ಸಮುದಾಯ ಸಹಭಾಗಿತ್ವದಲ್ಲಿ ಸುಸ್ಥಿರ ವೈಜ್ಞಾನಿಕ ಜಲನಿರ್ವಹಣೆ

0
51
loading...

ಶಿರಸಿ : ಇಂಗುಗುಂಡಿಗಳ ಮೂಲಕ ಅಂತರ್ಜಲ ಮರುಪೂರಣ ಮಾಡಿ ಜಲಸ್ವಾವಲಂಬನೆ ಸಾಧಿಸಲು ಜನಸಂಘಟಿತ ಹಳ್ಳಿಯೊಂದು ಕಾರ್ಯತತ್ಪರವಾಗಿದೆ. ಧರ್ಮಾ ಕೊಳ್ಳಕ್ಕೆ ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯೊಡ್ಡಿ ಹಳ್ಳಿಯ ಹಸುರಿಗೆ ಮರುಜೀವ ನೀಡುತ್ತಿದೆ.
ಹೀಗೆ ಇಂಗುಗುಂಡಿ ಮಾದರಿ ರಚನೆಯಲ್ಲಿ ದಶಕದಿಂದ ತೊಡಗಿಕೊಂಡ ಉತ್ತರ ಕನ್ನಡ ಜಿಲ್ಲೆಯ ಕಳವೆ, ಬೆಂಗಳೆ ಸೇರಿದಂತೆ ಕೆಲವು ಹಳ್ಳಿಗಳನ್ನು ಅನುಸರಿಸಲು ಮುಂದಾಗಿರುವ ಹಳ್ಳಿ ಮಾವಿನಕೊಪ್ಪ. ಧರ್ಮಾ ಕೊಳ್ಳದ ಭಾಗವಾದ ಮಾವಿನಕೊಪ್ಪ ಕಿರು ಜಲಾನಯನ ಪ್ರದೇಶ ಸುಮಾರು 385 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಎಲ್ಲ ಕಡೆಯಂತೆ ಇಲ್ಲಿಯೂ ಈ ವರ್ಷ ಬರಗಾಲದ ಬಿಸಿ ಸಾಕಷ್ಟು ತಟ್ಟಿತ್ತು. ಎಲ್ಲ ಸಂಪನ್ಮೂಲಗಳಿದ್ದರೂ ನೀರಿನ ಕೊರತೆಯಿಂದಾಗಿ ಇರುವ ಬೆಳೆಗಳ ಇಳುವರಿ ಕುಂಠಿತಗೊಳ್ಳುವದಷ್ಟೇ ಅಲ್ಲದೆ, ಇತರೇ ಲಾಭದಾಯಕ ಬೆಳೆಗಳನ್ನು ಬೆಳೆಯುವದು ಕಷ್ಟಕರವಾಗಿರುವ ಪರಿಸ್ಥಿತಿ ಇತ್ತೀಚಿನವರೆಗೂ ಸಾಮಾನ್ಯವಾಗಿತ್ತು. ಕುಡಿಯುವ ನೀರನ್ನು ಉಳಿಸಿಕೊಳ್ಳುವದೇ ಕಷ್ಟ ಎಂಬಂತಾಗಿತ್ತು. ಕೃಷಿ ಮತ್ತು ಮನೆ ಬಳಕೆಗಾಗಿ ಈ ಪ್ರದೇಶದಲ್ಲಿ 33 ತೆರೆದ ಬಾವಿಗಳು ಹಾಗೂ ಆರು ಕೊಳವೆಬಾವಿಗಳಿದ್ದರೂ ಇವುಗಳಲ್ಲಿ ಎರಡು ಕೊಳವೆ ಬಾವಿಗಳು ಎರಡು ವರ್ಷಗಳ ಹಿಂದೆ ಬತ್ತಿವೆ. ಜೂನ್ ಆರಂಭದಲ್ಲಿ ಅಳತೆ ಮಾಡಿದಂತೆ ತೆರೆದ ಬಾವಿಗಳಲ್ಲಿ ಸರಾಸರಿ ನೀರಿನ ಸಂಗ್ರಹ ಕೇವಲ ಎರಡು ಅಡಿ. ಬಹುತೇಕ ಇದೇ ಮೊದಲ ಬಾರಿಗೆ ಆರು ತೆರೆದ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ನಾಲ್ಕೈದು ಅಡಿ ಆಳ ಮಾಡಿದರೂ ಕೂಡ ನೀರಿನ ಸೆಲೆಯೇ ಕಾಣದಾಗಿದೆ. ಇವುಗಳ ಸರಾಸರಿ ಆಳ ಭೂಮಟ್ಟದಿಂದ 35 ಅಡಿಗೆ ತಲುಪಿದೆ. ಇಂತಹ ಸಂದರ್ಭದಲ್ಲಿ ಬರಗಾಲವನ್ನು ಸವಾಲನ್ನಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಜಲಸ್ವಾವಲಂಬನೆ ಸಾಧಿಸುವ ಸಂಕಲ್ಪ ಮಾಡಿ ಊರವರೆಲ್ಲ ಸೇರಿ ಮಳೆಗಾಲದಲ್ಲಿ ಜಲಮರುಪೂರಣ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಿ, ಮಾವಿನಕೊಪ್ಪ ಕಿರು ಜಲಾನಯನ ಪ್ರದೇಶದಲ್ಲಿ ಸಮುದಾಯ ಸಹಭಾಗಿತ್ವದಲ್ಲಿ ಸುಸ್ಥಿರ ವೈಜ್ಞಾನಿಕ ಜಲನಿರ್ವಹಣೆ ಮತ್ತು ಸಮಗ್ರ ಕೃಷಿ ಅಭಿವೃದ್ಧಿಗಾಗಿ ಸ್ವಯಂಪ್ರೇರಿತವಾಗಿ ಸ್ವಂತ ಹಣ ಖರ್ಚು ಮಾಡಿ ಇಂಗು ಗುಂಡಿಗಳನ್ನು ರಚಿಸಿದ್ದಾರೆ. ವಿಶೇಷವೆಂದರೆ ಇವೆಲ್ಲವುಗಳನ್ನು ತೋಚಿದ ರೀತಿಯಲ್ಲಿ ತೆಗೆಯದೆ ಹಿರಿಯ ನಿವೃತ್ತ ಭೂವಿಜ್ಞಾನಿ ಡಾ.ಜಿ.ವಿ.ಹೆಗಡೆ ಮಾರ್ಗದರ್ಶನದಲ್ಲಿ ರಚಿಸಿದ್ದಾರೆ. ಜಲ ತಜ್ಞರಾದ ಶಿವಾನಂದ ಕಳವೆಯವರಿಂದ ಮಾಹಿತಿ ಪಡೆದಿದ್ದಾರೆ.
51 ಲಕ್ಷ ಲೀಟರ್ ಇಂಗಿಸುವಿಕೆ….
ಈ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥ ಮಂಜುನಾಥ ಹೆಗಡೆ, ಮೊದಲ ಹಂತದಲ್ಲಿ ಒಟ್ಟೂ 11 ಜನ ರೈತರು 17 ಬೃಹತ್ ಇಂಗುಗುಂಡಿಗಳನ್ನು ರಚಿಸಿದ್ದು ಈ ಬಾರಿಯ ಮಳೆಗಾಲದಲ್ಲಿ ವೈಜ್ಞಾನಿಕ ದಾಖಲಾತಿಯನ್ನು ಮಾಡುವ ಉದ್ದೇಶ ಹೊಂದಿದ್ದೇವೆ. ಎಲ್ಲ ಗುಂಡಿಗಳು ಒಮ್ಮೆ ಭರ್ತಿಯಾದರೆ ಸುಮಾರು 15 ಲಕ್ಷ ಲೀಟರ್ ನೀರು ಮರು ಪೂರಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ಮಳೆಗಾಲದ ಕೊನೆಯೊಳಗೆ 50 ಲಕ್ಷ ಲೀಟರ್ ನೀರನ್ನು ಕಿರು ಜಲಾನಯನದಲ್ಲಿ ಇಂಗಿಸುವ ಗುರಿ ನಮ್ಮದು. ಇವಿಷ್ಟೇ ಅಲ್ಲದೆ ಎಲ್ಲರ ಬೆಟ್ಟ ಅಥವಾ ಲಭ್ಯ ಜಾಗಗಳಲ್ಲಿ ಚಿಕ್ಕ ಚಿಕ್ಕ ಗುಂಡಿಗಳನ್ನು ರಚಿಸುವದು ಮುಂದಿನ ದಿನಗಳಲ್ಲಿ ಪ್ರಾರಂಭಗೊಳ್ಳಲಿದೆ. ಒಂದು ಮರ ಒಂದು ಇಂಗುಗುಂಡಿಗೆ ಸಮಾನ ಎಂಬುದನ್ನು ಮನಗಂಡು ಸುಸ್ಥಿರ ಜಲ ಸಂರಕ್ಷಣೆಯ ಭಾಗವಾಗಿ ನೈಸರ್ಗಿಕ ಗಿಡ ಮರಗಳನ್ನು ಬೆಳೆಸುವದು ಹಾಗೂ ಈಗ ಇರುವ ಬೆಟ್ಟ ಮತ್ತು ಕಾಡಿನ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ.
ಅನುಷ್ಟಾನಕ್ಕೆ ಅವಕಾಶಗಳು…..
ಜಲ ಸಂರಕ್ಷಣೆಯಲ್ಲಿ ಅತ್ಯಂತ ಆಸಕ್ತರಾಗಿರುವ ರೈತರ ಸಂಘಟನೆ ಅದರಲ್ಲೂ ಬಹುತೇಕ ಎಲ್ಲ ರೈತರ ಮನೆಯಲ್ಲೂ ಹಿರಿಯರ ಮಾರ್ಗದರ್ಶನದಲ್ಲಿ ಯುವ ಕೃಷಿಕರ ಲಭ್ಯತೆಯಿದೆ. ಜಲಮೂಲಗಳ ನಿರಂತರತೆಗೆ ಇಡೀ ಜಲಾನಯನ ಪ್ರದೇಶದ ಎತ್ತರದಲ್ಲಿರುವ ಸುಮಾರು ಎರಡು ಎಕೆರೆ ವಿಸ್ತೀರ್ಣದ ಕೆರೆ ಇದೆ. ಸಮಗ್ರ ಕೃಷಿ ಅಭಿವೃದ್ದಿಗಾಗಿ ಕೃಷಿ-ತೋಟಗಾರಿಕಾ ವಿಜ್ಞಾನಿಗಳೊಡನೆ ನಿರಂತರ ಸಂಪರ್ಕ ಹೊಂದಿರುವ ಗ್ರಾಮಸ್ಥರು, ಸುಸ್ಥಿರ ಕೃಷಿ ಜಲ ಸಂರಕ್ಷಣೆಗೆ ಪೂರಕವಾಗಿದ್ದು ಈ ನಿಟ್ಟಿನಲ್ಲಿ ರೈತರು ರಾಸಾಯನಿಕ ರಹಿತ ಕೃಷಿಯತ್ತ ಒಲವು ತೋರಿಸುತ್ತಿದ್ದಾರೆ. ಪ್ರತಿ ಚಟುವಟಿಕೆಗಳನ್ನೂ, ಪ್ರಸಕ್ತ ನೀರಿನ ಮಟ್ಟವನ್ನು ಹಾಗೂ ಮುಂದಿನ ದಿನಗಳಲ್ಲಿ ಆಗಲಿರುವ ಪರಿಣಾಮಗಳನ್ನು ದಾಖಲೀಕರಣಗೊಳಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಗ್ರಾಮದ ಶ್ರೀಪಾದ ಭಟ್ಟ, ನಾರಾಯಣ ಹೆಗಡೆ, ಶಂಕರ ನಾಯ್ಕ, ಸುಬ್ರಾಯ ನಾಯ್ಕ, ಮಂಜುನಾಥ ಹೆಗಡೆ, ಗಣಪ ಚನ್ನಯ್ಯ ಹಾಗೂ ಇತರರು.

ಊರಿನ ಏಕೈಕ ಕೆರೆಗೆ ಮಳೆ ನೀರೆ ಆಧಾರವಾಗಿದ್ದು ಯಾವುದೇ ನೀರ ಒರತೆಯನ್ನು ಹೊಂದಿಲ್ಲ. ಕಾಲಕಾಲಕ್ಕೆ ಇದರ ಹೂಳನ್ನು ತೆಗೆದರೆ ಮಾತ್ರ ಸೂಕ್ತ ನೀರಿನ ಲಭ್ಯತೆ ಇರುತ್ತದೆ. ಆದರೆ ತೆಗೆದ ಹೂಳನ್ನು ಹೊರಹಾಕುವದು ಕೂಡ ಅಷ್ಟೇ ಸಮಸ್ಯೆಯಾಗಿದ್ದು ಬಯಲುಸೀಮೆಯಂತೆ ಇಲ್ಲಿನ ತೋಟಗಾರಿಕಾ ಬೆಳೆಗಳಿಗೆ ಬಳಸಲು ಸಾಧ್ಯವಿಲ್ಲ. ಹೂಳನ್ನು ತೆಗೆಯುವದು ಹಾಗೂ ಹೊರಸಾಗಿಸುವದು ಸರ್ಕಾರದ ಸಹಾಯವಿಲ್ಲದೆ ಕಷ್ಟ ಸಾಧ್ಯ ಎನ್ನುವ ಗ್ರಾಮಸ್ಥರು, ಕಬ್ಬು ಈ ಭಾಗದ ಪ್ರಮುಖ ಬೆಳೆಯಾಗಿದ್ದು ವಾರ್ಷಿಕವಾಗಿ ಸುಮಾರು 13 ಟನ್ನುಗಳಷ್ಟು ಬೆಲ್ಲ ಉತ್ಪಾದಿಸಲಾಗುತ್ತಿದೆ. ಬೆಲ್ಲ ಸಂಸ್ಕರಣೆಗಾಗಿ ವಾರ್ಷಿಕ ಸುಮಾರು 500 ಟನ್ನುಗಳಷ್ಟು ಕಟ್ಟಿಗೆ ನಮ್ಮ ಸುತ್ತಲಿನ ಅರಣ್ಯದಿಂದ ಖಾಲಿಯಾಗುತ್ತಿದೆ. ಇದು ಕೇವಲ ನಮ್ಮ ಊರಿನ ಚಿತ್ರಣ. ಬರ ಪರಿಸ್ಥಿತಿಗೆ ಇದರ ಕೊಡುಗೆ ಕಡಿಮೆಯೇನಿಲ್ಲ. ಇದಕ್ಕಾಗಿ ಕಟ್ಟಿಗೆ ರಹಿತ ಒಲೆಗಳ ನಿರ್ಮಾಣ ಆಧುನಿಕ ಸಂಸ್ಕರಣಾ ಪದ್ದತಿಯ ಅಳವಡಿಕೆ ಕುರಿತು ಜಾಗೃತಿ ಮೂಡಿಸುವದು ಅವಶ್ಯವಾಗಿದೆ. ಲಭ್ಯವಿದ್ದ ಅಲ್ಪ ಪ್ರಮಾಣದ ಖಾಲಿ ಜಾಗದಲ್ಲೂ ಅರಣ್ಯ ಇಲಾಖೆಯಿಂದ ಕೇವಲ ಅಕೇಶಿಯಾ ಗಿಡಗಳನ್ನು ಬೆಳೆಸಿದ್ದು ಈ ವರ್ಷ ಜೋಯಿಡಾ, ಸಾಗರ ಮುಂತಾದೆಡೆ ಆದ ಪರಿಣಾಮದ ಭೀತಿ ಇದೆ. ಇದಕ್ಕಾಗಿ ಇಲ್ಲಿನ ಆಸಕ್ತ ರೈತರ ಬೆಟ್ಟ ಪ್ರದೇಶವನ್ನೂ ಒಳಗೊಂಡು ನೈಸರ್ಗಿಕ ಗಿಡಗಳನ್ನು ಬೆಳೆಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂದಾಗಬೇಕಿದೆ. ಈ ಎಲ್ಲ ಕಾರ್ಯಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಗ್ರಾಮ ಅರಣ್ಯ ಸಮಿತಿಯನ್ನು ರಚಿಸುವ ಅವಶ್ಯಕತೆ ನಮಗಿದೆ. ಈ ವರ್ಷ ಕೈಗೊಳ್ಳಲಿರುವ ಕಾರ್ಯಕ್ರಮಗಳ ವಾರ್ಷಿಕ ನಿರ್ವಹಣೆ ಹಾಗೂ ವಿಸ್ತರಣೆಗೆ ಸೂಕ್ತ ಯೋಜನೆಯ ಅವಶ್ಯಕತೆ. ಇದಕ್ಕಾಗಿ ಸಂಪೂರ್ಣ ಜಲಾನಯನ ಪ್ರದೇಶವನ್ನು ಸಮಗ್ರ ಯೋಜನೆಗೊಳಪಡಿಸಿ ರಾಜ್ಯದಲ್ಲೇ ಮಾದರಿಯಾಗಿ ಮಾಡಲು ಸರ್ಕಾರದ ಸಹಕಾರ ಅವಶ್ಯ ಎನ್ನುತ್ತಾರೆ.

loading...

LEAVE A REPLY

Please enter your comment!
Please enter your name here