ನಿರುಪಯುಕ್ತ ಜಮೀನು ಗ್ರಾ.ಪಂ ವಶಕೆ: ಗ್ರಾಮಸ್ಥರ ವಿರೋಧ

0
61
loading...

ಮುಂಡರಗಿ : ಗ್ರಾಮದ ಪಕ್ಕದಲ್ಲಿರುವ ನಿರುಪಯುಕ್ತ ಜಮೀನನ್ನು ವಶಪಡಿಸಿಕೊಳ್ಳುತ್ತಿರುವ ಗ್ರಾಮ ಪಂಚಾಯ್ತಿಯ ಕ್ರಮವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ಸಿಂಗಟಾಲೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಂಗಾಪೂರ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಗ್ರಾಮದ ಯುವ ಮುಖಂಡ ವೈ.ಎಲ್.ಪಾಟೀಲ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಗ್ರಾಮದ ಪಕ್ಕದಲ್ಲಿರುವ ಜಮೀನನ್ನು ಬಡ ಹಾಗೂ ದಲಿತ ರೈತ ಕುಟುಂಬಗಳು ಸಾಗುವಳಿ ಮಾಡುತ್ತಲಿದ್ದಾರೆ. ಕಂದಾಯ ಇಲಾಖೆಯ ಆರ್‍ಟಿಸಿ ಕಾಲಂನಲ್ಲಿ ಸದರಿ ಜಮೀನು ಸಾದಾಕುಳ ಎಂದು ದಾಖಲಾಗಿರುತ್ತದೆ. ಈ ಕಾರಣದಿಂದ ಸದರಿ ಜಮೀನು ಗ್ರಾಮ ಪಂಚಾಯ್ತಿಗೆ ಸೇರಿದ್ದು ಎಂದು ಭಾವಿಸಿ ಗ್ರಾಮ ಪಂಚಾಯ್ತಿಯವರು ಜಮೀನನನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಗ್ರಾಮ ಪಂಚಾಯ್ತಿಯು ರೈತ ಕುಟುಂಬಗಳನ್ನು ವಕ್ಕಲೆಬ್ಬಿಸುತ್ತಿರುವುದರಿಂದ ರೈತರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮ ಪಂಚಾಯ್ತಿಯ ಈ ಕ್ರಮದಿಂದಾಗಿ ಇದೇ ಜಮೀನಿನನ್ನು ನಂಬಿಕೊಂಡಿದ್ದ ಹಲವಾರು ಬಡ ರೈತ ಕುಟುಂಬಗಳು ಬೀದಿಪಾಲಾಗಲಿವೆ ಎಂದು ಅವರು ಆರೋಪಿಸಿದರು.
1992ರಲ್ಲಿ ತುಂಗಭದ್ರಾ ನದಿ ಪ್ರವಾಹ ಬಂದ ಸಂದರ್ಭದಲ್ಲಿ ರಿ.ಸ.ನಂ.32ಕ್ಕೆ ಗ್ರಾಮದ ಮನೆಗಳನ್ನು ಸ್ಥಳಾಂತರಿಸಲಾಗಿತ್ತು. 1994ರಲ್ಲಿ ಗ್ರಾಮದ ಪುನರ್ ವಸತಿಗಾಗಿ ದೊಡ್ಡ ದೊಡ್ಡ 64ಪ್ಲಾಟ್‍ಗಳನ್ನು ನಿರ್ಮಿಸಿ ಆಯ್ದ ಫಲಾನುಭವಿಗಳಿಗೆ ವಿತರಿಸಲಾಗಿತ್ತು.
64ಪ್ಲಾಟ್‍ಗಳಲ್ಲಿ ಕೇವಲ 8-10 ಜನರು ತಮ್ಮ ಪ್ಲಾಟ್‍ಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಇನ್ನೂ ಹಲವಾರು ಪ್ಲಾಟ್‍ಗಳು ಖಾಲಿ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಯವರು ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸಬೇಕು ಎಂದು ಕೃಷಿ ಜಮೀನನ್ನು ವಶಪಡಿಸಿಕೊಳ್ಳುತ್ತಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.
ಗ್ರಾಮಕ್ಕೆ ಸಂಬಂಧಿಸಿದ ಅಪಾರ ಪ್ರಮಾಣದ ಜಮೀನನ್ನು ಗ್ರಾಮದ ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು, ಅವರನ್ನು ಗುರುತಿಸಿ ಅವರನ್ನು ತೆರವುಗೊಳಿಸಬೇಕು. ಬಡ ರೈತರ ಜಮೀನು ವಶಪಡಿಸಿಕೊಳ್ಳಲು ಮುಂದಾಗಿರುವ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಎಲ್ಲ ಜಮೀನನನ್ನು ವಶಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಮಹಾಂತೇಶ ಹಳ್ಳಿಕೇರಿ, ಶರಣಪ್ಪ ಹಳ್ಳಿಕೇರಿ, ಬಸಪ್ಪ ಹಳ್ಳಿರವಿ, ದೇವಪ್ಪ ಹಳ್ಳಿಕೇರಿ, ಫಕ್ಕೀರಪ್ಪ ಹಳ್ಳಿಕೇರಿ, ಹನುಮಪ್ಪ ಹಳ್ಳಿಕೇರಿ, ಮಲ್ಲಪ್ಪ ಹಳ್ಳಿಕೇರಿ, ಗೀತಾ ಹಳ್ಳಿಕೇರಿ, ಶಾಂತವ್ವ ಹಳ್ಳಿಕೇರಿ, ಬಸಮ್ಮ, ದ್ಯಾಮವ್ವ, ಈರಮ್ಮ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here