ದೂಧಗಂಗಾ ಕಾರಖಾನೆಯಿಂದ ಟನ್ ಕಬ್ಬಿಗೆ ರೂ.2500

0
16
loading...

ಚಿಕ್ಕೋಡಿ 27: ಕಳೆದ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ನಿಗೆ 2300 ರೂ.ದಂತೆ ದರ ನೀಡಲಾಗಿದ್ದು, ಈಗಿನ 200 ರೂ. ಸೇರಿ 2500 ರೂ. ದರ ರೈತರಿಗೆ ಸಂದಾಯ ಮಾಡಿದಂತಾಗಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಕಾರಖಾನೆ ರೂವಾರಿ ಡಾ.ಪ್ರಭಾಕರ ಕೋರೆ ಹೇಳಿದರು.
ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಸಭಾಭವನದಲ್ಲಿ ಮಂಗಳವಾರ ಜರುಗಿದ 48ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಹಂಗಾಮಿನಲ್ಲಿ ಕಾರಖಾನೆಗೆ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್ನಿಗೆ 200 ರೂ.ಗಳಂತೆ ದಸರಾ ಮತ್ತು ದೀಪಾವಳಿ ಕೊಡುಗೆಯಾಗಿ ಅಂತಿಮ ಕಂತಿನ ಹಣ ಶೀಘ್ರದಲ್ಲಿಯೇ ರೈತರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದರು.
ಶಿಕ್ಷಣದ ಜೊತೆಗೆ ಕೃಷಿಗೂ ಆದ್ಯತೆ ನೀಡಬೇಕು. ಯುವಕರು ಬದಲಾವಣೆಯಾಗಬೇಕು. ಹೊಸ ಹೊಸ ಪದ್ಧತಿ ಅಳವಡಿಸಿಕೊಂಡು ಆಧುನಿಕ ಕೃಷಿಯಲ್ಲಿ ವೈಜ್ಞಾನಿಕತೆ ತರುವ ಮೂಲಕ ಹೆಚ್ಚಿನ ಲಾಭ ಕಂಡುಕೊಳ್ಳಬೇಕೆಂದರು. ಕಳೆದ ಹಲವಾರು ವರ್ಷಗಳಿಂದ ಮಳೆ ಕಡಿಮೆಯಾಗಿದ್ದು, ಕಾರಖಾನೆಯ ವತಿಯಿಂದ ಹನಿ ನೀರಾವರಿ ಅಳವಡಿಸಿಕೊಳ್ಳಲು ಪ್ರತಿ ಎಕರೆಗೆ 5000 ರೂ. ಸಹಾಯಧನ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆಯಬೇಕೆಂದರು.
ಕಾರಖಾನೆಯ ವತಿಯಿಂದ ಕೇರೂರ ಕಾಡಾಪೂರ ಗ್ರಾಮ ವ್ಯಾಪ್ತಿಯ 900 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲು 16.01 ಕೋಟಿ ವೆಚ್ಚದ ಏತ ನೀರಾವರಿ ಯೋಜನೆ ಹಾಗೂ ನಂದಿಕುರಳಿ ಪರಿಸರದ 1000 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಲು 15 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಟೆಂಡರ ಕರೆಯಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವದೆಂದರು.
ಕಾರಖಾನೆಯ ಆವರಣಲ್ಲಿ ಇರುವ ಕಾರ್ಮಿಕರ ವಸತಿ ನಿಲಯ ಶೀತಿಲಗೊಂಡಿವೆ. ಕಾರ್ಮಿಕರಿಗೆ ಹೊಸದಾಗಿ ವಸತಿ ನಿಲಯ ನಿರ್ಮಿಸುವ ಸಲುವಾಗಿ ಜಮೀನು ಖರೀದಿಸಿದ್ದು, 12 ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಿಸಲಾಗುವುದು ಎಂದರು.
ಸಹಕಾರಿ ತಳಹದಿಯ ಮೇಲೆ ನಡೆಯುತ್ತಿರುವ ಚಿಕ್ಕೋಡಿ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಇಡೀ ದೇಶದಲ್ಲಿಯೇ ಮೊದಲು ಸಹವಿದ್ಯುತ್ ಘಟಕ ಮತ್ತು ಡಿಸ್ಟಿಲರಿ ಉತ್ಪಾದನಾ ಘಟಕ ಆರಂಭಿಸಿದ ಕಾರಖಾನೆ ಇದಾಗಿದ್ದು, 10,000 ಟನ್ ಕಬ್ಬು ನುರಿಸುವ ಸಾಮಥ್ರ್ಯ ಹೊಂದಿರುವ ಕಾರಖಾನೆ ಇದಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಸಹಕಾರಿ ಸಕ್ಕರೆ ಉದ್ಯಮ ಸಂಕಷ್ಟದಲ್ಲಿದ್ದು, ದೇಶದಲ್ಲಿ ಹಲವಾರು ಸಹಕಾರಿ ಸಕ್ಕರೆ ಕಾರಖಾನೆಗಳು ಖಾಸಗಿ ವಲಯದ ಪಾಲಾಗಿವೆ. ಆದರೆ ಚಿಕ್ಕೋಡಿ ದೂಧಗಂಗಾ ಸಕ್ಕರೆ ಕಾರಖಾನೆಯು ಇಡೀ ದೇಶದಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವದಕ್ಕೆ ರೈತರೇ ಕಾರಣ ಎಂದ ಅವರು, ಕಾರಖಾನೆ ಕೇವಲ ರೈತರ ಕಬ್ಬಿಗೆ ಬಿಲ್ ಕೊಡುವ ಕೆಲಸ ಮಾಡದೇ ಪ್ರವಾಹ ಬಂದಾಗ ನದಿತೀರದ ರೈತರ ನೆರವಿಗೆ ಧಾವಿಸಿದ್ದು, ಪ್ರಸಕ್ತ ಬರಗಾಲ ಆವರಿಸಿಕೊಂಡಿದ್ದರಿಂದ ಬರಗಾಲ ಪೀಡಿತ ಹಳ್ಳಿಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಸುವ ಮೂಲಕ ಸಮಾಜಮುಖಿ ಕೆಲಸ ಮಾಡಿದೆ ಎಂದರು.
ಸಭೆಯ ಅಧ್ಯಕ್ಷತೆವಹಿಸಿದ್ದ ಕಾರಖಾನೆಯ ಅಧ್ಯಕ್ಷ ಅಮಿತ ಕೋರೆ, ಪ್ರಸಕ್ತ ಹಂಗಾಮಿನಲ್ಲಿ 10.10 ಲಕ್ಷ ಟನ್ ಕಬ್ಬು ನುರಿಸಿ 11.76 ಇಳುವರಿಯೊಂದಿಗೆ 11.87 ಲಕ್ಷ ಕ್ವಿಂಟಲ್ ಸಕ್ಕರೆ ಉತ್ಪಾದಿಸಿದ್ದು, ಪ್ರಸಕ್ತ ಹಂಗಾಮಿನಲ್ಲಿ ಬೀಜ, ಗೊಬ್ಬರ ಖರೀದಿಸುವ ಸಲುವಾಗಿ ಎಲ್ಲ ರೈತರಿಗೆ 10 ಸಾವಿರ ರೂ. ಮುಂಗಡ ನೀಡಲಾಗುತ್ತಿದೆ. ಅಲ್ಲದೇ ಕಾರಖಾನೆಯ ಕಾರ್ಮಿಕರಿಗೆ 6ನೇ ವೇತನ ಆಯೋಗ ಜಾರಿಗೊಳಿಸಲಾಗಿದೆ ಎಂದರು.
ಮರು ನಾಮಕರಣ
ಈಗಿರುವ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ಹೆಸರನ್ನು ಮರುನಾಮಕರಣಗೊಳಿಸಿ ಚಿದಾನಂದ ಬಸವಪ್ರಭು ಕೋರೆ ಸಹಕಾರಿ ಸಕ್ಕರೆ ಕಾರಖಾನೆ ಎಂದು ಹಾಗೂ ಸಹವಿದ್ಯುತ್ ಘಟಕಕ್ಕೆ ಅಶೋಕ ಅಮಗೌಡ ಪಾಟೀಲ ಸಹವಿದ್ಯುತ್ ಘಟಕ ಎಂದು ಮರುನಾಮಕರಣ ನಿರ್ಣಯಕ್ಕೆ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆಯಿತು. ಅಲ್ಲದೇ ಕಾರಖಾನೆಯ ಕಾಲನಿಗೆ ಶಾಂತಪ್ಪಣ್ಣ ಮಿರ್ಜಿ ಹೆಸರಿಡಲು ತೀರ್ಮಾನಿಸಲಾಯಿತು.
ನಿರ್ದೇಶಕರಾದ ಅಜೀತ ದೇಸಾಯಿ, ಸಾತಪ್ಪಾ ಸಪ್ತಸಾಗರ, ಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಕೋರೆ, ಪರಸಗೌಡ ಪಾಟೀಲ, ತಾತ್ಯಾಸಾಹೇಬ ಕಾಟೆ, ಕಲ್ಲಪ್ಪಾ ಮೈಶಾಳೆ, ಸುಭಾಷ ಕಾತ್ರಾಳೆ, ಸಂದೀಪ ಪಾಟೀಲ, ಮಹಾವೀರ ಮಿರ್ಜಿ, ಬಾಳಗೌಡ ರೆಂದಾಳೆ, ನಂದಕುಮಾರ ನಾಶಿಪುಡಿ ಮುಂತಾದವರು ಉಪಸ್ಥಿತರಿದ್ದರು.
ಕಾರಖಾನೆಯ ಉಪಾಧ್ಯಕ್ಷ ಭರತ ಬನವಣೆ ಸ್ವಾಗತಿಸಿದರು. ಕಾರ್ಮಿಕ ಕಲ್ಯಾಣಾಧಿಕಾರಿ ಶಿವಾನಂದ ಹಕಾರೆ ನಿರೂಪಿಸಿದರು. ವ್ಯವಸ್ಥಾಪಕ ನಿರ್ದೇಶಕ ಎಸ್.ಎಸ್. ಶಿಂತ್ರಿ ವರದಿ ವಾಚಿಸಿದರು. ಕೊನೆಯಲ್ಲಿ ಆನಂದ ಕೊಟಬಾಗಿ ವಂದಿಸಿದರು.
ವಿಶೇಷತೆಗಳು
• ಕಬ್ಬಿಗೆ 2500 ದರ ಘೋಷಣೆ
• ಕಾರ್ಮಿಕರಿಗೆ 6ನೇ ವೇತನ ಜಾರಿ
• ದೂಧಗಂಗಾ ಇನ್ನೂ ಚಿದಾನಂದ ಕೋರೆ ಕಾರಖಾನೆ
• ಬೀಜ, ಗೊಬ್ಬರ ಖರೀದಿಗಾಗಿ ರೈತರಿಗೆ 10 ಸಾವಿರ ಮುಂಗಡ
• ಕೇರೂರ-ನಂದಿಕುರಳಿ ಏತ ನೀರಾವರಿಗಾಗಿ 31 ಕೋಟಿ ವೆಚ್ಚ

loading...

LEAVE A REPLY

Please enter your comment!
Please enter your name here