ಗಣೇಶ ಜೇಮಿನಿ ಸರ್ಕಸ್: ಕೇವಲ ಏಳು ದಿನಗಳ ಪ್ರದರ್ಶನ ಮಾತ್ರ

0
25
loading...

ಲಕ್ಷ್ಮೀ ಗಾಣಿಗೇರ
ಬೆಳಗಾವಿ 8: ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಪ್ರದರ್ಶನಗೊಳ್ಳುತ್ತಿರುವ ಗಣೇಶ ಜೇಮಿನಿ ಸರ್ಕಸ್ ಜನದಟ್ಟನೆಯಿಂದ ಕೂಡಿದ್ದು, ಇನ್ನು ಕೇವಲ ಏಳು ದಿನಗಳ ಕಾಲ ಪ್ರದರ್ಶನ ಕಾಣಲಿದೆ. ಸರ್ಕಸ್ ನೇತೃತ್ವ ಗಣೇಶ ಹೊತ್ತಿದ್ದಾನೆ. ಸಿಂಹದ ಮೇಲೆ ಕುಳಿತ ಭಂಗಿ ಇಲ್ಲಿನದ್ದು. ಸರ್ಕಸ್‍ನಲ್ಲಿ ಜೋಕರನ ಪಾತ್ರ ಆಕರ್ಷಕವಾಗಿದೆ. ಒಮ್ಮೆಯಾದರೂ ನೋಡಲೇಬೆಕಾದ ಆಕರ್ಷಕ ಸರ್ಕಸ್ ಪ್ರಕಾಶ ಚಿತ್ರ ಮಂದಿರದ ಹತ್ತಿರ ಎಸ್‍ಪಿಎಂ ರಸ್ತೆಯಲ್ಲಿ ಬೀಡು ಬಿಟ್ಟಿದೆ. ಗಣೇಶ ಭಕ್ತರು ಉಚಿತವಾಗಿ ಈ ಸರ್ಕಸ್ ನೋಡಬಹುದು.
ಬೆಳಗಾವಿಯ ಇನ್ನೊಂದು ವಿಶೇಷವೆಂದರೆ, ಭಾರತದ ಮೂಲ ಕ್ರೀಡೆಯಾದ ಕಬ್ಬಡ್ಡಿ ಪಂದ್ಯ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದೆ. ಬರುವ ಏಳು ದಿನಗಳಕಾಲ ಮುಂದುವರೆಯಲಿರುವ ಕಬ್ಬಡ್ಡಿ ಪಂದ್ಯದ ಉಸ್ತುವಾರಿಯನ್ನು ಶ್ರೀ ಗಣೇಶ ಹೊತ್ತಿದ್ದಾನೆ. ಈ ಪಂದ್ಯ ಮಹಾದ್ವಾರ ರಸ್ತೆಯ ಮೂರನೆ ತಿರುವಿನ ಆಕರ್ಷಕ ನಿಸರ್ಗದ ಮಂಟಪದಲ್ಲಿ ನಡೆಯುತ್ತಿದೆ. ಇಲ್ಲಿನ ಆಟಗಾರರೆಲ್ಲ ಮೂಷಕರು. ತಮ್ಮದೆ ಆದ ತಂಡದ ಗೆಲುವಿಗಾಗಿ ಸುಂದರ ಗಣೇಶನೊಂದಿಗೆ ಕ್ರೀಡೆಯಲ್ಲಿ ಮಗ್ನವಾಗಿವೆ.
ಗಣೇಶ ಭಕ್ತರಿಗಾಗಿ ಕನ್ನಡಮ್ಮ ಪತ್ರಿಕೆ ಪ್ರತಿದಿನ ನಗರ ಪರಿಸರದ ಗಣೇಶ ಮಂಡಳಗಳ ಸುಂದರ ಗಣೇಶ ಮೂರ್ತಿಗಳನ್ನು ಪರಿಚಯಿಸಲಿದೆ. ನಗರ ವ್ಯಾಪ್ತಿಯಲ್ಲಿ 350 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪ್ರತಿಷ್ಠಪಿಸಲಾಗಿದೆ. ತಾನಾಜಿಗಲ್ಲಿಯ ಗಣೇಶ ಮಂಡಳ ಉಗ್ರರೂಪಿ, ರಕ್ಕಸ ಸಂಹಾರಕ್ಕೆ ಸನ್ನದ್ಧಗೊಂಡ ಆಕರ್ಷಕ ಗಣೇಶನನ್ನು
ಮಂಟಪದಲ್ಲಿ ಪ್ರತಿಷ್ಠಾಪಿಸಿದೆ. ಕಪಿಲೇಶ್ವರ ದೇವಸ್ಥಾನದ ಹತ್ತಿರ ಸೂರ್ಯಕಾಂತಿ ಹೂವಿನಲ್ಲಿ ತನ್ನ ಬಲಗಾಲನ್ನಿಟ್ಟು ನಡಿಗೆಯಲ್ಲಿರುವ ಕೋಮಲಮಯ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಮಹಾದ್ವಾರ ರಸ್ತೆಯ ಎರಡನೆ ತಿರುವಿನಲ್ಲಿ ಆಡಂಬರವಿಲ್ಲದ ಮಂಟಪದಲ್ಲಿ ಸಿಂಹಾಸನಾರೂಢ ಸುಂದರ ಗಣೇಶ ಆಕರ್ಷಕ ಭಂಗಿಯಲ್ಲಿ ಆಸೀನನಾಗಿದ್ದಾನೆ.
ಅಲ್ಲದೆ ಸಂಭಾಜಿಗಲ್ಲಿಯ ಸುಂದರ ಶ್ರೀ ಗಣೇಶ ಮೂರ್ತಿ ಬೃಹದ್ದಾಕಾರವಾಗಿದ್ದು, ಮೂರ್ತಿಕಾರ ಬಹಳೇ ಸುಂದರವಾಗಿ ತನ್ನ ಕಲೆಯನ್ನೆಲ್ಲ ಮೂರ್ತಿಯಲ್ಲಿ ಅಡಗಿಸಿಟ್ಟಿದ್ದಾನೆ. ಈ ಬಾರಿಯ ಬೆಳಗಾವಿ ಗಣೇಶ ಮೂರ್ತಿಗಳು, ಮಂಟಪಗಳು ಬಲು ಆಕರ್ಷಕವಾಗಿವೆ. ಗುರುವಾರ ನಗರ ಹಾಗೂ ಸುತ್ತಲಿನ ಹಳ್ಳಿಗಳ ಗಣಭಕ್ತರು ಗಣೇಶನ ವೀಕ್ಷಣೆಯಲ್ಲಿ ನಗರದಲ್ಲಿ ಹಬ್ಬದ ದಟ್ಟನೆಗೆ ಮೆರಗು ತಂದಿದ್ದರು. ಶುಕ್ರವಾರ ಇನ್ನಷ್ಟು ಗಣೇಶ ದರ್ಶನ ನಿಮ್ಮದಾಗಲಿದೆ.

loading...

LEAVE A REPLY

Please enter your comment!
Please enter your name here