ಭ್ರಷ್ಟಾಚಾರ ನಿರ್ಮೂಲನೆ

0
125
loading...

ಹುಬ್ಬಳ್ಳಿ : ಸಂವಿಧಾನಿಕ ಬದುಕಿನ ಪ್ರೇಮವನ್ನು ಸಾಮಾಜಿಕದಲ್ಲಿ ಬೆಳೆಸದೇ, ಕೇವಲ ಕಾನೂನೊಂದರಿಂದ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯವಿಲ್ಲ. ಹಾಗೆಂದು ಕಾನೂನು ಬೇಡವೆಂದಲ್ಲ, ಕಾನೂನಿನ ಭಯ ಬೇಕೇ ಬೇಕು. ಆದರೆ, ಅದಕ್ಕಿಂತಲೂ ಅಧಿಕವಾಗಿ ಸಂವಿಧಾನ ಬದ್ಧ ಬದುಕು ಬದುಕುವ ಸಾತ್ವಿಕ ಪ್ರೇರಣೆ, ನಮ್ಮಲ್ಲಿ ಇರಲೇ ಬೇಕು. ಘಟನೆ ಘಟಿಸಿದ ಮೇಲೆಯೇ ಕಾನೂನು ಕೆಲಸ ಮಾಡುವುದು. ಅದಕ್ಕೂ ಮೊದಲು ಕೆಲಸ ಮಾಡುವುದು-ಮನಸ್ಸು. ಇಂದಿಗೂ ಬಹಳಷ್ಟು ಜನ ಒಳ್ಳೆಯವರು ಏಕಿದ್ದಾರೆ ಎಂದರೆ, ಅವರೆಲ್ಲರೂ ಮನಸ್ಸಿಗೆ ಅಂಜುವವರೆ ವಿನಹ-ಕಾನೂನಿಗಲ್ಲ. ನೀತಿ ನಿಯಮಗಳ ಪಟ್ಟು, ಕಾನೂನಿಗಿಂತ ಹೆಚ್ಚು ಗಟ್ಟಿ. ಮನಸ್ಸಿನ ಪರಿವರ್ತನೆಯ ಪ್ರಯತ್ನ, ಆಧ್ಯತೆಯ ಮೇಲೆ ನಡೆಯಬೇಕು. ಅತಿರೇಕಕ್ಕೇರಿದ ಸಾಮಾಜಿಕ ಭ್ರಷ್ಟ ಭಾವನೆಗಳನ್ನು ಸುಧಾರಿಸಲು, ಉದ್ಧಟತನವನ್ನು ಹೋಗಲಾಡಿಸಲು, ಎಷ್ಟೊಂದು ಪಾಠ-ಪ್ರವಚನಗಳು ಆದವು, ಎಷ್ಟೊಂದು ನಾಟಕಗಳಾದವು, ಎಷ್ಟೊಂದು ಸಿನೆಮಾಗಳಾದವು, ಆದರೆ, ಅವುಗಳಲ್ಲಿನ ಕೇಡನ್ನು ಆರಿಸಿಕೊಂಡು ಕೇಡಿಗಳಾದ್ದೇವೆಯೇ ಹೊರತು ಸಾಧನೆಯನ್ನು ಆರಿಸಿಕೊಳ್ಳಲಿಲ್ಲ-ನಾಯಕರಾಗಲಿಲ್ಲ. ಇಂಥ ಆಯ್ಕೆಗಳನ್ನು, ಕೇವಲ ಜನಸಾಮಾನ್ಯರು ಮಾತ್ರ ಆರಿಸಿಕೊಂಡಿದ್ದರೆ ಸಮಾಜ ಇಷ್ಟೊಂದು ಹಾಳಾಗುತ್ತಿರಲಿಲ್ಲ. ನಮ್ಮನ್ನಾಳುವ ನಾಯಕರೂ ಕೇಡನ್ನೇ ಆರಿಸಿಕೊಂಡರು. ಅದುವೇ ಸಾರ್ವತ್ರಿಕ ಮತಿ ಭ್ರಷ್ಟತೆಯ ಮೂಲ. ನೀರು ಎತ್ತರದಿಂದ ಕೆಳಕ್ಕೆ ಹರಿಯುತ್ತದೆ. ನೀರಿನ ಟ್ಯಾಂಕೇ ರಾಡಿಯಾದರೆ? ಸಮಾಜದಲ್ಲಿ ದೊಡ್ಡವರ ಅನುಕರಣೆಯೇ ಯಾವಾಗಲೂ ನಡೆಯುತ್ತದೆ. ಡಾ|| ಶಿವರಾಮ ಕಾರಂತರು, ‘ವಿಧಾನ ಸೌಧದ ಕಂಬಗಳಿಗೂ ಕೈಗಳಿವೆ’ ಎಂದು 1965ರಲ್ಲೇ ಹೇಳಿದ್ದರು. ನೋಡಿ: ಸದನದ ಕಲಾಪಗಳ ನೇರ ಪ್ರಸಾರದಿಂದ ಶಾಸಕರ ವರ್ತನೆಯಲ್ಲಿ ಸಭ್ಯತೆಯ ಸುಧಾರಣೆ ಆಗುತ್ತದೆ ಎಂದೆನಿಸಿ, ಆ ವ್ಯವಸ್ತೆ ಜಾರಿಗೆ ಬಂತು. ಆದರೆ ಆದದ್ದೇನು? ಮೈಕ್ ಉಳಿಯಲಿಲ್ಲ, ಟೇಬಲ್ ಉಳಿಯಲಿಲ್ಲ, ಖುರ್ಚಿ ಉಳಿಯಲಿಲ್ಲ, ಕೊನೆಗೆ ಕಾಲೊಳಗಿನ ಚೆಪ್ಪಲಿಯೂ ಉಳಿಯಲಿಲ್ಲ-ತೂರಾಡುವುದಕ್ಕೆ. ಗುಂಡಾಗರ್ದಿಯೂ ಶುರುವಾಯ್ತು. ಮಾಡುವುದೇನು? ನಮ್ಮ ನಾಯಕರ ಪ್ರಗತಿ ಹೀಗೆ ಸಾಗಿದೆ! ಒಂದು ಕಾಲದಲ್ಲಿ ನೀತಿಗೂ-ನಡುವಳಿಕೆಗೂ ಅಷ್ಟೊಂದು ಅಂತರ ಇರಲಿಲ್ಲ. ಆಗ ಜೀವಂತವಾಗಿದ್ದ ಸೂಕ್ಷ್ಮ ಪ್ರಜ್ಞೆ, ಇಂದು ಕೋಮಾ ಸೇರಿದೆ. ಇನ್ನೊಬ್ಬರ ಆಸ್ತಿ ಅಪಹರಿಸಿ ಜೀವಿಸಿದರೆ ಮಾತ್ರ ಬುದ್ಧಿವಂತಿಕೆಗೆ ಎಂಬ ವಿಕೃತಿಗೆ ನಾವು ಒಗ್ಗಿಕೊಂಡಿದ್ದೇವೆ. ನಾವು ಸಂಪನ್ನರಲ್ಲ ಎನ್ನುವುದು ಜಗತ್ತಿಗೇ ಗೊತ್ತಿದೆ. ವಿಕಾರಗಳ ಮಧ್ಯದಲ್ಲಿ ಹೂತುಕೊಂಡಿದ್ದರೂ ಸದ್ಗುಣ ಸಂಪನ್ನ ಎನ್ನಿಸಿಕೊಳ್ಳುವ ಹುಚ್ಚು ಆಶಾ ಭಾವ ಬೇರೆ ನಮ್ಮದು. ಒಂದು ಪ್ರಶ್ನೆ ಕೇಳುತ್ತೇನೆ. ಕೋಟ್ಯಾಂತರ ರೂಪಾಯಿಗಳ ಆಸ್ತಿ, ಈ ನಾಯಕರಿಗೆ, ಅಧಿಕಾರಿಗಳಿಗೆ ಎಲ್ಲಿಂದ ಬಂತು? ಆಕಾಶದಿಂದ ಇಳಿದು ಬಂದಿಲ್ಲ. ಆರೋಪ ಮಾಡಿದವರಿಗೆ, ಸಾಬೀತು ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅಪರಾಧಿ ಸಾರ್ವಜನಿಕರ ಹಣ ದೋಚುತ್ತಿದ್ದಾನೆ-ಮೆರೆಯುತ್ತಿದ್ದಾನೆ ಇದು ನಮ್ಮನ್ನು ಆಳುವವರು ಸಾಧಿಸಿದ ಸಾರ್ವತ್ರಿಕ ಪ್ರಗತಿ. ದೋಚುವುದಕ್ಕಾಗಿಯೇ ಅಧಿಕಾರ ಎಂಬುದು ಸಾಂಕ್ರಾಮಿಕ ರೋಗವಾಗಿ ಫಸರಿಸಿದೆ.
ಅಧಿಕಾರಿಗಳು ವರ್ಗಾವಣೆಯ ಭಯದಿಂದ ಶಾಸಕರಿಗೆ, ಕಪ್ಪ ಸಲ್ಲಿಸುವುದು ಪ್ರಾರಂಭವಾಯಿತು. ವರ್ಗಾವಣೆಯ ಭಯ ಹುಟ್ಟಿಸಿದರೆ ಕಪ್ಪ ಸಿಗುತ್ತದೆಂಬುದ ತಿಳಿದ ಜನಪ್ರತಿನಿಧಿ, ಬೇಕೆಂದೇ ಆಟವಾಡತೊಡಗಿದ. ಆತನ ಆಟವೇ ಭಷ್ಟಾಚಾರ ಉಲ್ಬಣಿಸಲು ಕಾರಣವಾಯಿತು. ಶಾಸನಗಳಲ್ಲಿನ ತೊಂದರೆಗಳನ್ನು ಸರಿಪಡಿಸಿ, ಕಾರ್ಯಾಂಗವನ್ನು ಸರಿಯಾಗಿ ಮುನ್ನಡೆಸಲೀ ಎಂದು ಜನಪ್ರತಿನಿಧಿ ಆರಿಸಿ ಕಳುಹಿಸಿದರೆ, ಹಪ್ತಾ ವಸೂಲಿ ಕಾರ್ಯ ವೈಖರಿಯನ್ನವರು ರಾಜಕೀಯದಲ್ಲಿ ರೂಢಿಸಿದರು. ಯಥಾ ರಾಜ ತಥಾ ಪ್ರಜಾ ಎನ್ನುವಂತೆ ಆ ವ್ಯಾದಿ,ü ಸಾರ್ವಜನಿಕರ ಮನಸ್ಸನ್ನೂ ಆಕ್ರಮಿಸಿ ಬಿಟ್ಟಿದೆ. ಬಿಡಿ, ಮೂಲ ವಿಷಯಕ್ಕೆ ಬರೋಣ. ಭ್ರಷ್ಟಾಚಾರ, ನಿರ್ಮೂಲನೆಗೆ, ಅಣ್ಣಾ ಹಜಾರೆಯವರಂಥವರು ಕೈಗೊಂಡ ಹೋರಾಟದಲ್ಲಿ ಪಾಲ್ಗೊಂಡು ಕೇವಲ ಜೈಕಾರ ಹಾಕಿದರೆ ಯಾವ ಪ್ರಯೋಜನೆಯೂ ಇಲ್ಲ. ಅವರ ಮನೋಗತ ಉದ್ದೇಶ ಪಾಲನೆಯಾಗಬೇಕು. ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದೇ ಇರುವ ವ್ಯಕ್ತಿಗತ ಗಟ್ಟಿತನ ಬೆಳೆಸಿಕೊಳ್ಳ ಬೇಕು. ದೇಶದ ಜನರೆಲ್ಲ ಭ್ರಷ್ಟರಾಗದಂತೆ ವ್ಯವಹರಿಸಬೇಕು. ಭ್ರಷ್ಟಾಚಾರ ವ್ಯಾಪಕವಾಗಿ ಬೆಳೆಯಲು ಕೇವಲ ಅಧಿಕಾರಿಗಳು ಮಾತ್ರ ಕಾರಣರಲ್ಲ. ಜನರ ಅಪ್ರಾಮಾಣಿತೆಯೂ ಪ್ರಮುಖ ಕಾರಣ. ಸ್ವಯಂ ಪ್ರಾಮಾಣಿಕರಾಗದೆ ಭ್ರಷ್ಟಾಚಾರ ತಡೆಗಟ್ಟಲು ಖಂಡಿತಾ ಸಾಧ್ಯವಿಲ್ಲ. ಜನರು ಅಧಿಕಾರಿಗಳಿಗೆ ಹಣ ಕೊಡಬಾರದು. ಕೊಡುವಂಥ ಅಕ್ರಮ ಕೆಲಸಗಳಿಗೆ ಕೈ ಹಾಕದಿರುವ ನಡತೆಯೇ, ಸಾಧಿಸಬೇಕಾದ ಭ್ರಷ್ಟಾಚಾರ ನಿರ್ಮೂಲನೆಯ ಮೂಲಕ್ಕೆ ಮಹತ್ವ ಕೊಟ್ಟರೆ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯ. ಅಂದರೆ, ಪ್ರಾಮಾಣಿಕತೆ ಬೆಳೆಸದೆ ಭ್ರಷ್ಟಾಚಾರ ನಿವಾರಿಸಲು ಸಾಧ್ಯವಿಲ್ಲ.
ನಿರ್ಮೂಲನೆಯ ಕಳಕಳಿ ಜನರಲ್ಲಿದೆ. ಕೇವಲ ಕಳಕಳಿಯಿಂದ ಸಾಧಿಸಲು ಸಾಧ್ಯವಿಲ್ಲ. ದೂರು ದಾಖಲಿಸಬೇಕು. ಕೇವಲ ಸಾಮೋಹಿಕ ಸತ್ಯಾಗ್ರಹ ಮಾತ್ರದಿಂದ ಸಾಧಿಸುವ ವಿದ್ಯಮಾನವಲ್ಲ ಇದು. ಲಂಚ ಕೇಳುವ ಅಧಿಕಾರಿಯ ವಿರುದ್ಧ ಲಿಖಿತ ದೂರು ದಾಖಲಿಸುವ ದಾಷ್ಟ್ರ್ಯದಿಂದ ಸಾಧ್ಯವಾಗುವ ವಿದ್ಯಮಾನ! ಇಂಥ ಸಣ್ಣ ಆಂದೋಲನಕ್ಕೆ ಪ್ರತಿಯೊಬ್ಬರೂ ಮುಂದಾಗುವ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯಬೇಕು. ನಮ್ಮ ಪ್ರಯತ್ನವಿಲ್ಲದೇ ನ್ಯಾಯ, ನೀತಿ, ಧರ್ಮ ಯಾವುದೂ ತನ್ನಷ್ಟಕ್ಕೆ ತಾನೇ ಬದುಕಿ ಉಳಿಯುವುದಿಲ್ಲ. ಇಂಥ ಪ್ರಯತ್ನಕ್ಕೆ ಮುಂದಾಗದೇ ಕೇವಲ ಕಳಕಳಿಯಿಂದ ಭ್ರಷ್ಟಾಚಾರ ನಿರ್ಮೂಲನೆ ಕನಸಿನಲ್ಲೂ ಸಾಧ್ಯವಿಲ್ಲ.
ಪ್ರತಿಭಟನೆಯ ಕ್ರಮ: ಯಾವ ಕಛೇರಿಯಲ್ಲಿ ನಮ್ಮ ಕೆಲಸ ಮಾಡಿಸಿಕೊಳ್ಳಲು ಹೋಗುತ್ತೇವೆಯೋ: ಅಲ್ಲಿನ ಅಧಿಕಾರಿ ನಮ್ಮ ಪತ್ರಗಳನ್ನು ಒಪ್ಪಿಸಿಕೊಳ್ಳುವ ಮೊದಲೇ, ನಿಮ್ಮ ಫೀಜು ಎಷ್ಟೆಂದು ಹೇಳಿ ಸಾಹೇಬರೆ, ಎಂದು ಲಂಚ ಕೊಡಲು ನಮ್ಮ ಕಿಸೆಗೆ ಕೈ ಹಾಕುತ್ತೇವೆ. ಅದರ ಬದಲು: ನಾನು ಲಂಚ ಕೊಡುವವನಲ್ಲ, ನೀನು ಕೆಲಸ ಮಾಡಿಕೊಡದಿದ್ದರೆ ನಿನ್ನ ಮೇಲೆ ಲಿಖಿತ ದೂರು ಕೊಡುತ್ತೇನೆಂದು ಧೈರ್ಯವಾಗಿ ಹೇಳಬೇಕು. ಆಗ ಆ ಅಧಿಕಾರಿಗೆ ಭಯವಾಗುತ್ತದೆ. ಕೆಲಸ ಮಾಡಿಕೊಡದೆ ಇರಲು ಅವನಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ, ಲಿಖತ ದೂರು ಬಂದಾಗ ಮೇಲಾಧಿಕಾರಿ ವಿಚಾರಣೆ ಮಾಡಲೇ ಬೇಕಾಗುತ್ತದೆ. ಅದು ಅನಿವಾರ್ಯ. ಲಂಚ ಕೇಳುವವನಿಗೂ ಅದು ಗೊತ್ತು-ಹೆದರುತ್ತಾನೆ. ತಣ್ಣಗೆ ಕೆಲಸ ಮಾಡಿಕೊಡುತ್ತಾನೆ. ನಾವು ಲಿಖಿತ ರೂಪದ ಪ್ರತಿಭಟನೆಗೆ ತೊಡಗುವ ಮೂಲಕ ಕಾನೂನನ್ನು ಪಾಲಿಸಬೇಕು. ಆ ಮೂಲಕ ಸಂವಿಧಾನವನ್ನು ಎತ್ತಿ ಹಿಡಿಯಬೇಕು. ಇಲ್ಲದಿದ್ದರೆ, ಕಾನೂನಿಗೆ ಅಸ್ಥಿತ್ವವಿಲ್ಲ. ಭ್ರಷ್ಟಾಚಾರ ನಿರಂತರ ಮೆರೆದಾಡುತ್ತಲೇ ಇರುತ್ತದೆ.

loading...

LEAVE A REPLY

Please enter your comment!
Please enter your name here