ತಗ್ಗು-ಗುಂಡಿ ಬಿದ್ದರೆ ನಮಗೆ ಸಂಬಂಧವಿಲ್ಲ: ಜಿವಿಆರ್ ಕಂಪನಿ

0
38
loading...

ಸಾರಿಗೆ ಇಲಾಖೆ ನಿಯಮ ಸಹ ಕಂಪನಿ ಗಾಳಿಗೆ ತೂರಿದೆ
ಚಿಕ್ಕೋಡಿ: ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ತಗ್ಗು-ಗುಂಡಿ ಬಿದ್ದರೆ ನಮಗೆ ಸಂಬಂಧವಿಲ್ಲ ಎಂಬ ಹಾರಿಕೆ ಉತ್ತರ, ಹೊರರಾಜ್ಯದಿಂದ ಬಂದು ಟೆಂಡರ ಪಡೆದುಕೊಂಡಿರುವ ಜಿವಿಆರ್ ಕಂಪನಿಯ ಸ್ಥಳೀಯ ನಿರ್ವಹಣಾ ಮುಖ್ಯಸ್ಥರೊಬ್ಬರು ದೂರವಾಣಿ ಮೂಲಕ ಹೇಳಿಕೆ ನೀಡಿದ್ದಾರೆ.
ಪ್ರಮುಖ ರಾಜ್ಯ ಹೆದ್ದಾರಿಗಳಲ್ಲೊಂದಾದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯನ್ನು ಕಳೆದ 2014ರ ಅಂತ್ಯದಲ್ಲಿ ಟೆಂಡರ ಕರೆದು ರಾಜ್ಯ ಸರಕಾರ ಜಿವಿಆರ್ ಕಂಪನಿಗೆ ಟೆಂಡರ ನೀಡಿತ್ತು. ಟೆಂಡರ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತುಂಬಿ ನಿರ್ವಹಿಸುವುದು ಜಿವಿಆರ್ ಕಂಪನಿಗೆ ಸಂಬಂಧಿಸಿದ್ದಾಗಿರುತ್ತದೆ.
ಟೆಂಡರ ನಂತರ ಲೋಕೋಪಯೋಗಿ ಇಲಾಖೆ ಆಧೀನದಲ್ಲಿದ್ದ ಈ ಹೆದ್ದಾರಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಸ್ತಾಂತರವಾಗಿದೆ. ಆದರೆ 2014ರಿಂದ ಇಲ್ಲಿಯವರೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದಿಂದ ಟೆಂಡರ ಪಡೆದು ಕಾರ್ಯಾಚರಣೆ ಆರಂಭಿಸಿರುವ ಜಿವಿಆರ್ ಕಂಪನಿ ರಸ್ತೆ ಸುಧಾರಣೆ ದೂರವಿರಲಿ ರಸ್ತೆಯ ಮಧ್ಯದಲ್ಲಿ ಬಿದ್ದಿರುವ ದೊಡ್ಡ ಗಾತ್ರದ ಗುಂಡಿಗಳನ್ನು ಸಹ ಮುಚ್ಚಲಿಕ್ಕೆ ಮುಂದೆ ಬಂದಿಲ್ಲ.
ರಸ್ತೆ ನಿರ್ಮಾಣದಲ್ಲಿ ಸಂದರ್ಭದಲ್ಲಿ ಪಾಲಿಸಬೇಕಾಗಿರುವ ಸಾರಿಗೆ ಇಲಾಖೆ ನಿಯಮಗಳನ್ನು ಸಹ ಕಂಪನಿ ಗಾಳಿಗೆ ತೂರಿದೆ. ಇದರಿಂದಾಗಿ ರಸ್ತೆ ಮಧ್ಯದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಸೇತುವೆ ನಿರ್ಮಿಸಲಿಕ್ಕಾಗಿ ಪರ್ಯಾಯ ವ್ಯವಸ್ಥೆಗಾಗಿ ನಿರ್ಮಿಸಿರುವ ರಸ್ತೆಗಳು ಅಪಘಾತದ ಕೇಂದ್ರಬಿಂದುಗಳಾಗಿವೆ. ಅಲ್ಲದೇ ಬಸ್‍ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ನಾವು ಯಾವುದೋ ಗುಡ್ಡಗಾಡು ಪ್ರದೇಶದಲ್ಲಿ ಸಾಗುತ್ತಿದ್ದೇವೆ ಎಂಬ ಅನುಭವವಾಗುತ್ತದೆ. ಕಾನೂನಿನ ಪ್ರಕಾರ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸಂಭವಿಸುವ ಅಪಘಾತಗಳಿಗೆ ಗುತ್ತಿಗೆದಾರರೇ ಪರಿಹಾರ ನೀಡಬೇಕೆಂದು ಕೋರ್ಟ ಸಹ ಆದೇಶ ನೀಡಿದ್ದು, ಈವರೆಗಿನ ಅಪಘಾತ ಹೊಂದಿದವರಿಗೆ ಪರಿಹಾರ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಳೆದೆರಡು ವರ್ಷಗಳಲ್ಲಿ ಮಳೆಯಿಲ್ಲದೇ ಬರಗಾಲದ ಛಾಯೆಯಿಂದಾಗಿ ರಸ್ತೆ ಮೇಲೆ ಸಂಚರಿಸುವಾಗ ರಸ್ತೆ ತುಂಬ ಧೂಳು ತುಂಬಿಕೊಂಡು ಮುಂದಿನ ದಾರಿ ಕಾಣದೇ ಕ್ಷಣ ಕಾಲ ಸ್ಥಳದಲ್ಲೇ ನಿಂತು ಧೂಳಿನಿಂದ ಮುಕ್ತಿ ಪಡೆದುಕೊಳ್ಳಬೇಕಾಗುತ್ತಿತ್ತು. ಇದರಿಂದ ಅಕ್ಕಪಕ್ಕದ ಜಮೀನಿನಲ್ಲಿರುವ ಬೆಳೆಗಳು ಸಹ ಹಾನಿಗೀಡಾಗಿದ್ದವು. ಆದರೆ ಜೂನ-ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ಹಲವಾರು ವಾಹನಗಳು ಅಪಘಾತಕ್ಕಿಡಾಗಿವೆ. ಅಲ್ಲದೇ ಈಗಿರುವ ಹಳೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ತುಂಬಿಸುವಂತೆ ಕನ್ನಡಮ್ಮ ಪತ್ರಿಕೆ ಜಿವಿಆರ್ ಕಂಪನಿಯನ್ನು ಸಂಪರ್ಕಿಸಿತು. ಆದರೆ ವರದಿ ಪ್ರಕಟವಾಗಿ ವಾರ ಉರುಳಿದರೂ ಈ ಬಗ್ಗೆ ಲಕ್ಷವಹಿಸದ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನಮಗೆ ಪರ್ಯಾಯ ರಸ್ತೆ ಮಾತ್ರ ನಿರ್ಮಿಸುವುದು ಮಾತ್ರ ಸಂಬಂಧಿಸಿದೆ. ಅದರಲ್ಲಿ ತಗ್ಗು-ಗುಂಡಿ ಬಿದ್ದರೆ ಅದು ನಮಗೆ ಸಂಬಂಧಪಡುವುದಿಲ್ಲ ಎಂದು ಉತ್ತರಿಸಿದರು.
ಈ ರಸ್ತೆ ದುರಸ್ತಿ ಯಾರಿಗೆ ಸಂಬಂಧಪಡುತ್ತದೆ ಅಂತಾ ಅದರ ಮೂಲ ಹುಡುಕ ಹೊರಟಾಗ ಬೆಳಗಾವಿಯ ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯಕಾರಿ ಅಭಿಯಂತರು ಹಳೆ ರಸ್ತೆ ಮೇಲೆ ಗುಂಡಿ ತುಂಬುವುದು ಜಿವಿಆರ್ ಕಂಪನಿಗೆ ಸಂಬಂಧಪಡುತ್ತದೆ. ಹೀಗಾಗಿ ಅವರೇ ಅವುಗಳನ್ನು ಸರಿಪಡಿಸಬೇಕು ಎಂದಿದ್ದಾರೆ. ಆದರೆ ಮಳೆಗಾಲ ಬಂದು ರಸ್ತೆಗಳಲ್ಲಿ ಅಪಾಯ ತಂದೊಡ್ಡುವ ಹಂತಕ್ಕೆ ತಗ್ಗುಬಿದ್ದರೂ ಸಹ ಅವುಗಳನ್ನು ಭರ್ತಿ ಮಾಡದೇ ವಾಹನ ಸಂಚಾರಿಗಳು ಹಿಡಿಶಾಪ ಹಾಕುವಂತಾಗಿದೆ.
ಕಛೇರಿ ಕೆಲಸಗಳಿಗಾಗಿ ಹಾಗೂ ನಿಪ್ಪಾಣಿ ಮತ್ತೀತರ ಮಹಾರಾಷ್ಟ್ರ ಭಾಗದಿಂದ ಬರುವ ಜನರಿಗೆ ಮುಧೋಳ-ನಿಪ್ಪಾಣಿ ಹೆದ್ದಾರಿಯೇ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ರಸ್ತೆಗಳ ನಿರ್ಮಾಣ ಕಾರ್ಯದಲ್ಲಿಯೂ ಕಂಪನಿ ವಿಳಂಬ ನೀತಿ ಅನುಸರಿಸುತ್ತಿದೆ. ತನ್ನ ಕಾರ್ಯವನ್ನು ಒಂದೇ ಹಂತವಾಗಿ ಪೂರ್ಣಗೊಳಿಸದೇ ಪ್ರಮುಖ ಸ್ಥಳಗಳಲ್ಲಿ ನಡುವೆ ರಸ್ತೆ ನಿರ್ಮಿಸದೇ ಹಾಗೇ ಬಿಟ್ಟಿದೆ.
ಇದರಿಂದಾಗಿ ಸೇತುವೆ ನಿರ್ಮಾಣ ಸೇರಿದಂತೆ ಇತರ ಕಾರಣಗಳಿಂದಾಗಿ ನಿರ್ಮಿಸಿದ ಪರ್ಯಾಯ ರಸ್ತೆ ಹಾಗೂ ಹಳೆ ಡಾಂಬರ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದು ಸಂಚಾರ ವ್ಯವಸ್ಥೆಗೆ ಅನಾನುಕೂಲವಾಗುತ್ತಲೇ ಇರುವ ಬಗ್ಗೆ ಲೋಕೋಪಯೋಗಿ ಇಲಾಖೆ ಸಚಿವ ಎಚ್.ಸಿ. ಮಹಾದೇವಪ್ಪ ಅವರನ್ನು ಸಂಪರ್ಕಿಸಿದಾಗ ಈ ಬಗ್ಗೆ ಕಂಪನಿಯ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ಮರೆತಿರುವ ಜಿವಿಆರ್ ಕಂಪನಿ ಕೆಸಿಫ್ ಅಧಿಕಾರಿಗಳ ನೀಡಿರುವ ಆದೇಶಕ್ಕೆ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ ಅವರ ಮಾತಿಗೆ ಯಾವ ರೀತಿ ಸ್ಪಂದನೆ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
********
ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಟೆಂಡರ ಪಡೆದುಕೊಂಡಿರುವ ಜಿವಿಆರ್ ಕಂಪನಿಯೇ ಕಾಮಗಾರಿ ಪೂರ್ಣಗೊಳ್ಳುವವರೆಗೆ ಅದರ ನಿರ್ವಹಣೆ ಮಾಡಬೇಕು. ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಕೊಳ್ಳಲು ಸೂಚಿಸುವೆ.
ಎಚ್.ಸಿ. ಮಹಾದೇವಪ್ಪ
ಲೋಕೋಪಯೋಗಿ ಸಚಿವರು
********
ಮಳೆಗಾಲದಿಂದ ಉಂಟಾಗಿರುವ ರಸ್ತೆಯ ತಗ್ಗು-ಗುಂಡಿಗಳನ್ನು ಜಿವಿಆರ್ ಕಂಪನಿ ನಿರ್ವಹಿಸಬೇಕು. ಈ ಬಗ್ಗೆ ಅವರಿಗೆ ಇಲಾಖೆ ಮೂಲತ ಆದೇಶ ನೀಡಲಾಗುವುದು.
ಎಸ್.ಸಿ.ನಾಯಿಕ
ಸಹಾಯಕ ಕಾರ್ಯಕಾರಿ ಅಭಿಯಂತ, ಕೆಸಿಪ್

******
ನಿಪ್ಪಾಣಿಗೆ ಹೋಗುವಾಗ ಪ್ರತಿಯೊಬ್ಬರೂ ಜಾಗರೂಕರಾಗಿ ವಾಹನ ಚಾಲನೆ ಮಾಡಬೇಕಿದೆ. ಈಗಾಗಲೇ ಹಲವಾರು ಅಪಘಾತ ಸಂಭವಿಸಿವೆ. ಇನ್ನು ನಿತ್ಯ ಸಂಚರಿಸುವ ಜನರಿಗೆ ಪ್ರಾಣಭಯ ಕಾಡುತ್ತಲೆಯಿದೆ. ಈ ರಸ್ತೆಗಳಲ್ಲಿ ಬಿದ್ದಿರುವ ತಗ್ಗು-ಗುಂಡಿಗಳು ಕೂಡಲೇ ದುರಸ್ತಿಯಾಗಬೇಕು.
ಅಕ್ಷಯ ಮುಸಂಡಿ
ವಾಹನ ಸಂಚಾರಿ, ಚಿಕ್ಕೋಡಿ

loading...

LEAVE A REPLY

Please enter your comment!
Please enter your name here