ಪ್ರವಾಸಿಗರ ಕಣ್ಮನ ತಣಿಸುವ ಗೋಕಾಕ ಜಲಪಾತ…

0
58
loading...

ಅಡಿವೇಶ ಮುಧೋಳ
ಬೆಟಗೇರಿ: ಕರದಂಟೂರು ಗೋಕಾಕ ನಗರದಿಂದ ಸಮೀಪದಲ್ಲಿರುವ ಸುಪ್ರಸಿದ್ಧ ಗೋಕಾಕ ಜಲಪಾತ ಈಗ ಮೈದುಂಬಿ ಧುಮುಕುತ್ತಿದೆ. ಈ ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯಗಳ ಸಾವಿರಾರು ಜನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ.
ಇಲ್ಲಿಯ ಜನರ ಜೀವನದಿ ಘಟಪ್ರಭೆ ನದಿಯ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುವದರಿಂದ ಗೋಕಾಕ ಜಲಪಾತ ಈಗ ನೋಡುಗರ ಕಣ್ಮಣಿ. ಘಟಪ್ರಭೆ ಭೋರ್ಗರೆಯುತ್ತಾ 180 ಮೀಟರ್ ಆಳಕ್ಕೆ ಧುಮುಕುವ ಮನಮೋಹಕ, ರುದ್ರರಮಣೀಯ ದೃಶ್ಯಕ್ಕೆ ಮನಸೋಲದವರೇ ಇಲ್ಲ.
ಈ ಜಲಪಾತ ಉಳಿದ ಫಾಲ್ಸಗಳಿಗಿಂತ ತುಂಬಾ ಭಿನ್ನವಾಗಿದೆ. ಮಳೆಗಾಲದಲ್ಲಿ ಈ ಜಲಪಾತ ಆಸ್ವಾದಿಸುವದೇ ಒಂದು ಆನಂದ. ಕೆಂಪು ಮಿಶ್ರಿತ ನೀರಿನ ಕಲರವದ ಹತ್ತಿರÀಕ್ಕೆ ಹೊದಂತೆ ಹಾಲಿನಂತೆ ಕಂಗೊಳಿಸುವ ಗೋಕಾಕ ಫಾಲ್ಸ, ಕರದಂಟೂರು ಗೋಕಾಕ ನಗರದಿಂದ 7 ಕಿ,ಮೀ ಅಂತರದಲ್ಲಿದೆ.
ಕರ್ನಾಟಕ ಎರಡನೇ ಅತಿ ದೊಡ್ಡ ಈ ಜಲಪಾತವನ್ನು ಬ್ರಿಟಿಷರು ಕೆನಡಾದ ನಯಾಗರಕ್ಕೆ ಹೊಲಿಸಿದ್ದಾರೆ. ಇದನ್ನು ಭಾರತದ ನಯಾಗರ ಎಂದಿದ್ದಾರೆ. ಪ್ರವಾಸಿಗರು ಈ ಜಲಪಾತವನ್ನು ಎಲ್ಲ ಬದಿಯಿಂದಲೂ ವಿಕ್ಷೀಸಬಹುದು. ಪ್ರಕೃತಿ ಸೌಂದರ್ಯದ ಜೊತೆಗೆ ಜಲಪಾತದ ಸೌಂದರ್ಯ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸಿದೆ.
ವಿದ್ಯುತ್ ಉತ್ಪಾದನೆ: ಗೋಕಾಕ ಜಲಪಾತ ಹಾಗೂ ಗೋಕಾಕ ಮಿಲ್ಲ್‍ಗೆ ತನ್ನದೇ ಆದ ವೈಶಿಷ್ಟ್ಯತೆಯ ಜೊತೆಗೆ ಐತಿಹಾಸಿಕ ದಾಖಲೆಯು ಸಹ ಇದೆ. ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ತುಂಬಿ ಹರಿಯುವ ಈ ಜಲಪಾತದ ಕೆಳಗೆ ವಿದ್ಯುತ್ ಉತ್ಪಾದನೆ ಘಟಕವಿದೆ. ಈ ವಿದ್ಯುತ್ ಘಟಕವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ 1885ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದ ಇತಿಹಾಸವಿದೆ. ಏಷ್ಯಾಖಂಡದಲ್ಲೆ ಪ್ರಪ್ರಥಮ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಎಂದು ಉಹಿಸಲಾಗಿದೆ. ಈ ಜಲಪಾತದ ವಿದ್ಯುತ್‍ನ್ನು ಗೋಕಾಕ ಫಾಲ್ಸ್ ಟೇಕ್ಸಟೈಲ್ ಮಿಲ್ಲ, ಹೆಸ್ಕಾಂ ಸೇರಿದಂತೆ ಸ್ಥಳೀಯ ಫಾಲ್ಸನಲ್ಲಿ ನೆಲೆಸಿರುವ ಕಾರ್ಮಿಕರ ಮನೆಗಳಿಗೆ ವಿದ್ಯುತ್ ಸರಬರಾಜು ನೀಡಲಾಗುತ್ತದೆ.
ತೂಗು ಸೇತುವೆ: ಗೋಕಾಕ ಫಾಲ್ಸನ ಮತ್ತೊಂದು ವಿಶೇಷತೆ ಎಂದರೆ ತೂಗು ಸೇತುವೆ. ಬ್ರಿಟಿಷರ ಕಾಲದಲ್ಲಿ ಇದನ್ನು ಮರದ ಕಟ್ಟಿಗೆ (ಪಳಿಗಳು) ಮತ್ತು ಕಬ್ಬಿಣದ ಸರಳುಗಳಿಂದ ಕಟ್ಟಲಾಗಿದೆ. ಜಲಪಾತ ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆಯ ಮೇಲೆ ನಡೆದಾಡುವದೇ ಒಂದು ಅದ್ಭುತ ರೊಮಾಂಚನದ ತೂಗುಯ್ಯಾಲೆಯ ಅನುಭವ. ಘಟಪ್ರಭೆ ರಬಸದಿಂದ ಕಲ್ಲು ಸೀಳಿ ಹರಿಯುತ್ತಿರುವ ದೃಶ್ಯ ಮನಮೋಹಕ ರಸದೌತನ ನೀಡುತ್ತಿದೆ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕಾರಿಯಗಿದೆ. ರಾಜ್ಯದಲ್ಲಿಯೇ ಅತಿದೊಡ್ಡ ತೂಗು ಸೇತುವೆ. ಇಂತಹ ಅದ್ಭುತ ಅನುಭವ ನೀಡುವ ತೂಗು ಸೇತುವೆಯ ಮೋಜು ಅನುಭವಿಸದೇ ಯಾವವೊಬ್ಬ ಪ್ರವಾಸಿಗನು ಹೊಗುವದಿಲ್ಲ.
ಗೋಡಚಿನಮಲ್ಕಿ ಜಲಪಾತ: ಗೋಕಾಕ ಫಾಲ್ಸನಿಂದ ಸುಮಾರು 14 ಕಿ.ಮೀ ಅಂತರದಲ್ಲಿರುವ ಗೋಡಚಿನಮಲ್ಕಿ ಜಲಪಾತಕ್ಕೆ ತನ್ನದೇ ವೈಶಿಷ್ಟತೆ ಇದೆ. ಗೋಡಚಿನಮಲ್ಕಿ ಜಲಪಾತ ತನ್ನ ಶಾಂತ ಸ್ವಭಾವದಿಂದಲೆ ತನ್ನತ್ತ ಪ್ರವಾಸಿಗರನ್ನು ಆಕರ್ಷಿಸುತ್ತಾ, ರಮಣೀಯ ರಸದೌತನ ನೋಡುಗರಿಗೆ ನೀಡುತ್ತಿದೆ. ಮಾರ್ಕಂಡೇಯ ನದಿಯ ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುವ ನದಿ. ಜೂನ್ ತಿಂಗಳಿನಿಂದ ಫೇಬ್ರುವರಿ ವರೆಗೆ ಮಾತ್ರ ಹರಿಯುತ್ತದೆ. ಈ ನದಿ ದೊಡ್ಡ ಜಲಪಾತಕ್ಕೆ ಜೋತೆಯಾಗದಿದ್ದರು ಸಹ ಇಲ್ಲಿಯ ವಿವಿಧ ಸ್ಥಳಗಳಲ್ಲಿ ನೈಸರ್ಗಿಕವಾಗಿ ಹರಿದು ಸುಂದರ ಜಲಪಾತ ಸೃಷ್ಟಿಸಿದೆ.

loading...

LEAVE A REPLY

Please enter your comment!
Please enter your name here