು, ಅರಣ್ಯ ಅಧಿಕಾರಿಗಳ ಕಣ್ಣು ತಪ್ಪಿಸಿ ನಿರಂತರವಾಗಿ ಮರಗಳನ್ನು ಕಡಿದು ಉರುವಲಿಗೆ, ಮನೆ ನಿರ್ಮಾಣ ಮತ್ತು ಗೃಹೋಪಯೋಗಿ ವಸ್ತುಗಳ ನಿರ್ಮಾಣಕ್ಕೆ ಹಾಗೂ ಇಟ್ಟಿಗೆ ಭಟ್ಟಿಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಇಲಾಖೆ ಪತ್ತೆಮಾಡಿದ್ದು, ಅರಣ್ಯದಂಚಿನ ಭಾಗದಲ್ಲಿ ಇಟ್ಟಿಗೆ ತಯಾರಿಸುವ ಭಟ್ಟಿ ಹೊಂದಿದವರೇ ಹೆಚ್ಚಿನ ಪ್ರಮಾಣದಲ್ಲಿ ಕಾಡಿಗೆ ತೆರಳಿ ಮರಗಳನ್ನು ಕಡಿದುಹಾಕಿದ್ದಾರೆ ಎಂಬ ಆತಂಕದ ವಿಷಯವನ್ನು ಅರಣ್ಯ ಸಂಚಾರಿ ಮತ್ತು ವಿಚಕ್ಷಕ ದಳದ ಅಧಿಕಾರಿಗಳು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಈಗಾಗಲೇ ಫೆ.28ರಂದು ಬೆಖಲಿಗೆ ಬಂದ ತಾಲೂಕಿನ ತಿವೋಲಿ ಅರಣ್ಯದ ಮರಗಳ್ಳತನ ಪ್ರಕರಣ ಮತ್ತು ಕಳೆದ ವಾರ ವರದಿಯಾದ ಮೇರಡಾ ಅರಣ್ಯದ ಮರ ಕಳ್ಳತನ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಬೆಳಗಾವಿಯ ಅರಣ್ಯ ಸಂಚಾರಿ ದಳದ ಎಸಿಎಫ್ ಅಶೋಕ ಪಾಟೀಲ ಹಾಗೂ ಅರಣ್ಯ ಸಿಬ್ಬಂದಿಯ ತಂಡ ಘಟನೆ ವರದಿಯಾದ ಕಡೆಗಳಲ್ಲಿ ಅನಿರೀಕ್ಷಿತ ದಾಳಿಯನ್ನು ನಡೆಸಿ ಕಡಿದು ಉರುಳಿಸಿದ ಮರಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೆ.25ರಿಂದ ಏ.24ರವರೆಗಿನ ಅವಧಿಯಲ್ಲಿ ಖಾನಾಪುರ, ಲೋಂಡಾ ಹಾಗೂ ನಾಗರಗಾಳಿ ವಲಯಗಳಲ್ಲಿ ವರದಿಯಾದ ಪ್ರಕರಣಗಳಲ್ಲಿ ಲಕ್ಷಾಂತರ ಮೌಲ್ಯದ ಕಟ್ಟಿಗೆಯನ್ನು ವಶಕ್ಕೆ ಪಡೆದು ಒಟ್ಟು ಆರು ಜನರನ್ನು ಬಂಧಿಸಲಾಗಿದೆ. ಮರಗಳ್ಳರ ಜೊತೆ ಶಾಮೀಲಾಗಿ ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆ ಎಂದು ಆರೋಪಿಸಿ ಇಲಾಖೆಯ ಮೂವರು ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ. ಮೇಲಧಿಕಾರಿಗಳ ನಿರ್ಲಕ್ಷ ಧೋರಣೆ ಮತ್ತು ಮರಗಳ್ಳರಿಗೆ ಇಲಾಖೆಯ ರಹಸ್ಯ ಮಾಹಿತಿ ನೀಡಿ ಉಂಡ ಮನೆಗೆ ಎರಡು ಬಗೆಯುತ್ತಿರುವ ಅರಣ್ಯ ಇಲಾಖೆಯ ಗಾರ್ಡ್ ಮತ್ತು ಫಾರೆಸ್ಟರ್ ಗಳಿಂದಾಗಿ ತನಿಖೆಗೆ ಅಡಚಣೆ ಉಂಟಾಗಿದೆ ಎಂಬ ಬೇಸರ ಇಲಾಖೆಯ ತನಿಖಾಧಿಕಾರಿಗಳಿಂದ ವ್ಯಕ್ತವಾಗಿದೆ. ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಇಲಾಖೆಯ ಮೇಲಧಿಕಾರಿಗಳು ಅರಣ್ಯ ರಕ್ಷಣೆಗೆ ಮುಂದಾಗಬೇಕು ಎಂಬುದು ಪರಿಸರವಾದಿಗಳ ಒಕ್ಕೂರಲ ಆಗ್ರಹವಾಗಿದೆ.
ಖಾನಾಪುರ ತಾಲೂಕಿನ ಅರಣ್ಯವನ್ನು ಮರಗಳ್ಳರು ಅನಧೀಕೃತವಾಗಿ ಪ್ರವೇಶಿಸಿ ಕಾಡಿನಲ್ಲಿ ಬೆಳೆದಿದ್ದ ಬೆಲೆಬಾಳುವ ಮರಗಳನ್ನು ಕಡಿದು ಉರುಳಿಸಿದ ಮೂರು ಪ್ರಕರಣಗಳು ಕಳೆದ 60 ದಿನಗಳಲ್ಲಿ ವರದಿಯಾಗಿವೆ. ಘಟನೆ ವರದಿಯಾದ ನಂತರ ಇಲಾಖೆಯ ಮುಖ್ಯಸ್ಥರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಹೋಗಿದ್ದು, ಇಲ್ಲಿಯವರೆಗೆ ಒಟ್ಟು 4 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಕರ್ತವ್ಯದಲ್ಲಿ ಲೋಪ ಎಸಗಿರುವ ಆಧಾರದ ಮೇಲೆ ಇಲಾಖೆಯ ಕೆಲ ಸಿಬ್ಬಂದಿಯ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗಿದೆ.
ಅಶೋಕ ಪಾಟೀಲ,
ಎಸಿಎಫ್ ಅರಣ್ಯ ಸಂಚಾರಿ ದಳ

loading...

LEAVE A REPLY

Please enter your comment!
Please enter your name here