ಇಲ್ಲಿ ಕನಿಷ್ಟ ಸೌಲಭ್ಯಕ್ಕೂ ಕೊರತೆ

0
14
loading...

ಪ್ರಯಾಣಿಕರಿಗೆ ನೆರಳಿಲ್ಲದ ಶೇಡಬಾಳ ರೈಲು ನಿಲ್ದಾಣ

ಶಿವಾನಂದ ಪದ್ಮಣ್ಣವರ
ಚಿಕ್ಕೋಡಿ 07: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಂಚಿನಲ್ಲಿರುವ ಅಥಣಿ ತಾಲೂಕಿನ ಶೇಡಬಾಳ ರೈಲು ನಿಲ್ದಾಣದ ಪ್ಲಾಟ್ ಫಾರ್ಮಗೆ ಮಳೆ ಹಾಗೂ ಬೇಸಿಗೆ ಕಾಲದಲ್ಲಿ ತಂಗಲು ಪ್ರಯಾಣಿಕರಿಗೆ ತಂಗುದಾನದಂತಹ ಕನಿಷ್ಟ ಸೌಲಭ್ಯಗಳನ್ನು ನೀಡದೇ ಇರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೋನೊ, ಮೆಟ್ರೋದಂತಹ ಯೋಜನೆಗಳನ್ನು ಜಾರಿಗೊಳಿಸಿ ಜಾಗತಿಕ ಮಟ್ಟದಲ್ಲಿ ಹೆಸರು ಗಳಿಸಲು ಮುಂದಾಗಿರುವ ರೇಲ್ವೆ ಪ್ರಾಧಿಕಾರ ಹಲವಾರು ದಶಕಗಳ ಹಿಂದೆ ನಿರ್ಮಿಸಿದ ಕಟ್ಟಡಗಳನ್ನೆ ನೆಚ್ಚಿಕೊಂಡು ಇಲ್ಲಿರುವ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸದೇ ಇರುವದರಿಂದ ಸಾರ್ವಜನಿಕರು ಕಿರಿ ಕಿರಿ ಎದುರಿಸುವಂತಾಗಿದೆ.
ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರುವ ಮಂಗಸೂಳಿ ಮಸ್ಹಾಳಕಾಂತ ದೇವಸ್ಥಾನಕ್ಕೆ ಶೇಡಬಾಳ ರೈಲು ನಿಲ್ದಾಣ ಅತೀ ಸಮೀಪದಲ್ಲಿರುವದರಿಂದ ಪ್ರತಿನಿತ್ಯ ರೈಲು ಮುಖಾಂತರ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಭಾಗದ ನೂರಾರು ಭಕ್ತರು ಇಲ್ಲಿಯೇ ಇಳಿದುಕೊಳ್ಳುತ್ತಾರೆ. ಅಲ್ಲದೇ ಅಥಣಿ ತಾಲೂಕಿನ ಜನಸಾಮಾನ್ಯರಿಗೆ ಕೇಂದ್ರೀಯ ರೈಲು ನಿಲ್ದಾಣವಾಗಿ ಮಾರ್ಪಟ್ಟಿದೆ. ಆದರೆ ಇಲ್ಲಿ ಇಳಿದುಕೊಳ್ಳುವ ಪ್ರಯಾಣಿಕರಿಗೆ ಕುಡಿಯುವ ನೀರು, ಪ್ಲಾಟ ಫಾರ್ಮ ಮೇಲೆ ಶೆಡ್ ನಿರ್ಮಿಸುವದು, ಪ್ರಯಾಣಿಕರ ಸುರಕ್ಷತೆಗಾಗಿ ಸಿಬ್ಬಂದಿ ನಿಯೋಜಿಸುವಂತಹ ಸಾಮಾನ್ಯ ಕಾರ್ಯಗಳನ್ನು ಕೈಕೊಳ್ಳಲು ರೈಲು ಇಲಾಖೆಗೆ ಸಾಧ್ಯವಾಗಿಲ್ಲ.
ಶೇಡಬಾಳ ರೈಲು ನಿಲ್ದಾಣದಲ್ಲಿ ಕನ್ನಡಮ್ಮದೊಂದಿಗೆ ಅನಿಸಿಕೆ ಹಂಚಿಕೊಂಡಿರುವ ಅಲ್ಲಿಯ ಪ್ರಯಾಣಿಕರು, ರೇಲ್ವೆ ಇಲಾಖೆ ನಗರ ಪ್ರದೇಶಗಳನ್ನೇ ಪ್ರಮುಖ ಗುರಿಯಾಗಿಸಿಕೊಂಡು ಅಲ್ಲಿಯ ರೈಲು ನಿಲ್ದಾಣಗಳಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ಹೈಟೆಕ್ ಸ್ಪರ್ಶ ನೀಡುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿರುವ ನಿಲ್ದಾಣಗಳು ಕನಿಷ್ಟ ಸೌಕರ್ಯಗಳಿಂದಲೂ ವಂಚಿತವಾಗಿದೆ. ದೇಶದಲ್ಲಿ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತವೆ ಎಂಬುದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅರಿಯಬೇಕು. ಅನಾಧಿ ಕಾಲದಲ್ಲಿ ಕಲ್ಪಿಸಲಾದ ಸೌಕರ್ಯಗಳಿಂದಲೇ ಸಂತೃಪ್ತಿಪಟ್ಟುಕೊಳ್ಳಬೇಕಾಗಿರುವ ಶೇಡಬಾಳ ರೈಲು ನಿಲ್ದಾಣಕ್ಕೂ ಹೆಚ್ಚಿನ ಸೌಕರ್ಯಗಳ ಅಗತ್ಯಯಿದೆ.
ಮೂಲವಾಗಿ ರೈಲು ಬರುವವರೆಗೆ ರೈಲಿನ ದಾರಿ ಕಾಯುತ್ತ ನಿಲ್ದಾಣದಲ್ಲಿ ಮಳೆ-ಬಿಸಿಲು ಲೆಕ್ಕಿಸದೇ ನಿಲ್ಲುವ ಪ್ರಯಾಣಿಕರಿಗೆ ಪ್ಲಾಟ ಫಾರ್ಮನ ಮೇಲೆ ತಂಗುದಾನ ನಿರ್ಮಿಸುವದು, ರೈಲು ಹಳಿಗಳ ಮೇಲೆ ಒಡಾಡುವದನ್ನು ತಪ್ಪಿಸಲು ಓವ್ಹರ ಬ್ರಿಡ್ಜ (ಮೇಲ್ಸೇತುವೆ)ನಿರ್ಮಿಸುವದು ಸೇರಿದಂತೆ ಅನೇಕ ಸೌಕರ್ಯಗಳ ಕೊರತೆಯಿದ್ದರೂ ಈ ಭಾಗದ ರೇಲ್ವೆ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಈ ಭಾಗದ ಪ್ರಯಾಣಿಕರಲ್ಲಿ ಬೇಸರ ತರಿಸಿದೆ.
ಅಲ್ಲದೇ ರೈಲು ನಿಲ್ದಾಣದಲ್ಲಿ ಈ ಹಿಂದೆ ಸಿಬ್ಬಂದಿ ವಸತಿ ಉದ್ದೇಶಕ್ಕಾಗಿ ನಿರ್ಮಿಸಿರುವ ವಸತಿಗೃಹಗಳು ಹಾವು-ಚೇಳುಗಳ ನೆಲೆಯಾಗಿದ್ದು, ಇವುಗಳ ನಿರ್ವಹಣೆಗೂ ಆಸಕ್ತಿ ತೋರದ ಇಲಾಖೆ ಶೇಡಬಾಳ ರೈಲು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಯ ವಸತಿ ಸೌಲಭ್ಯ ಕಲ್ಪಿಸುವಲ್ಲಿಯೂ ಹಿಂದೆ ಬಿದ್ದಿದೆ. ಅವಸಾನದಂಚಿನಲ್ಲಿರುವ ವಸತಿ ಗೃಹಗಳ ನಿರ್ಮಾಣಕ್ಕೂ ಅಧಿಕಾರಿಗಳು ಮನಸ್ಸು ಮಾಡಬೇಕಿದೆ.
ಒಟ್ಟಾರೆಯಾಗಿ ಕುಡಿಯುವ ನೀರು, ತಂಗುದಾನ, ಓವ್ಹರ ಬ್ರಿಡ್ಜ, ಪ್ರಯಾಣಿಕರ ಸುರಕ್ಷತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಶೇಡಬಾಳ ರೈಲು ನಿಲ್ದಾಣ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದ ಅಭಿವೃದ್ಧಿಯಾಗಲಿ ಎಂಬುದು ಪತ್ರಿಕೆಯ ಆಶಯ.
ಪ್ರತಿಕ್ರಿಯೆ:
ರೈಲು ಇಲಾಖೆಗೆ ಪತ್ರ ಬರೆಯುವೆ:
ಕನ್ನಡಮ್ಮ ದಿನಪತ್ರಿಕೆ ಶೇಡಬಾಳ ರೈಲು ನಿಲ್ದಾಣದ ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದಿದ್ದು, ಅಲ್ಲಿರುವ ಸಮಸ್ಯೆಗಳ ವಿವರ ಪಡೆದು ರೈಲು ಇಲಾಖೆಗೆ ಪತ್ರ ಬರೆದು ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವದು.
ಪ್ರಕಾಶ ಹುಕ್ಕೇರಿ
ಸಂಸದರು, ಚಿಕ್ಕೋಡಿ

loading...

LEAVE A REPLY

Please enter your comment!
Please enter your name here