ಪ್ರಾಚೀನ ಸಾಹಿತ್ಯದಲ್ಲಿ ಮೌಲ್ಯಾರಾಧನೆ ಸಮೃದ್ಧವಾಗಿತ್ತು: ಸಾಹಿತಿ ದೊಡ್ಡರಂಗೇಗೌಡ

0
51
loading...

ಶಿರಸಿ : ಅಪಮೌಲ್ಯಗಳ ಅಖಾಡವಾಗಿರುವ ನಾಗರಿಕ ಸಮಾಜಕ್ಕೆ ಕಾಯಕಲ್ಪ ನೀಡಲು ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ಮತ್ತೆ ಸತ್ಯನಿಷ್ಠೆ, ನ್ಯಾಯನೀತಿ, ಧರ್ಮ ಪರಿಪಾಲನೆ ಪುನರ್ ಪ್ರತಿಷ್ಠಾಪನೆ ಆಗಬೇಕಾದ ಅಗತ್ಯತೆ ಇದೆ ಎಂದು ಸಾಹಿತಿ ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.
ಶಿರಸಿಯ ಯಡಳ್ಳಿಯಲ್ಲಿ ಶನಿವಾರ ಆಯೋಜಿಸಿರುವ ಎರಡು ದಿನಗಳ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಕರ್ನಾಟಕ ಪ್ರಾಂತ ಪ್ರಥಮ ಸಾಹಿತ್ಯ ಸಮ್ಮಳನದ ಸರ್ವಾಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಭಾರತೀಯ ಸಾಂಪ್ರಾಯಿಕ ಹಾಗೂ ಸಾಮಾಜಿಕ ಮೌಲ್ಯಗಳು ಕನ್ನಡ ಸಾಹಿತ್ಯದಲ್ಲಿ ಹೇರಳವಾಗಿವೆ. ಇತಿಹಾಸ, ಪುರಾಣಗಳಲ್ಲಿ ಹಲವು ಪ್ರಸಂಗಗಳಲ್ಲಿ ಮೌಲ್ಯ ಹಾಗೂ ಆದರ್ಶಗಳನ್ನು ಎತ್ತರಿಸುವ ಸಾಹಿತ್ಯ ಕೃತಿಗಳು ವಿಫುಲವಾಗಿವೆ. ಆದರೆ ಅಂಥ ಆದರ್ಶಗಳ ಪಾಲನೆ ಸಮಾಜದಲ್ಲಿ ಇಂದು ನಾಪತ್ತೆಯಾಗಿರುವುದು ವಿಪರ್ಯಾಸವಾಗಿದೆ. ಇದರಿಂದಾಗಿ ನಾಗರಿಕ ಸಮಾಜ ಇಂದು ಅಪಮೌಲ್ಯಗಳ ಅಖಾಡವಾಗಿದೆ. ಇದಕ್ಕೆ ಕಾಯಕಲ್ಪದ ಅವಶ್ಯಕತೆ ಇದೆ. ಎಲ್ಲಿಯವರೆಗೆ ನಮ್ಮ ಕುಟುಂಬಗಳು ಸತ್ಯನಿಷ್ಠೆ, ನ್ಯಾಯನೀತಿ, ಧರ್ಮ ಪರಿಪಾಲನೆ ಮಾಡುವುದಿಲ್ಲವೋ ಆವರೆಗೂ ಭಾರತೀಯ ಸಮಾಜಕ್ಕೆ ಕಾಯಕಲ್ಪ ಸಾಧ್ಯವಾಗದು. ಈ ನಿಟ್ಟಿನಲ್ಲಿ ನಮ್ಮ ಸಮುದಾಯಗಳ ಪರಿವರ್ತನೆ ಆಗಬೇಕು ಎಂದರು.
ಪ್ರಾಚೀನ ಸಾಹಿತ್ಯದಲ್ಲಿ ಮೌಲ್ಯಾರಾಧನೆ ಸಮೃದ್ಧವಾಗಿತ್ತು. ಆದರೆ ಈ ವಿಷಯದಲ್ಲಿ ಉತ್ಪಾತದ ಅಂಚಿಗೆ ತಲುಪಿದ್ದೇವೆ. ಈ ಬಗ್ಗೆ ಸಾಹಿತ್ಯಾಸಕ್ತರು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಸೀಮೋಲ್ಲಂಘನೆ ಮಾಡುವಾಗ ಸಾಮಾಜಿಕ ಮೌಲ್ಯಗಳ ಕಡೆಗೂ ಸಾಹಿತಿಗಳು ಗಮನ ನೀಡಬೇಕು. ಒಂದು ವೇಳೆ ಸಮಾಜದ ಸಾಮರಸ್ಯದ ಮೂಲವಾದ ಅಲಿಖಿತ ಒಪ್ಪಂದಗಳನ್ನು ಮೀರುವಾಗ ಧಕ್ಕೆಯಾದರೆ ಸಾಹಿತಿಗಿಂತಲೂ ಇಡಿಯ ಸಮಾಜ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ಸ್ನೇಹ, ಪ್ರೀತಿ, ವಿಶ್ವಾಸ ಎಲ್ಲವೂ ಮೌಲ್ಯಗಳಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ರಾಜಮಾರ್ಗವನ್ನೂ ಹಿರಿಯರು ತೋರಿದ್ದಾರೆ. ಆದರೆ ಅವುಗಳನ್ನು ಉಚಾಯಿಸಿ ಸಂಪೂರ್ಣ ಸ್ವೇಚ್ಛಾಚಾರಕ್ಕೆ ಇಳಿದರೆ ಮಾನವೀಯ ಸಂಬಂಧಗಳಿಗೆ ಕೊಡಲಿಪೆಟ್ಟು ಬೀಳುತ್ತದೆ. ಆಗ ಮಾನವ ಬಹಳ ಬವಣೆ ಪಡಬೇಕಾಗುತ್ತದೆ. ಹೀಗಾಗಿ ಮನುಷ್ಯ ಮನುಷ್ಯನಿಗೆ ಮೊದಲು ಒಳ್ಳೆಯದನ್ನು ಮಾಡುವ ಸಂಕಲ್ಪ ಮಾಡಬೇಕು. ಹಾಲಾಹಲದ ನಡುವೆಯೂ ಅಮೃತಬಿಂದು ಹುಡುಕುವ ಮನೋಧರ್ಮ ಬೆಳೆಸಿಕೊಂಡರೆ ಮೌಲ್ಯಗಳು ಸಂವರ್ಧನೆ ಪಡೆಯುತ್ತವೆ ಹಾಗೂ ಆ ಮೂಲಕ ಮಾನವ ಕೂಡ ಬೆಳೆಯುತ್ತಾನೆ ಎಂದು ತಿಳಿಸಿದರು.
ಮೌಲ್ಯಗಳಿಂದ ಬಾಳಿಗೆ ಅತ್ಯುತ್ತಮ ಸಂಸ್ಕಾರ ಪ್ರಾಪ್ತವಾಗುತ್ತದೆ. ಆದರೆ ಆಧುನಿಕ ಕಾಲದಲ್ಲಿ ಅವುಗಳನ್ನು ಶ್ರದ್ಧೆಯಿಂದ ಅಳವಡಿಕೆ ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಜೀವನ ಬರಡಾಗುತ್ತದೆ. ಹೀಗೆ ಟೊಳ್ಳಾದ ಬದುಕಿಗೆ ಯಾವ ಅರ್ಥವೂ ಇರುವುದಿಲ್ಲ. ಜೀವನ ನೆಲೆಗೆ ಬೆಲೆ ಬರಲು ಬದುಕುವ ಕಲೆ ಕಲಿಯಬೇಕು. ಅದು ಮಿಳಿತವಾಗಲು ಮೌಲ್ಯದ ಸೆಲೆ ಮಾನವನಿಗೆ ಅತ್ಯಾವಶ್ಯಕ ಎಂದ ದೊಡ್ಡರಂಗೇ ಗೌಡರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಈ ಕಾರ್ಯಕ್ರಮ ಸದಾಶಯದ ಸದಭಿರುಚಿಯ ಲಾಂಛನಕ್ಕೆ ಸಾಕ್ಷಿಯಾಗಿದೆ. ಪ್ರೀತಿಗಿಂತ ಮಿಗಿಲಾದ ಮೌಲ್ಯವಿಲ್ಲ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಮಾಜಕ್ಕೆ ತಿಳಿಸುವ ಪ್ರಯತ್ನ ಶ್ಲಾಘನೀಯ ಎಂದರು.
ಸಮಾಹಿತ ಸಂಪಾದಕ ರಾಘವೇಂದ್ರ ಪಾಟೀಲ ಸಮ್ಮೇಳನ ಉದ್ಘಾಟಿಸಿದರು. ಪರಿಷದ್‍ನ ರಾಜ್ಯ ಸಂಚಾಲಕ ರಘುನಂದನ ಭಟ್ಟ, ಇತಿಹಾಸ ತಜ್ಞ ಡಾ.ಎ.ಕೆ.ಶಾಸ್ತ್ರೀ, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಎಂ.ಎನ್.ಹೆಗಡೆ, ಕಾರ್ಯಕಾರಿ ಸಮಿತಿ ಕಾರ್ಯಾಧ್ಯಕ್ಷ ಜಗದೀಶ ಭಂಡಾರಿ, ಪರಿಷದ್‍ನ ಪ್ರಾಂತ ಕೋಶಾಧ್ಯಕ್ಷ ಎಂ.ವಿ.ಹೆಗಡೆ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೇಷ್ಠ ಪ್ರಚಾರಕ ಚಂದ್ರಶೇಖರ ಭಂಡಾರಿ ಪಾಲ್ಗೊಂಡಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಭಾಗವತ ಸ್ವಾಗತಿಸಿದರು. ಸಂಜಯ ಭಟ್ಟ ಕಾರ್ಯಕ್ರಮ ನಿರೂಪಿಸಿದರು.
ಮಾನವೀಯತೆ ಇಲ್ಲದ ಜ್ಞಾನಪೀಠಿಗಳು ಮೇಧಾವಿಗಳಲ್ಲ….
ಬುದ್ದಿಜೀವಿಗಳು ಹಾಗೂ ಕೆಲವು ಕಾಲೇಜುಗಳ ಪ್ರೊಪೇಸರ್‍ಗಳು ಗೋವಧೆ ಮಾಡಿ ಮಾಂಸ ಬೇಯಿಸಿ ತುನ್ನುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೀಗೆ ಗೋಮಾಂಸ ತಿಂದವರೆಲ್ಲ ಮೇಧಾವಿಗಳು, ಜ್ಞಾನಿಗಳಲ್ಲ. ಈ ಗುಂಪಿನಲ್ಲಿ ಜ್ಞಾನಪೀಠಿಗಳೂ ಸೇರಿದ್ದು ಅತಿಕೇರಕದ ಪರಮಾವಧಿಯಾಗಿದೆ. ಬುದ್ದಿಜೀವಿಗಳ ಸಾಲಿನಲ್ಲಿರುವ ಜ್ಞಾನಪೀಠಿಗಳು ಮಾನವೀಯ ಗುಣ ಅಳವಡಿಕೊಳ್ಳಬೇಕು. ಇಂತಹ ಅತಿರೇಕಗಳಿಗೆ ಸಮಾಜವೇ ತಡೆಯೊಡ್ಡಬೇಕು.
ಪ್ರೊ.ದೊಡ್ಡರಂಗೇಗೌಡ- ಖ್ಯಾತ ಸಾಹಿತಿ

loading...

LEAVE A REPLY

Please enter your comment!
Please enter your name here