ಯುವ ಜನತೆ ದೇಶವನ್ನು ಕಟ್ಟುವ ಗುಣ ಬೆಳೆಸಿಕೊಳ್ಳಬೇಕು: ಡಾ.ಬಿ.ಹೆಚ್.ನಾಯಕ

0
31
loading...

ಕಾರವಾರ : ಮನುಷ್ಯನು ಜೀವನದಲ್ಲಿ ಹಣಕ್ಕಿಂತ ಗುಣವನ್ನು ಮುಖ್ಯವಾಗಿ ಬೆಳೆಸಬೇಕು. ಹಣವನ್ನು ಗಳಿಸಲು ಹಲವು ಮಾರ್ಗಗಳಿವೆ ಆದರೆ ಒಳ್ಳೆಯ ಗುಣವನ್ನು ಬೆಳೆಸಲು ಸನ್ಮಾರ್ಗದಲ್ಲಿಯೇ ನಡೆಯಬೇಕಾಗುತ್ತದೆ. ಯುವ ಜನರು ಜೀವನವನ್ನು ರೂಪಿಸಿಕೊಳ್ಳಲು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ದುಶ್ಚಟಗಳಿಗೆ ಒಳಗಾಗದೆ ದೇಶವನ್ನು ಕಟ್ಟುವ ಗುಣಗಳನ್ನು ಯುವ ಜನರು ಬೆಳೆಸಬೇಕಾಗಿದೆ. ದಿನನಿತ್ಯ ಎರಡುಗಂಟೆಯನ್ನಾದರೂ ಸಮಾಜ ಸೇವೆಗಾಗಿ ಇಡಬೇಕು ಎಂದು ಕಾರವಾರದ ದಿವೇಕರ್ ವಾಣಿಜ್ಯ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಬಿ.ಹೆಚ್.ನಾಯಕ ರವರು ಅಭಿಪ್ರಾಯ ವ್ಯಕ್ತ ಪಡಿಸಿದರು. ಅವರು ಆಝಾದ್ ಯುಥ್ ಕ್ಲಬ್ ಕಾರವಾರ, ಲಯನ್ಸ್ ಕ್ಲಬ್ ಕಾರವಾರ ಹಾಗೂ ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರದವರು ಸಂಯುಕ್ತವಾಗಿ ಜಿನ್ ಹೆನ್ರಿ ಡುನಾನ್ಟ್‍ರವರ ಜನ್ಮ ದಿನಾಚರಣೆಯ ನಿಮಿತ್ತ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಬಾಡದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉಚಿತ ರಕ್ತದ ಗುಂಪು ತಪಾಸಣೆಯ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜೊತೆಗೆ ಯುವ ಪೀಳಿಗೆ ತುರ್ತು ಪರಿಸ್ಥಿತಿಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಕಾರವಾರದ ಅಧ್ಯಕ್ಷರಾದ ಮೋಹನ ಬೋಳಶೆಟ್ಟಿರವರು ಮಾತನಾಡಿ ರಕ್ತದ ಗುಂಪು ತಪಾಸಣಾ ಕಾರ್ಯಕ್ರಮಗಳು ಗ್ರಾಮೀಣ ವಿಭಾಗಗಳಲ್ಲೂ ನೆರವೇರಬೇಕು. ಇದರಿಂದ ರಕ್ತದಾನದ ಅರಿವು ಅವರಲ್ಲಿ ಮೂಡುತ್ತದೆ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತರೂ ಹಾಗೂ ರಕ್ತದಾನಿಗಳೂ ಆದ ನಜೀರ್ ಅಹಮದ್ ಯು.ಶೇಖ್‍ರವರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಐ.ಟಿ.ಐ.ನ ಪ್ರಭಾರ್ ಪ್ರಾಂಶುಪಾಲರಾದ ಶಂಕರ್ ಮಾಜಾಳಿಕರ್‍ರವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಪಡೆದ ಜ್ಞಾನ ಬೀಜದಂತಿದ್ದು, ಅದನ್ನು ಮರವಾಗಿ ಬೆಳೆಸಲು ಶ್ರಮ ಹಾಗೂ ಸೇವೆ ಅಗತ್ಯವಾಗಿದೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಿ ದೇಶಕ್ಕೆ ಕೊಡುಗೆಯನ್ನು ನೀಡಿ ಎಂದು ಹೇಳಿದರು. ಪ್ರಾರಂಭದಲ್ಲಿ ಭಾರತೀಯ ರೆಡ್ ಕ್ರಾಸ್‍ನ ಅಜೀವ ಸದಸ್ಯೆ ಫೈರೋಜಾ ಬೇಗಂ ಶೇಖ್‍ರವರು ಪ್ರಾಸ್ಥವಿಕ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕೊನೆಯಲ್ಲಿ ಇನ್ಸ್‍ಟ್ರಕ್ಟರ್ ರವಿ ನಾಯ್ಕರವರು ವಂದಿಸಿದರು. ಕ್ಲಬ್‍ನ ಕೋಶಾಧ್ಯಕ್ಷ ಮೊಹಮ್ಮದ್ ಉಸ್ಮಾನ್‍ಶೇಖ್ ರವರು ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.
ಇದೇ ಸಂದರ್ಭದಲ್ಲಿ ಸುಮಾರು 150 ಕ್ಕೂ ಹೆಚ್ಚು ವಿದ್ಯಾರ್ಥಿಗಳ ರಕ್ತದ ಗುಂಪನ್ನು ಉಚಿತವಾಗಿ ತಪಾಸಣೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‍ನ ಮಾಜಿ ಅಧ್ಯಕ್ಷರಾದ ಲ.ಮಂಜುನಾಥ ಪವಾರ್, ಹಿರಿಯ ಇನ್ಸ್‍ಟ್ರಕ್ಟರ್ ಎಮ್.ವಿ.ನಾಯ್ಕ, ರಾಜಾರಾಮ್ ಸಿ.ನಾಯ್ಕ, ಪ್ರಕಾಶ ಕುಡಾಲ್ಕರ್ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಆಸ್ಪತ್ರೆಯ ಲ್ಯಾಬ್ ಟೆಕ್ನೀಶಿಯನ್‍ರಾದ ಶೋಭಾ ಹಡಗಿನಾಳ ಹಾಗೂ ಅಶ್ವಿನಿ ಕಾಣ್ಕೂಣಕರ್‍ರವರು ರಕ್ತದ ಗುಂಪು ತಪಾಸಣೆ ಮಾಡಿದರು.

loading...

LEAVE A REPLY

Please enter your comment!
Please enter your name here