ಖಾನಾಪುರದಲ್ಲಿ ಬಂದ್ ಸಂಪೂರ್ಣ ಯಶಸ್ವಿ

0
16
loading...

30khanapur4ಖಾನಾಪುರ: ಪಟ್ಟಣ ಸೇರಿದಂತೆ ತಾಲೂಕಿನ ನಂದಗಡ ಗ್ರಾಮದಲ್ಲಿ ಶನಿವಾರ ಮಹಾದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಕರೆ ನೀಡಿದ್ದ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಬಂದ್ ಕರೆಗೆ ಸ್ಪಂದಿಸುವ ಮೂಲಕ ಮಹಾದಾಯಿ ನ್ಯಾಯಾಧೀಕರಣ ನೀಡಿದ ರಾಜ್ಯವಿರೋಧಿ ತೀರ್ಪನ್ನು ಖಂಡಿಸುವುದಾಗಿ ಸಾಬೀತುಪಡಿಸಿದವು.
ಪಟ್ಟಣದ ಜನನಿಬಿಡ ರಸ್ತೆಗಳಲ್ಲಿ ಹಿರೇಮುನವಳ್ಳಿ ಶಾಂಡಿಲ್ಯೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಸಂಚರಿಸಿದ ಪ್ರತಿಭಟನಾಕಾರರು ಶಿವಸ್ಮಾರಕ ವೃತ್ತ ಮತ್ತು ಮಹಾತ್ಮಾ ಫುಲೆ ವೃತ್ತಗಳಲ್ಲಿ ನಾಲ್ಕು ಗಂಟೆಗಳ ಕಾಲ ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟನೆಯನ್ನು ಕೈಗೊಂಡರು. ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ರಾಜ್ಯಕ್ಕೆ ಅನ್ಯಾಯ ಮಾಡಿದ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಂದ್ ಕರೆಗೆ ಕರ್ನಾಟಕ ರಕ್ಷಣಾ ವೇದಿಕೆ, ವಕೀಲರ ಸಂಘ, ವ್ಯಾಪಾರಸ್ಥರ ಸಂಘ, ವಾಯುವ್ಯ ಸಾರಿಗೆ ಸಂಸ್ಥೆಯ ನೌಕರರ ಸಂಘ, ಅಖಂಡ ಕರ್ನಾಟಕ ರೈತ ಸಂಘ, ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಬಂದ್ ಕರೆಯ ಪರಿಣಾಮ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿತ್ತು. ಗೋವಾ ರಾಜ್ಯಕ್ಕೆ ತೆರಳುವ ವಾಹನಗಳನ್ನು ತಡೆಹಿಡಿಯಲಾಗಿತ್ತು. ಮಧ್ಯಾಹ್ನ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದ ಪ್ರತಿಭಟನಾಕಾರರು ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ಮಹಾದಾಯಿ ನದಿಯಿಂದ ರಾಜ್ಯಕ್ಕೆ ನೀರು ಹರಿಸಲು ಪ್ರಯತ್ನಿಸಲು ಆಗ್ರಹಿಸಿದರು. ಬಂದ್ ಕರೆಯಲ್ಲಿ ಕರವೇ ಕಾರ್ಯಕರ್ತರಾದ ದಶರಥ ಬನೋಶಿ, ವಿಠ್ಠಲ ಹಿಂಡಲಕರ, ಆರೋಗ್ಯಪ್ಪ ಪಾದನಕಟ್ಟಿ, ಭರತೇಶ ಜೋಳದ, ದತ್ತು ಪೂಜಾರ, ಬಸವರಾಜ ಬಡಿಗೇರ, ಸೂರಜ ಸತ್ತೀಗೆರಿ, ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ರಾಹುತ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಠಾಧೀಶರು, ರೈತರು, ಮತ್ತಿತರರು ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here