ಸಮಸ್ಯೆಯೆಂದು ಪರಿಗಣಿಸುವ ಮನೋಭಾವನೆ ಬದಲಾಗಬೇಕು

0
29
loading...

ಬೆಳಗಾವಿ 25:ನಗರೀಕರಣ ಸಮಸ್ಯೆಯೆಂದು ಪರಿಗಣಿಸುವ ಮನೋಭಾವನೆ ಬದಲಾಗಬೇಕು. ನಗರಗಳಿಗೆ ಬಡತನ ಅರಗಿಸಿಕೊಳ್ಳುವ ಶಕ್ತಿ ಇದೆ. ನಗರಗಳ ಸಶಕ್ತೀಕರಣದಿಂದ ಬಡತನ ಅರಗಿಸಿಕೊಳ್ಳುವ ಶಕ್ತಿ ಹೆಚ್ಚಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶನಿವಾರದಂದು ಮಹಾರಾಷ್ಟ್ರದ ಪುಣೆಯ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ದೇಶದ 20 ಸ್ಮಾರ್ಟ್ ಸಿಟಿಗಳ ಕಾಮಗಾರಿಗಳಿಗೆ ಚಾಲನೆ ನೀಡಿ ವಿಡಿಯೋ ಕಾನ್ಫ್‍ರೆನ್ಸ್ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಪ್ರತಿಯೊಂದು ನಗರಕ್ಕೂ ತನ್ನದೆ ಆದ ಹೆಗ್ಗುರುತುಗಳಿವೆ. ಆ ಹೆಗ್ಗುರುತುಗಳಿಗೆ 21 ನೇ ಶತಮಾನದಲ್ಲಿ ಆಧುನಿಕ ಸ್ಪರ್ಷ ನೀಡಿ ಅವುಗಳಲ್ಲಿಯ ಬಡತನ ಅರಗಿಸಿಕೊಳ್ಳುವ ಶಕ್ತಿ ಹೆಚ್ಚಿಸಬೇಕಾಗಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯೆಂದರೆ ಕೇವಲ ಕಟ್ಟಡಗಳನ್ನು ಕಟ್ಟುವದಲ್ಲ. ನಗರದ ಪ್ರತಿಯೊಬ್ಬ ನಾಗರಿಕರಿಗೂ ಸಮಾನವಾದ ಸೌಲಭ್ಯಗಳು ಸಿಗಬೇಕು. ನೀರು, ವಿದ್ಯುತ್, ರಸ್ತೆ, ಸಂಚಾರ ದಟ್ಟನೆ ಸಮಸ್ಯೆಯಿಂದ ಮುಕ್ತಿ ಸಿಗಬೇಕು. ಡಿಜಿಟಲ್ ಸೇವೆ ಕೆಲವರಿಗೆ ಮಾತ್ರ ಸೀಮಿತವಾಗದೆ ಅದು ಸಾಮೂಹಿಕ ಮಾಧ್ಯಮವಾಗಬೇಕು ಎಂದು ವಿಶ್ಲೇಷಿಸಿದರು.
ನಗರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವು ಹೊರೆಯಾಗಬಾರದು. ಅದೂ ಆದಾಯದ ಮೂಲವಾಗಬೇಕು ಎಂದ ಅವರು, ಕೇಂದ್ರ ಸರಕಾರವು ನಗರ ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯ್ಯಾರಿಸುವ ಮತ್ತು ಕಲುಷಿತ ನೀರಿನ ಪುನರ್ಬಳಕೆಯ ಯೋಜನೆ ರೂಪಿಸುತ್ತಿದೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆಯು ನಗರಗಳ ಭವಿಷ್ಯ ರೂಪಿಸುತ್ತದೆ. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜನಸಾಮಾನ್ಯರು ಭಾಗಿಯಾಗಿರುವದರಿಂದ ಇದೊಂದು ಜನಾಂದೋಲನವಾಗಿ ಮಾರ್ಪಟ್ಟಿದೆ. ಸ್ಮಾರ್ಟ್ ಸಿಟಿಗಳ ನಿರ್ಮಾಣದಿಂದ ಉದ್ಯೋಗ ಹೆಚ್ಚಾಗಲಿವೆ. ನಗರ ವಾಸಿಗಳ ಜನತೆಗೆ ಅಲ್ಹಾದಕರ ವಾತಾವರಣ ಸಿಗುತ್ತದೆ. ಕೊಳಚೆ ಪ್ರದೇಶಗಳ ಮುಕ್ತ ನಗರಗಳಾಗಿ ಮಾರ್ಪಡಲಿವೆ ಎಂದು ವಿವರಿಸಿದರು.
ಜನರ ಸಹಭಾಗಿತ್ವದಲ್ಲಿ ಅದ್ಭುತ ಶಕ್ತಿ ಇದೆ. ಆ ಶಕ್ತಿಯನ್ನು ಒಂದು ಗೂಡಿಸುವ ಕೆಲಸ ಮಾಡಬೇಕಾಗಿದೆ. ಈ ಹಿಂದೆ ಜನರಿಗೆ ಏನಾದರೂ ಸಿಕ್ಕರೆ ಮಾತ್ರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂಬ ತಪ್ಪು ಕಲ್ಪನೆ ಮೂಡಿಸಲಾಗಿತ್ತು. ತಾವು ಕರೆ ನೀಡಿದ ಸ್ವಚ್ಛ ಭಾರತ ಅಭಿಯಾನದಲ್ಲಿ ದೇಶದ ಕೋಟಿ ಕೋಟಿ ಜನ ಭಾಗವಹಿಸುವ ಮೂಲಕ ಈ ಹಿಂದಿನ ಕಲ್ಪನೆಯನ್ನು ಹುಸಿಗೊಳಿಸಿದ್ದಾರೆ ಎಂದ ಅವರು, ಸ್ವಚ್ಛ ಭಾರತ ಅಭಿಯಾನ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಭಾಗವಹಿಸಿರುವ ದೇಶದ ಜನತೆಗೆ ಅಭಿನಂದಿಸಿದರು.
ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿದರು. ವಿಡಿಯೋ ಕಾನ್ಫ್‍ರನ್ಸ್‍ನಲ್ಲಿ ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೇ, ಆಂದ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬೆಳಗಾವಿಯಲ್ಲಿ ಸಂಸದ ಸುರೇಶ ಅಂಗಡಿ, ಮೇಯರ ಸರಿತಾ ಪಾಟೀಲ, ಶಾಸಕ ಸಂಜಯ ಪಾಟೀಲ, ಮಹಾನಗರ ಪಾಲಿಕೆಯ ಆಯುಕ್ತ ಜಿ.ಪ್ರಭು ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here