ಪ್ರವಾಸಕ್ಕೆ ಪ್ರಯಾಸ ತಂದೊಡ್ಡುವ ಸಾತೊಡ್ಡಿ ಜಲಪಾತ ರಸ್ತೆ

0
60
loading...

ಯಲ್ಲಾಪುರ : ಕರ್ನಾಟಕದ ಪ್ರವಾಸಿ ನಕ್ಷೆಯಲ್ಲಿ ದಾಖಲಾಗಿರುವಂತಹ ಪ್ರಸಿದ್ಧ ಜಲಪಾತಗಳಲ್ಲಿ ಸಾತೊಡ್ಡಿ ಜಲಪಾತವೂ ಒಂದಾಗಿದ್ದು ಉ.ಕಜಿಲ್ಲೆಯ ನಯಾಗರ ವೆಂದೇ ಖ್ಯಾತವಾಗಿದೆ. ಬೇಸಿಗೆಯಲ್ಲಿ ಬಸವಳಿದ ಈ ಜಲಪಾತವು ಮಳೆ ಬೀಳುತ್ತಿದ್ದಂತೆ ಮೈದುಂಬಿಕೊಂಡಿದೆ.ಜಲಪಾತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.ಯಲ್ಲಾಪುರ ಪಟ್ಟಣದಿಂದ 30 ಕಿ.ಮೀ. ದೂರದಲ್ಲಿರುವ ಈ ಸಾತೊಡ್ಡಿ ಜಲಪಾತದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಪ್ರವಾಸಿಗರ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ.ಮಳೆಗಾಲದಲ್ಲಿ ರಸ್ತೆಯ ಮಧ್ಯದಲ್ಲಿ ಹೊಂಡದ ತುಂಬಾ 2 ಅಡಿ ನೀರು ನಿಂತುಕೊಂಡು ವಾಹನ ಸವಾರರಿಗೆ ಅಂದಾಜಾಗದೆ ರಸ್ತೆಯ ನಡುವೆಯೇ ವಾಹನ ಸಿಕ್ಕಿ ಹಾಕಿಕೊಳ್ಳುವುದುಂಟು. ದಟ್ಟ ಕಾನನದಲ್ಲಿ ಹತ್ತಾರು ಕಿ.ಮೀ. ವಾಹನ ಸಂಚಾರದಲ್ಲಿ ಯಾರ ಸಹಾಯಹಸ್ತವೂ ಸಿಗದಂತಹ ಘಟ್ಟ ಪ್ರದೇಶವಾಗಿದ್ದು ಮೆಟ್ಟಿಲಾಕಾರದಲ್ಲಿ ರಸ್ತೆಯ ದಿಬ್ಬಗಳು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತದೆ. ಹುಬ್ಬಳ್ಳಿಯ ಕೇಂದ್ರ ಸ್ಥಾನದಿಂದ ಪ್ರತಿ ರವಿವಾರ ನೂರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರು ರಸ್ತೆಯ ದುವ್ರ್ಯವಸ್ಥೆ ಕಂಡು ಹಿಡಿ ಶಾಪ ಹಾಕುತ್ತಿದ್ದಾರೆ ಪ್ರವಾಸೋದ್ಯಮ ಇಲಾಖೆ ಜಲಪಾತದ ಸಮೀಪ ಕೋಟಿ ಕೋಟಿ ಹಣವನ್ನು ಸಿಮೆಂಟ್ ಕಾಂಕ್ರೀಟ ರಸ್ತೆಗೆ ಸುರಿದರೂ ಜಲಪಾತಕ್ಕೆ ಹೋಗುವ ಕಾಲು ಹಾದಿಗುಂಟ ನಿರ್ಮಿಸಿದ 3 ಫುಟ್ ಅಗಲದ ಕಿರು ಸೇತುವೆ ಮೇಲೆ ಮರ ಬಿದ್ದು ಸೇತುವೆಯ ಕಬ್ಬಿಣದ ರಾಡ್‍ಗಳು ಮುರಿದಿವೆ.ಮತ್ತು ದೊಡ್ಡ ದೊಡ್ಡ ಕಲ್ಲುಗಳು ಉರುಳಿ ಸಂಚಾರಕ್ಕೆ ಅಡ್ಡಿಯಾಗಿ ವೃದ್ಧರು ಮಕ್ಕಳು ಸಾಗುವುದಕ್ಕೆ ತೀವ್ರತರ ತೊಂದರೆಯಾಗುತ್ತಿದೆ. ಅಲ್ಲಿ ತಾಲೂಕು ಕೇಂದ್ರದಿಂದ ಮಾರ್ಗ ನಿರ್ವಹಣೆಯಲ್ಲಿ ಸೋತಿದೆ.ಜಲಪಾತದ ಬಳಿಯ ಲಕ್ಷಾಂತರ ರೂ.ವೆಚ್ಚದ ವೀಕ್ಷಣಾ ಗೋಪುರ ಅನಾಥವಾಗಿದ್ದು ಅಲ್ಲಿ ತಲುಪುವ ದಾರಿಯು ಗಿಡ-ಗಂಟಿಗಳಿಂದ ಆವರಿಸಿಕೊಂಡಿದೆ. ಇದು ಕೇವಲ ಪ್ರವಾಸಿಗರ ಕಷ್ಟವೊಂದೇ ಆಗಿರದೆ ಆನಗೋಡ, ದೇಹಳ್ಳಿ ಭಾಗದ ಸ್ಥಳೀಯ ನಿವಾಸಿಗರಿಗೂ ಸಂಪರ್ಕ ಸಂಪೂರ್ಣ ಹದಗೆಟ್ಟಿದ್ದು ಸರಕಾರದ ವೈಫಲ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಹಳ ದಿನಗಳಿಂದ ಈ ಭಾಗದಲ್ಲಿನ ರಸ್ತೆಯ ಸಂಚಾರಕ್ಕೆ ತೊಂದರೆಯಾಗುತ್ತಿದ್ದರೂ ಸ್ಥಳೀಯ ಜನಪ್ರತಿನಿಧಿಗಳು ಈ ರಸ್ತೆಯ ಸುಗಮ ಸಂಚಾರದ ಬಗೆಗೆ ಅಲಕ್ಷಿಸುತ್ತಿರುವುದು ವಿಪರ್ಯಾಸವೇ ಸರಿ.

ಸಾತೊಡ್ಡಿ ಜಲಪಾತ ಬಹಳ ನಯನ ಮನೋಹರವಾಗಿ ಬೋರ್ಗರೆಯುತ್ತಿದೆ.ದಣಿವನ್ನು ಕ್ಷಣಕಾಲದಲ್ಲಿಯೇ ಮರೆಸಿ ಮನಸ್ಸಿಗೆ ಆಹ್ಲಾದಕರವನ್ನುಂಟು ಮಾಡುತ್ತದೆ.ಆದರೆ ರಸ್ತೆಯ ಅವ್ಯವಸ್ಥೆಯನ್ನು ನೋಡಿದರೆ ಮನೆಯನ್ನು ಸುರಕ್ಷಿತವಾಗಿ ಸೇರುವ ನಂಬಿಗೆಯಿಲ್ಲದಂತಾಗಿದೆ ಎಂದು ಹಂಸಭಾವಿ (ಹಾವೇರಿ ಜಿಲ್ಲೆ)ಯಿಂದ ಬಂದ ಪ್ರವಾಸಿಗರು ಬಸವರಾಜ ಇತರರು ಹೇಳಿದರು.
ಜಲಪಾತಕ್ಕಿಂತಲೂ ಅರ್ಧ ಕಿ.ಮೀ ದೂರದಲ್ಲಿ ಸ್ಥಳೀಯ ಗ್ರಾಮ ಸಮಿತಿ ಪ್ರವಾಸಿಗರ ಬಳಿ ಪ್ರವೇಶ ಧನವನ್ನು ಪಡೆದುಕೊಳ್ಳುತ್ತಿದೆ.ದ್ವೀಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಪ್ರತ್ಯೇಕ ಪ್ರವೇಶ ಧನವನ್ನು ಆಕರಿಸಲಾಗುತ್ತಿದೆ.ಆದರೆ ಪ್ರವೇಶ ಧನವನ್ನು ವಸೂಲಿ ಮಾಡುವಲ್ಲಿ ತೋರುವ ಉತ್ಸಾಹ ಜಲಪಾತ ಪ್ರದೇಶದ ನಿರ್ವಹಣೆ ಕಡೆಗೆ ತೋರುತ್ತಿಲ್ಲ ಎನ್ನುವ ಆರೋಪ ಪ್ರವಾಸಿಗರದ್ದಾಗಿದೆ.

loading...

LEAVE A REPLY

Please enter your comment!
Please enter your name here