ಪತ್ರಿಕಾ ದಿನ ಆಚರಣೆ

0
47
loading...

ಭಟ್ಕಳ : ಜಿಲ್ಲಾ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಲ್ಲಿನ ಗುರು ಸುಂಧೀಂದ್ರ ಬಿಬಿಎ, ಬಿಸಿಎ ಕಾಲೇಜ್ ಆಡಿಟೋರಿಯಂನಲ್ಲಿ ಶುಕ್ರವಾರ ಬೆಳಿಗ್ಗೆ ಏರ್ಪಡಿಸಲಾದ ಪತ್ರಿಕಾ ದಿನಾಚರಣೆ, ಉಪನ್ಯಾಸ, ಕೆ. ಶ್ಯಾಮರಾವ್ ದತ್ತಿ ಪ್ರಶಸ್ತಿ ಹಾಗೂ ಅಜ್ಜೀಬಳ ಪುರಸ್ಕಾರವನ್ನು ಶಾಸಕ ಮಂಕಾಳ ಎಸ್ ವೈದ್ಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪ್ರಜಾಪ್ರಭುತ್ವದಲ್ಲಿ ಪತ್ರಿಕೆ ತನ್ನದೇ ಆದ ಮಹತ್ವ ಹೊಂದಿದೆ. ಸಮಾಜದಲ್ಲಿರುವ ಸಮಸ್ಯೆ ಸೇರಿದಂತೆ ವಿವಿಧ ವಿಚಾರಗಳನ್ನು ಸುದ್ದಿ ರೂಪದಲ್ಲಿ ನೀಡಿ ಗಮನ ಸೆಳೆಯುವ ಪತ್ರಕರ್ತರೂ ಕೂಡ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಪತ್ರಕರ್ತರು ಸಮಾಜದ ಸಮಸ್ಯೆಗಳ ಬಗ್ಗೆ ವಸ್ತುನಿಷ್ಟವಾದ ವರದಿ ನೀಡಿದರೆ ಜನಪ್ರತಿನಿಧಿಗಳು, ಸರಕಾರ ಕೂಡ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಸಹಕಾರಿಯಾಗುತ್ತದೆ ಎಂದ ಅವರು ಕ್ಷೇತ್ರದಲ್ಲಿ ಪತ್ರಿಕಾ ವರದಿಗಳಿಂದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮಳೆಗಾಲದಲ್ಲಿ ದ್ವೀಪವಾಗುವ ಕುಗ್ರಾಮ ಹೆಂಜಲೆಗೆ ಪತ್ರಿಕಾ ವರದಿಯನ್ನು ನೋಡಿ ಸರಕಾರದಿಂದ 5 ಕೋಟಿ ಅನುದಾನ ಮಂಜೂರಿಸಿ ತಂದಿದ್ದೇನೆ. ಪತ್ರಕರ್ತರು ಜನರ ಮಧ್ಯೆ ಇರುವುದರಿಂದ ಅವರಿಗೆ ಎಲ್ಲಾ ರೀತಿಯ ಸಮಸ್ಯೆಗಳ ಬಗ್ಗೆಯೂ ಅರಿವು ಇರುತ್ತದೆ. ಇಂತಹ ಸಮಸ್ಯೆಗಳ ಕುರಿತು ಪತ್ರಕರ್ತರು ಪ್ರತಿಕೆಗಳ ಮೂಲಕ ಗಟ್ಟಿ ಧ್ವನಿಯಾಗಬೇಕಿದೆ. ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ರಿಕಾ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು. ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಮೈಸೂರು ಕಾಲೇಜಿನ ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ.ನಿರಂಜನ ವಾನಳ್ಳಿ ದೇಶದಲ್ಲಿ ದ್ಥಶ್ಯ ಮಾಧ್ಯಮ ಹೆಚ್ಚಾಗಿದ್ದರೂ ಸಹ ಮುದ್ರಣ ಮಾಧ್ಯಮಕ್ಕೆ ಯಾವುದೇ ಹೊಡೆತ ಬಿದ್ದಿಲ್ಲ. ಇವರೆಡೂ ಮಾಧ್ಯಮಗಳೂ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿವೆ. ದೃಶ್ಯಮಾದ್ಯಮದ ಹಾವಳಿಯಿಂದ ಪತ್ರಿಕೆಗಳು ಸಾಯುತ್ತವೆ ಎಂದು ಅಂದಾಜಿಸಲಾಗಿತ್ತು. ಆದರೆ ನಮ್ಮ ದೇಶದಲ್ಲಿ ಪತ್ರಿಕೆಗಳಿಗೆ ಎಂದೂ ಸಾವಿಲ್ಲ ಎಂದ ಅವರು ದೇಶದಲ್ಲಿ ಮಾದ್ಯಮಗಳು ಶೇ. 5.8ರಷ್ಟು ಅಭಿವೃದ್ಧಿ ಕಂಡಿದೆ. ದೇಶದಲ್ಲಿ 1,5,443 ಪತ್ರಿಕೆಗಳಿದ್ದು,5.52 ಕೋಟಿ ಪ್ರಸಾರ ಹೊಂದಿದೆ. ಪತ್ರಕರ್ತರು ವಸ್ತುನಿಷ್ಟ, ಸತ್ಯಾಂಶದ ವರದಿಗಳನ್ನು ನೀಡುವಂತಾಗಬೇಕು. ಪತ್ರಕರ್ತರು ಜನರ ಒಡನಾಡಿಯಾಗಿ ಕೆಲಸ ಮಾಡಿದರೆ ಯಾವುದೇ ಭಯದ ವಾತಾವರಣ ಸೃಷ್ಟಿಯಾಗುವುದಿಲ್ಲ ಎಂದ ಅವರು ಪತ್ರಿಕೆ ಬೆಳೆಯಬೇಕಾದರೆ ಕೊಂಡು ಓದಬೇಕಿದೆ. ಅಂದಾಗ ಪತ್ರಿಕೆಗಳು ಬೆಳೆಯಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಪತ್ರಿಕೆಗಳನ್ನು ಮನೆಮನೆಗೆ ಹಂಚುವವರ ಸಂಖ್ಯೆ ಕಡಿಮೆಯಾಗಿದೆ. ಇಂದು ವರದಿ ಓದುವುದಕ್ಕಿಂತ ಕಾಣುವುದೇ ಜಾಸ್ತಿಯಾಗಿದೆ. ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದವರು ರವಿ ನಾಯ್ಕ ಎನ್ನುವ ಪತ್ರಿಕಾ ಹಂಚಿಕೆದಾರನನ್ನು ಗುರುತಿಸಿ ಗೌರವಿಸಿರುವುದು ಉತ್ತಮ ಬೆಳವಣಿಗೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ ಜಿಲ್ಲಾ ಸಂಘದ ವತಿಯಿಂದ ವರ್ಷಂಪ್ರತಿ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ಜಿಲ್ಲಾ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಸಲಾಗುತ್ತದೆ. ಭಟ್ಕಳ ಸಂಘದವರು ಅತ್ಯುತ್ತಮವಾಗಿ ಕಾರ್ಯಕ್ರಮ ಸಂಘಟಿಸಿದ್ದು, ಸಂತಸ ತಂದಿದೆ. ಅಗಷ್ಟನಲ್ಲಿ ಶಿರಸಿಯಲ್ಲಿ ಜಿಲ್ಲಾ ಸಮ್ಮೇಳನ ನಡೆಸಲಾಗುತ್ತದೆ ಎಂದರು. ಕೆ. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿ ಪಡೆದ ರಾಧಕೃಷ್ಣ ಭಟ್ಟ, ಅಜ್ಜೀಬಳ ಪುರಸ್ಕಾರ ಪಡೆದ ಶೈಲಜಾ ಗೋರನಮನೆ ಸಿರಸಿ, ನಾಗರಾಜ ಭಟ್ಟ ಸಿದ್ದಾಪುರ ಮಾತನಾಡಿದರು. ವೇದಿಕೆಯಲ್ಲಿ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಸಹಕಾರಿ ಧುರೀಣ ಡಿ ಬಿ ನಾಯ್ಕ, ಮೀನುಗಾರರ ಮುಖಂಡ ವಸಂತ ಖಾರ್ವಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಟ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗೂ ಹಿರಿಯ ವರದಿಗಾರ ರಾಧಕೃಷ್ಣ ಭಟ್ಟರಿಗೆ ಕೆ. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿ ಹಾಗೂ ಜಿ.ಎಸ್. ಹೆಗಡೆ ಅಜ್ಜಿಬಳ ಪುರಸ್ಕಾರವನ್ನು ಅನಂತ ದೇಸಾಯಿ ಜೋಯಿಡಾ, ಶೈಲಜಾ ಗೋರನಮನೆ ಸಿರಸಿ, ನಾಗರಾಜ ಭಟ್ಟ ಸಿದ್ಧಾಪುರ, ಓರವಿಲ್ ಫೆರ್ನಾಂಡೀಸ್ ಹಳಿಯಾಳ, ಕೃಷ್ಣಮೂರ್ತಿ ಭಟ್ಟ ಹೊನ್ನಾವರ ಇವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಭಟ್ಕಳದ ನಿವೃತ್ತ ಕ್ಯಾಪ್ಟನ್ ಹಾಗೂ ಸಿದ್ದಾರ್ಥ ಎಜ್ಯಕೇಶನ್ ಟ್ರಸ್ಟನ ಅಧ್ಯಕ್ಷ ಕೆ. ಆರ್. ನಾಯ್ಕ ಅವರನ್ನು ಹಾಗೂ ಮನೆಮನೆಗೆ ಪತ್ರಿಕೆ ತಲುಪಿಸುವ ಮುಂಡಳ್ಳಿಯ ರವಿ ಕೃಷ್ಣಾ ನಾಯ್ಕರನ್ನೂ ಸನ್ಮಾನಿಸಿ ಗೌರವಿಸಲಾಯಿತು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ ಆರ್ ಮಾನ್ವಿ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ತಾಲ್ಲೂಕು ಕಸಾಪ ಅಧ್ಯಕ್ಷ ಹಾಗೂ ಜ್ಞಾನೇಶ್ವರಿ ಬಿಇಡಿ ಕಾಲೇಜಿನ ಉಪನ್ಯಾಸಕ ಗಂಗಾಧರ ನಾಯ್ಕ ನಿರೂಪಿಸಿದರು. ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು, ಜಿಲ್ಲಾ ಸಂಘದ ಪದಾಧಿಕಾರಿಗಳು, ಪತ್ರಕರ್ತರು,ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು,ಜನಪ್ರತಿನಿಧಿಗಳು,ಗಣ್ಯರು, ಜ್ಞಾನೇಶ್ವರಿ ಬಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಮುಂತಾದವರಿದ್ದರು.

loading...

LEAVE A REPLY

Please enter your comment!
Please enter your name here