ಶೀಘ್ರದಲ್ಲೇ 30 ಪೊಲೀಸ್ ಠಾಣೆಗಳ ಕಾರ್ಯಾರಂಭ: ಓಂ ಪ್ರಕಾಶ್

0
12
loading...

ಖಾನಾಪುರ 30: ರಾಜ್ಯದಲ್ಲಿ ಹಲವು ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲು ಇಲಾಖೆ ಮುಂದಾಗಿದ್ದು, ಶೀಘ್ರದಲ್ಲೇ 6 ಮಹಿಳಾ ಠಾಣೆಗಳನ್ನು ಒಳಗೊಂಡಂತೆ 30 ಪೊಲೀಸ್ ಠಾಣೆಗಳು ಕಾರ್ಯಾರಂಭಗೊಳ್ಳಲಿವೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ ಮಾಹಿತಿ ನೀಡಿದರು.
ಪಟ್ಟಣದ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ಶನಿವಾರ ಜರುಗಿದ ಸಿವಿಲ್ ಪೊಲೀಸ್ ಕಾನ್ಸ್‍ಸ್ಟೇಬಲ್‍ಗಳ 21ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಠಾಣೆಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಆಡಳಿತ್ಮಾಕ ಮಂಜೂರಾತಿ ಪಡೆದ ಬಳಿಕ ಬೆಳಗಾವಿ ಜಿಲ್ಲೆಯಲ್ಲೂ ವಿವಿಧೆಡೆ ಸೇರಿದಂತೆ ಅಗತ್ಯವಿದ್ದ ಕಡೆ ಸುಸಜ್ಜಿತ ಸಿಬ್ಬಂದಿಯೊಂದಿಗೆ ಕೆಲಸ ನಿರ್ವಹಿಸಲು ಪ್ರಾರಂಭಗೊಳ್ಳಲಿವೆ. ಹೊಸದಾಗಿ ಕಮೀಶನರೇಟ್ ಮಾನ್ಯತೆ ಪಡೆದ ಬೆಳಗಾವಿ ನಗರಕ್ಕೆ ಶೀಘ್ರದಲ್ಲೇ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೀಡಲಾಗುತ್ತದೆ ಮತ್ತು ಪೊಲೀಸರಿಗೆ ಕೆಲಸದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ದಿನಕ್ಕೆ ಮೂರು ಶಿಫ್ಟ್ ನಂತೆ ಶಿಫ್ಟ್ ನಲ್ಲಿ ಕೆಲಸ ನಿರ್ವಹಿಸಲು ಮೂರು ಹಂತಗಳಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರು, ಹುಬ್ಬಳ್ಳಿ ಧಾರವಾಡ ಮತ್ತು ಬೆಳಗಾವಿ ಕಮಿಶನರೇಟ್ ವ್ಯಾಪ್ತಿಯ ಪೊಲೀಸರು ದೈನಂದಿನ ಶಿಫ್ಟ್‍ಗಳಲ್ಲಿ ಕೆಲಸ ನಿರ್ವಹಿಸಲಿದ್ದು, ನಂತರ ಇದನ್ನು ರಾಜ್ಯಾದ್ಯಂತ ಎಲ್ಲ ಎಸ್.ಪಿ ಕಚೇರಿಗಳಿಗೆ ವಿಸ್ತರಿಸಲಾಗುವುದು ಎಂದು ಹೇಳಿದರು.
ಕಳೆದ ಗುರುವಾರ ಗದಗ ಜಿಲ್ಲೆಯ ನರಗುಂದ, ನವಲಗುಂದ ಮತ್ತಿತರ ಕಡೆ ಹೋರಾಟ ಸಂದರ್ಭದಲ್ಲಿ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಧಕ್ಕೆಯುಂಟು ಮಾಡಿದ ಘಟನೆಗೆ ಸಂಬಂಧಿಸಿದಂತೆ ಉದ್ರಿಕ್ತ ಪ್ರತಿಭಟನಾಕಾರರ ಗುಂಪನ್ನು ಚದುರಿಸುವಾಗ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾದವರ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಬಂಧನಕ್ಕೊಳಗಾದ ಅಮಾಯಕರನ್ನು, ಮುಗ್ಧರನ್ನು ಮತ್ತು 65 ವರ್ಷ ಮೀರಿದ ಹಿರಿಯ ನಾಗರಿಕರನ್ನು ತನಿಖೆಯ ಬಳಿಕ ಬಿಡುಗಡೆಗೊಳಿಸಲು ತನಿಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಮಹಾದಾಯಿ ನ್ಯಾಯಾಧೀಕರಣದ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದ್ದು, ಅದಕ್ಕೆ ಶಾಂತಿಯುತವಾಗಿ ಪ್ರತಿಭಟನೆ ಕೈಗೊಳ್ಳುವುದನ್ನು ಬಿಟ್ಟು ಸರ್ಕಾರಿ ಕಚೇರಿಗಳಿಗೆ ತೆರಳಿ ದಾಂಧಲೆ ಎಬ್ಬಿಸಿದ ಮತ್ತು ಸರ್ಕಾರಿ ವಾಹನಗಳಿಗೆ ಹಾನಿ ಉಂಟು ಮಾಡಿದ ಕಿಡಿಗೇಡಿಗಳ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸವನ್ನು ಇಲಾಖೆ ಕೈಗೊಂಡಿದೆ. ಸಾವಿರಾರು ಜನರು ಪ್ರತಿಭಟನೆಯ ಸಂದರ್ಭದಲ್ಲಿ ಹಾಜರಿದ್ದು, ಅದರ ಪೈಕಿ ಕೆಲವರು ಮಾತ್ರ ಕಾನೂನನ್ನು ಕೈಗೆ ತೆಗೆದುಕೊಂಡು ದಾಂಧಲೆ ಎಬ್ಬಿಸಿರುವ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ತಪ್ಪಿತಸ್ಥರನ್ನು ಬಂಧಿಸುವ ಕಾರ್ಯವನ್ನು ಕೈಗೊಂಡಿದೆ. ಈಗಾಗಲೇ ಗಲಭೆಕೋರರ ಬಗ್ಗೆ ಮಾಹಿತಿ ಕಲೆಹಾಕಲು ಅಧಿಕಾರಗಳನ್ನು ನೇಮಿಸಿದ್ದು, ಘಟನೆ ಮರುಕಳಿಸದಂತೆ ನರಗುಂದ, ನವಲಗುಂದ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ ಎಂದರು.

loading...

LEAVE A REPLY

Please enter your comment!
Please enter your name here