ಹಲಸಿನ ಮರ ಪರಿಸರಕ್ಕೆ ಅನುಕೂಲ: ಬೆನಕಟ್ಟಿ

0
52
loading...

ಖಾನಾಪುರ 23: ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಹಲಸಿನ ಗಿಡಗಳು ಪರಿಸರಕ್ಕೆ ಹೇರಳ ಪ್ರಮಾಣದಲ್ಲಿ ಆಮ್ಲಜನಕ ಪೂರೈಸುತ್ತವೆ. 20 ವರ್ಷದ ಒಂದು ಹಲಸಿನ ಗಿಡ ನಿತ್ಯ 20 ಜನರು ಉಸಿರಾಡುವಷ್ಟು ಆಮ್ಲಜನಕ ನೀಡುವ ಸಾಮಥ್ರ್ಯ ಹೊಂದಿದೆ ಎಂದು ಅರಣ್ಯಾಧಿಕಾರಿ ಎಂ.ಜಿ ಬೆನಕಟ್ಟಿ ಅಭಿಪ್ರಾಯ ಪಟ್ಟರು.
ಪಟ್ಟಣದ ಪಟ್ಟಣ ಪಂಚಾಯ್ತಿ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ್ದ ಹಲಸು ಕೃಷಿ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ್ದ ಹಲಸು ಬೆಳೆಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಹಲಸಿನ ಗಿಡ ತಿನ್ನಲು ಹಣ್ಣು, ಸಮೃದ್ಧವಾದ ನೆರಳು ನೀಡುವುದರ ಜೊತೆಗೆ ಭೂಸವೆತ ತಡೆಗಟ್ಟಿ ಅಂತರ್ಜಲ ಮಟ್ಟ ಕಾಪಾಡಲು ಸಹಕರಿಸುತ್ತದೆ. 10 ವರ್ಷ ಪೂರೈಸಿದ ಮರದಿಂದ ಗೃಹೋಪಯೋಗಿ ವಸ್ತುಗಳನ್ನು ನಿರ್ಮಿಸಲು ಅವಶ್ಯವಿರುವ ಮರಮುಟ್ಟು ಮತ್ತು ಕಟ್ಟಿಗೆಯನ್ನೂ ಪಡೆಯಬಹುದಾಗಿದೆ. ಹೀಗಾಗಿ ಹಲಸು ರೈತರ ಪಾಲಿಗೆ ಕಾಮಧೇನುವಾಗಿದ್ದು, ಇದನ್ನು ಬೆಳೆಸಲು ಅರಣ್ಯ ಇಲಾಖೆ ಅರಣ್ಯ ಕೃಷಿ ಪ್ರೋತ್ಸಾಹ ಯೋಜನೆಯಡಿ ರೂ.2ಕ್ಕೆ ಒಂದರಂತೆ ಸಸಿ ಪೂರೈಸಿ ಸಸಿಗಳನ್ನು ಬೆಳೆಸಲು ತಲಾ ರೂ.45ಗಳಷ್ಟು ಪ್ರೋತ್ಸಾಹ ಧನವನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಧರ್ಮಸ್ಥಳ ಸಂಸ್ಥೆಯ ವಿಭಾಗೀಯ ನಿರ್ದೇಶಕ ಜಯಶಂಕರ ಶರ್ಮಾ ಮಾತನಾಡಿ, ಹಲಸಿನ ಹಣ್ಣಿನಿಂದ 150ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಬಹುದು. ಉತ್ತಮ ತಳಿಯ ಹಲಸಿಗೆ ನಗರಪ್ರದೇಶದ ಮಾರುಕಟ್ಟೆಗಳಲ್ಲಿ ಬೇಡಿಕೆಯಿದ್ದು, ಹಲಸಿನ ಮಹತ್ವವನ್ನು ಅರಿತು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಬೆಳೆದರೆ ಲಾಭ ನಿಶ್ಚಿತ. ತಾಲೂಕಿನ ವಾತಾವರಣ ಹಲಸಿಗೆ ಪೂರಕವಾಗಿದ್ದು, ಕೃಷಿಕರು ಹಲಸನ್ನು ಒಂದು ವಾಣಿಜ್ಯ ಬೆಳೆಯನ್ನಾಗಿ ಬೆಳೆದು ಸ್ಥಳೀಯವಾಗಿ ಇದರ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.
ವಿಚಾರ ಸಂಕೀರ್ಣದಲ್ಲಿ ಹಲಸು ಕೃಷಿ ಮತ್ತು ಸುಧಾರಿತ ಬೇಸಾಯ ಪದ್ಧತಿಯ ಬಗ್ಗೆ ಹಲಸು ಕೃಷಿಕ ಪ್ರಭಾಕರ ಮನೇರಿಕರ ಹಾಗೂ ಹಲಸಿನ ಉತ್ಪನ್ನಗಳ ತಯಾರಿಕೆ, ಮಾರಾಟದ ಬಗ್ಗೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಹಲಸಿನ ಉತ್ಪನ್ನಗಳ ತಯಾರಕ ಈಶ್ವರ ಭಟ್ಟ ವಿವರವಾದ ಮಾಹಿತಿ ನೀಡಿದರು.
ಧರ್ಮಸ್ಥಳ ಯೋಜನೆಯ ನಿರ್ದೇಶಕ ಶೀನಪ್ಪ ಮೂಲ್ಯ, ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ನಾರಾಯಣ ಮಯೇಕರ, ಸರಸ್ವತಿ ಶಾಲೆಯ ಮುಖ್ಯಾಧ್ಯಾಪಕಿ ಅನಿತಾ ಗಡಾದ ಸೇರಿದಂತೆ ಪ್ರಗತಿಬಂಧು ಸ್ವಸಹಾಯ ಗುಂಪುಗಳ ಸದಸ್ಯರು, ಮೇಲ್ವಿಚಾರಕರು ಭಾಗವಹಿಸಿದ್ದರು.
ಯೋಜನಾಧಿಕಾರಿ ಪ್ರಭಾಕರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಲ್ವಿಚಾರಕ ಸಂತೋಷ ನಿರೂಪಿಸಿದರು. ಕೃಷಿ ಅಧಿಕಾರಿ ಪರಶುರಾಮ ಮಾಚಕ ವಂದಿಸಿದರು.

loading...

LEAVE A REPLY

Please enter your comment!
Please enter your name here