ಕೃಷಿ ಇಲಾಖೆಯಿಂದ ರೈತರಿಗೆ ಕೃಷಿ ಉಪಕರಣ ವಿತರಣೆ

0
54
loading...

ಗೋಕಾಕ 21: ರೈತರಿಗಾಗಿ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಕೃಷಿ ಇಲಾಖೆಯಿಂದ ವಿತರಿಸಲಾಗುವ ಸಹಾಯಧನದ ವಿವಿಧ ಬೆಳೆಗಳ ಬೀಜಗಳು ಹಾಗೂ ಕೃಷಿ ಉಪಕರಣಗಳನ್ನು ಪಡೆದುಕೊಂಡು ವೈಜ್ಞಾನಿಕ ರೀತಿಯಲ್ಲಿ ಬೆಳೆ ಬೆಳೆದು ಕೊಳ್ಳಬೇಕೆಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಶಾಸಕರ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಕೃಷಿ ಇಲಾಖೆಯಿಂದ ಕೃಷಿಭಾಗ್ಯ ಯೋಜನೆಯಡಿ ಪಾಲಿಹೌಸ (ನೆರಳು ಪರದೆ) ನಿರ್ಮಿಸಿಕೊಂಡ ಫಲಾನುಭವಿಗೆ ಸಹಾಯಧನದ ಚೆಕ್ ಮತ್ತು ರೈತರಿಗೆ ಪ್ರಸಕ್ತ ಹಂಗಾಮಿಗೆ ಬೀಜ ವಿತರಣೆ ನೆರವೇರಿಸಿ ಮಾತನಾಡುತ್ತಿದ್ದರು.
ಕಡಿಮೆ ನೀರಿನ ಉಪಯೋಗದಿಂದ ಬೆಳೆಯುವ ಬೆಳೆಗಳ ಕಡೆಗೆ ರೈತರು ಹೆಚ್ಚಿನ ಗಮನ ನೀಡುವದರ ಜೊತೆಗೆ ಮಣ್ಣಿನ ಫಲವತ್ತತೆ ಕಾಯುವ ಸಾವಯವ ಕೃಷಿ ಅಳವಡಿಸಿಕೊಳ್ಳಲು ರೈತರಿಗೆ ಕರೆ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಎಮ್. ನದಾಫ ಅವರು ಮಾತನಾಡಿ 2016ನೇ ಸಾಲಿನ ಮುಂಗಾರು ಹಂಗಾಮಿಗೆ ತಾಲೂಕಿಗೆ ಬೇಕಾಗುವ ಸೋಯಾಬಿನ, ಗೋವಿನಜೋಳ, ಜೋಳ, ಹೆಸರು ಇತ್ಯಾದಿ ಬೆಳೆಗಳ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ, ವಿವಿಧ ಪಿಕೆಪಿಎಸ್ ಗಳಲ್ಲಿ ಈಗಾಗಲೆ ದಾಸ್ತಾನು ಮಾಡಲಾಗಿದ್ದು ಸಾಮಾನ್ಯ ರೈತರಿಗೆ ಶೇ. 50 ರಿಯಾಯತಿ ದರದಲ್ಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 75 ರಿಯಾಯತಿ ದರದಲ್ಲಿ ವಿತರಿಸಲಾಗುವದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಾಗೂ ಬೀಜ ವಿತರಣಾ ಕೇಂದ್ರಗಳಲ್ಲಿ ಪಡೆಯಬೇಕೆಂದು ತಿಳಿಸಿದರು.
ತಾಲೂಕಿನ ಮಮದಾಪೂರ ಗ್ರಾಮದ ರೈತ ಮಹಿಳೆ ಶ್ರೀಮತಿ ರೇಣುಕಾ ಗಣಪತಿ ಭುತಪ್ಪಗೋಳ ಅವರಿಗೆ ಪಾಲಿ ಹೌಸ (ನೆರಳು ಪರದೆ) ನಿರ್ಮಿಸಿಕೊಂಡಿದ್ದಕ್ಕಾಗಿ ರೂ. 16 ಲಕ್ಷ 20 ಸಾವಿರ ರೂ,ದ ಸಹಾಯಧನದ ಚೆಕ್‍ವನ್ನು ಹಾಗೂ ರೈತರಿಗೆ ಬೀಜಗಳ ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ತಾ.ಪಂ. ಸದಸ್ಯ ಸಿದ್ದಪ್ಪ ಕಮತ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಎಲ್.ಜನ್ಮಟ್ಟಿ, ಮಮದಾಪೂರ ಗ್ರಾ.ಪಂ. ಸದಸ್ಯರಾದ ರಮೇಶ ಬನ್ನೂರ, ಈರಣ್ಣ ಜನ್ಮಟ್ಟಿ, ಅಶೋಕ ಹಟ್ಟಿ, ಭೀಮಪ್ಪ ಚಿಕ್ಕನ್ನವರ, ಮಹೇಶ ಪಾಟೀಲ, ಶೌಕತ ಹಿಡಕಲ್ಲ ಸೇರಿದಂತೆ ಅನೇಕರು ಇದ್ದರು.

loading...

LEAVE A REPLY

Please enter your comment!
Please enter your name here