ನೀರಿನ ಸಮಸ್ಯೆ ಪರಿಹರಿಸದಿದ್ದರೆ ಅಮಾನತು

0
15
loading...

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಯರಾಂ ಎಚ್ಚರಿಕೆ
ಹುಕ್ಕೇರಿ 23: ಗ್ರಾಮಸ್ಥರ ಸಮಸ್ಯೆ ಅರಿತು ಪರಿಹರಿಸಲು ಸಂಬಳ ನೀಡುತ್ತಾರೆ. ನೀವು ಕಾರ್ಯಾಲಯದಲ್ಲಿ ಕುಳಿತು ಕೆಲಸ ಮಾಡಲು ಅಲ್ಲಾ, ಬರಗಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಅದನ್ನು ನಿರ್ವಹಿಸಲು ವಿಫಲರಾದಲ್ಲಿ ಅಮಾನತ್ತು ಮಾಡುತ್ತೇನೆ ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಪಾಟೀಲ ಮತ್ತು ಪಿ.ಡಿ.ಓ ಡಾಂಗೆ ಮೇಲೆ ಜಿಲ್ಲಾಧಿಕಾರಿ ಕೋಪದಿಂದ ಕಿಡಿಕಾರಿದ ಪ್ರಸಂಗ ತಾಲೂಕಿನ ಹುಲ್ಲೋಳಿಹಟ್ಟಿ ಗ್ರಾಮದಲ್ಲಿ ಜರುಗಿತು.
ಶನಿವಾರ ಸಂಜೆ ದಿಢೀರನೆ ತಾಲೂಕಿಗೆ ಆಗಮಿಸಿದ ಜಿಲ್ಲಾಧಿಕಾರಿ ನೇರವಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವ ಹುಲ್ಲೋಳಿ ಹಟ್ಟಿ ಗ್ರಾಮಕ್ಕೆ ತೆರಳಿದರು. ಅಲ್ಲಿ ದನಗಳ ಸೆಗಣಿ, ಕಲುಷಿತ ಪ್ರದೇಶದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಗಂಗಾಳದಲ್ಲಿ ಸರಬರಾಜು ಮಾಡುತ್ತಿದ್ದ ಸ್ಥಳದಲ್ಲಿ ಜನತೆ ಗಲೀಜಾದ ಸ್ಥಳದಲ್ಲಿ ಕೊಡಗಳನ್ನು ಇಟ್ಟು ಗಂಗಾಳದಲ್ಲಿ ಹೊಡೆದಾಟದ ಮೂಲಕ ನೀರು ತೆಗೆದುಕೊಳ್ಳುತ್ತಿದ್ದನ್ನು ಕಂಡ ಜಿಲ್ಲಾಧಿಕಾರಿ ತಕ್ಷಣ ಇಂತಹ ಗಲೀಜಾದ ಸ್ಥಳದಲ್ಲಿ ತೆಗೆದುಕೊಂಡ ನೀರನ್ನು ಸೇವಿಸುವುದರಿಂದ ಕಾಲರಾ ಹಾಗೂ ಮತ್ತಿತರ ಕಾಹಿಲೆ ಬರುತ್ತವೆ ಎಂಬ ಸಾಮಾನ್ಯ ಜ್ಞಾನ ಇಲ್ಲವೇ ಜಲಕುಂಭಗಳಲ್ಲಿ ನೀರು ಸಂಗ್ರಹಿಸಿ ಜನತೆಗೆ ಒದಗಿಸಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದಾಗ ಜಲಕುಂಭಕ್ಕೆ ನೀರು ಹಾಕಲು ಪಂಪಸೆಟ್ ಅವಶ್ಯಕತೆ ಇದ್ದು,ಅದಕ್ಕೆ ಹಣಕಾಸಿನ ಕೊರತೆ ತಿಳಿಸಿದ ತಹಶೀಲ್ದಾರರಿಗೆ ಅಲ್ಲಮ್ಮಾ ತಕ್ಷಣ ಇದರ ವ್ಯವಸ್ಥೆ ಮಾಡಿ ನಮ್ಮ ಅನುದಾನದಲ್ಲಿ ನಿಮಗೆ 20ಸಾವಿರ ಮಂಜೂರಾತಿ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ರಾಜಶ್ರೀ ಜೈನಾಪೂರ ಮಾತನಾಡಿ ತಾಲೂಕಿನಲ್ಲಿ ಸಮಸ್ಯೆ ಪರಿಶೀಲಿಸಲು ತೆರಳಿದಾಗ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬರುವುದಿಲ್ಲ ಹಾಗೂ ಸರಿಯಾಗಿ ಸ್ಪಂದಿಸುವುದಿಲ್ಲವೆಂದರು. ಅದಕ್ಕೆ ಜಿಲ್ಲಾಧಿಕಾರಿ ಇವನ ಮೇಲೆ ವರದಿ ಸಲ್ಲಿಸಿ ಅಮಾನತ್ತು ಮಾಡುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ತಹಶೀಲ್ದಾರರಿಗೆ ನಾಳೆ ಮರಳಿ ನಾನು ಪರಿಶೀಲಿಸುತ್ತೇನೆ. ನೀರಿನ ಸಂಗ್ರಹಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನಿರ್ದಾಕ್ಷಣ್ಯವಾಗಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥರೊಂದಿಗೆ ಮಾತನಾಡಿ ನೀರನ್ನು ಸರತಿ ಸಾಲಿನಲ್ಲಿ ನಿಂತು ಪಡೆದುಕೊಳ್ಳಿ ನೆಲದ ಮೇಲೆ ಕೊಡಗಳನ್ನು ಇಟ್ಟು ನೀರು ತೆಗೆದುಕೊಳ್ಳಬೇಡಿ. ಗಲೀಜಾದ ನೀರು ಕುಡಿಯುವುದರಿಂದ ಇಲ್ಲದ ಕಾಹಿಲೆಗೆ ಆಹ್ವಾನ ನೀಡುತ್ತೀರಿ. ನಿಮಗೆ ಬೇಕಾದ ಎಲ್ಲ ಸೌಲಭ್ಯ ಕೊಡಲಾಗುತ್ತದೆ. ನಿಮ್ಮೊಂದಿಗೆ ಜಿಲ್ಲಾಡಳಿತ ಇದೆ ಎಂದು ಭರವಸೆ ಮತ್ತು ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇಗೌಡ,ಜಿಲ್ಲಾ ಪಂಚಾಯತಿ ಯೋಜನಾಧಿಕಾರಿ ಎ.ಡಿ.ದೊಡಮನಿ,ಜಿ.ಪಂ ಸದಸ್ಯೆ ಅನ್ನಪೂರ್ಣಾ ಮಾಳಗೆ,ತಹಶೀಲ್ದಾರ ಸೈಯಿದಾ ಆಫ್ರೀನ್ ಭಾನು ಬಳ್ಳಾರಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಕಾರಿ ಅಭಿಯಂತರ ಎ.ಬಿ.ಪಟ್ಟಣಶೆಟ್ಟಿ, ಕೃಷಿ ಇಲಾಖೆ ತಾಲೂಕಾ ಸಹಾಯಕ ನಿರ್ದೇಶಕಿ ಜಯಶ್ರೀ ಹಿರೇಮಠ,ಬಿ.ಇ.ಓ ಪ್ರಭಾವತಿ ಪಾಟೀಲ,ಸಿ.ಪಿ.ಐ ಸಂದೀಪಸಿಂಗ ಮುರಗೋಡ, ಪಿ.ಎಸ್.ಐ ಹಸನ್ ಮುಲ್ಲಾ, ಕುಮಾರ ಹಿತ್ತಲಮನಿ ಸೇರಿದಂತೆ ತಾಲೂಕಾಡಳಿತದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here