ಇಂದಿನಿಂದ ಆದಿವಾಸಿ ಬುಡಕಟ್ಟುಗಳ ರಾಜ್ಯ ಮಟ್ಟದ ಜಾಗೃತಿ ಶಿಬಿರ

0
29
loading...

ಜೋಯಿಡಾ : ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಕರ್ನಾಟಕ ಹಾಗೂ ಉತ್ತರ ಕನ್ನಡ ಮತ್ತು ಜೋಯಿಡಾ ಘಟಕದ ವತಿಯಿಂದ ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಆದಿವಾಸಿ ಬುಡಕಟ್ಟುಗಳ “ಜಾಗೃತಿ ಶಿಬಿರ”ವನ್ನು ಜೋಯಿಡಾದ ಬಿ.ಜಿ.ವಿ.ಎಸ್. ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬರುವ ದಿ. 12, 13 ಮತ್ತು 14 ರಂದು ಹಮ್ಮಿಕೊಂಡಿದ್ದಾಗಿ ಶಿಬಿರದ ಸಿದ್ದತಾ ಸಮಿತಿಯ ಪ್ರಮುಖ ಪ್ರೇಮಾನಂದ ವೇಳಿಪ ತಿಳಿಸಿದರು.
ಅವರು ಜೋಯಿಡಾ ಕುಣಬಿ ಭವನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ, ಆದಿವಾಸಿ ಬುಡಕಟ್ಟುಗಳಿಗೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಲ್ಲಿ ಸರಕಾರ ಅನ್ಯಾಯ ಮಾಡಿದೆ. ಗೋವಾ ರಾಜ್ಯದಲ್ಲಿ ಬುಡಕಟ್ಟು ಕುಣಬಿಗಳಿಗೆ ಪ.ಪಂ.ಕೆ ಸೇರ್ಪಡೆ ಮಾಡಿದ್ದರೆ, ನಮ್ಮ ಸರಕಾರ ಅವರದೆ ಬಾಂದವರಾದ ನಮಗೆ ಪ.ಪಂ.ಸೇರ್ಪಡೆಗೆ ಅವಕಾಶ ನೀಡದೇ ಅನ್ಯಾಯಮಾಡಿದೆ. ಜಿಲ್ಲೆಯಲ್ಲಿರುವ ಗೌಳಿ, ಸಿದ್ದಿ, ಹಾಲಕ್ಕಿ, ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಲ್ಲಿರುವ ಆದಿವಾಸಿ ಬುಡಕಟ್ಟುಗಳಿಗೆ ಪ.ಪಂ,ಕೆ ಸೇರ್ಪಡೆಮಾಡುವ ಉದ್ದೇಶದಿಂದ ಹಾಗೂ ನಮ್ಮ ಹಕುಗಳ ಬೇಡಿಕೆಗೆ ನ್ಯಾಯಯುತ ಹೋರಾಟಕ್ಕೆ ಈ ಜಾಗೃತಿ ಶಿಬಿರವನ್ನು ಆಯೋಜಿಸಿದ್ದು, ರಾಜ್ಯದ ಹಲವೆಡೆಯಿಂದ ಪ್ರತಿನಿದಿಗಳು ಈ ಅಧ್ಯಯನ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾಗಿ ಹೇಳಿದರು.
ರೈತಪ್ರಾಂತ ಸಂಘದ ಜಿಲ್ಲಾ ಕಾರ್ಯದರ್ಶಿ ಶಾಂತಾರಾಮ ನಾಯ್ಕ ಮಾತನಾಡಿ, ಬುಡಕಟ್ಟುಗಳ ಬೇಡಿಕೆ, ಸಮಸ್ಯೆ ಅಧ್ಯಯನ ನಡೆಸುವ ಜೊತೆಗೆ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಾರ ಇದಾಗಿದೆ. ಮೂರು ದಿನ ನಡೆಯುವ ಈ ಕಾರ್ಯಗಾರದಲ್ಲಿ ಪ್ರಮುಖ ಭಾಗವಾದ ವಿಚಾರ ಸಂಕಿರ್ಣದಲ್ಲಿ “ ಬುಡಕಟ್ಟು ಅಭಿವೃದ್ದಿ- ಭಾಷೆ ಮತ್ತ ಪ್ರಾದೇಶಿಕ ನೆಲೆ “ ಎಂಬ ವಿಷಯ ಕುರಿತು ರಾಷ್ಟ್ರವ್ಯಾಪಿ ಸಂಚರಿಸಿ ಬುಡಕಟ್ಟುಗಳ ಬಗ್ಗೆ ಅಧ್ಯನ ನಡೆಸಿರುವ ತಜ್ಷರಾದ ಗಣೇಶ ದೇವಿ ಯವರು ಶಿಬಿರಾರ್ಥಿಗಳೊಂದಿಗೆ ಚರ್ಚಿಸಿ, ವಿಷಯ ಹಂಚಿಕೊಳ್ಳಲಿದ್ದಾರೆ. ಈ ಶಿಬಿರ ಮುಂದಿನ ದಿನಗಳಲ್ಲಿ ಆದಿವಾಸಿ ಜನರ ಸಮಸ್ಯೆ, ಅಧ್ಯಯನ, ಹಕ್ಕುಗಳ ಹೋರಾಟಕ್ಕೆ ಸಹಕಾರಿ ಆಗಲಿದೆ ಎಂದರು.
ರವಿವಾರ ಬೆಳಿಗ್ಗೆ 10.30.ಕೆ ಆರಂಭಗೊಳ್ಳಲಿರುವ ಈ ಶಿಬಿರದ ಉದ್ಘಾಟನೆಯನ್ನು ರಾಜ್ಯ ಬುಡಕಟ್ಟು ಅಧ್ಯಯನ ತಜ್ಞರಾದ ಡಾ:ಹಿ.ಚಿ.ಬೋರಲಿಂಗಯ್ಯ ನೆರವೇರಿಸಲಿದ್ದು, ಆದಿವಾಸಿ ರಾಜ್ಯ ಅಧಿಕಾರ ಮಂಚ್‍ದ ಕೇಂದ್ರ ಸಮಿತಿ ಸದಸ್ಯ ಎಸ್.ವೈ.ಗುರುಶಾಂತ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿತಿಗಳಾಗಿ, ಆದಿವಾಸಿ ರಾ.ಮಂಚ್‍ಮುಖಂಡ ದಿಲ್ಲಿಬಾಬು, ಕುಣಬಿ ಬುಡಕಟ್ಟು ಕಲಾವಿದ ಮಾದೇವಿ ವೇಳಿಪ್ ಕಾರ್ಟೊಳಿ, ರಾಜ್ಯ ಕುಣಬಿ ಅಭಿವೃದ್ದಿ ಮಹಾಮಂಡಳ ಅಧ್ಯಕ್ಷ ಮಂಜಪ್ಪ ಸಾಗರ ಪಾಲ್ಗೊಳ್ಳಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯ ಉಪನಿರ್ಧೇಶಕ ಅಲ್ಲಾಬಕ್ಸ್, ಡಾ:ಅಂಬೇಡ್ಕರ್ 125 ನೇ ಆಚರಣೆ ಸಮಿತಿ ಕಾರ್ಯದರ್ಶಿ ಡಾ:ವಿಠಲ್ ಭಂಡಾರಿ, ಕಾಲೇಜಿನ ಪ್ರಚಾರ್ಯ ಮಂಜುನಾಥ ಶೆಟ್ಟಿ, ಪತ್ರಕರ್ತ ಬಿ.ಎನ್.ವಾಸರೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಆದಿವಾಸಿ ಬುಡಕಟ್ಟುಗಳನ್ನೊಳಗೊಂಡ ಜಿಲ್ಲೆಗಳಾದ ಮಂಡ್ಯ,ಮೈಸೂರು,ಚಾಮರಾಜ ನಗರ, ಕೊಡಗು, ಹಾಸನ,ಶಿವಮೊಗ್ಗಾ, ಉಡುಪಿ, ದಕ್ಷಿಣ ಕನ್ನಡ ಮುಂತಾದ ಕಡೆಗಳಿಂದ ನೂರಾರು ಪ್ರತಿನಿಧಿಗಳು ಈ ಕಾರ್ಯಗಾರದಲ್ಲಿ ಭಾಗವಹಿಸುವರು ಅಧ್ಯಯನ ಶಿಬಿರದ ಸಿದ್ದತಾ ಸಮಿತಿಯವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಸಿ.ಐ.ಟಿ.ಯು. ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರ್, ನಗರ ಸಭಾ ಸದಸ್ಯ ಡಿ.ಸ್ಯಾಮ್ಸನ್ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here