ರೈತರಿಂದ ಕೃಷಿ ಇಲಾಖೆಗೆ ದಿಢೀರ ಮುತ್ತಿಗೆ ಹಾಕಿ ಪ್ರತಿಭಟನೆ

0
21
loading...

ಮುಂಡರಗಿ : ಕೃಷಿ ಇಲಾಖೆಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಹೊಳಗಟ್ಟಿ ಹಾಗೂ ಬದು ನಿರ್ಮಿಸಿಕೊಂಡು ಫಲಾನುಭವಿಗಳಿಗೆ ಸಹಾಯಧನ ಹಣವನ್ನು ಶೀಘ್ರವೇ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ವಿವಿಧ ಗ್ರಾಮದ ರೈತರು ಕೃಷಿ ಇಲಾಖೆಗೆ ಬುಧವಾರ ದಿಢೀರ ಮುತ್ತಿಗೆ ಹಾಕಿ ಕ್ರೀಮಿನಾಶಕ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಮುಖಂಡ ಶರಣಪ್ಪ ಕಂಬಳಿ ಮಾತನಾಡಿ, 2015-16ನೇ ಸಾಲಿನ ಸಹಾಯಕ ಕೃಷಿ ಇಲಾಖೆಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬರದೂರು ಗ್ರಾಮದಲ್ಲಿ 45, ಹಳ್ಳಿಗುಡಿಯಲ್ಲಿ 15, ಹಳ್ಳಿಕೇರಿಯಲ್ಲಿ 20 ಹೊಳಗಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಹೀಗೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ರೈತ ಫಲಾನುಭವಿಗಳು ತಮ್ಮ ಜಮೀನುಗಳಲ್ಲಿ ಹೊಳಗಟ್ಟಿ ಹಾಗೂ ಬದು ನಿರ್ಮಿಸಿಕೊಂಡಿದ್ದಾರೆ. ಒಂದು ಹೊಳಗಟ್ಟಿಗೆ 35 ಸಾವಿರ ರೂ. ಹಾಗೂ ಬದು ನಿರ್ಮಾಣಕ್ಕೆ 25 ಸಾವಿರ ರೂ. ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಹೊಳಗಟ್ಟಿ ಮತ್ತು ಬದುಗಳನ್ನು ನಿರ್ಮಿಸಿಕೊಂಡು 4 ತಿಂಗಳು ಕಳೆದರು ಇಲಾಖೆಯವರು ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತಿಲ್ಲ ಎಂದರು.
ಸ್ಥಳಕ್ಕೆ ಆಗಮಿಸಿದ ಸಹಾಯಕ ಕೃಷಿ ಅಧಿಕಾರಿ ಎಸ್.ಬಿ.ರಾಮೇನಹಳ್ಳಿ ಮಾತನಾಡಿ, ಹೊಳಗಟ್ಟಿ ಹಾಗೂ ಬದು ನಿರ್ಮಿಸಿಕೊಂಡಂತ ರೈತ ಫಲಾನುಭವಿಗಳ ಸಂಪೂರ್ಣ ವರದಿಯನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ. ಸರ್ಕಾರದಿಂದ ಇಲಾಖೆಗೆ ಹಣ ಜಮಾ ಆಗದ ಹಿನ್ನೆಲೆಯಲ್ಲಿ ರೈತರ ಬ್ಯಾಂಕ್‍ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗಿಲ್ಲ. ಮೇಲಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ, ಇನ್ನು 15 ದಿನಗೊಳಗಾಗಿ ರೈತರಿಗೆ ಹಣ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿ, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರೈತರು ಪ್ರತಿಭಟನೆಯನ್ನು ಹಿಂಪಡೆದರು.
ಇದೇ ಸಂದರ್ಭದಲ್ಲಿ ರೈತರಾದ ಮುದುಕನಗೌಡ ನಾಡಗೌಡ್ರ, ಶಶಿಧರ ಪೂಜಾರ ಮಂಜುನಾಥ ಬಳಗಾನೂರ, ಬಸವರಾಜ ಸಂಗನಾಳ, ಮಂಜುನಾಥ ಕುರಿ, ಕುಮಾರ ತಿಗರಿ, ರಾಮಣ್ಣ ಕತ್ತಿ, ಈರಣ್ಣ ಹಡಪದ, ಅಂದಪ್ಪ ಅನವಾಳ, ರಾಜು ಶಿರೂರ, ಪ್ರಕಾಶ ನಾಡಗೌಡ್ರ, ಕರಬಸಪ್ಪ ತುರಕಣಿ, ಬಸಣ್ಣ ಮೇಟಿ, ಸೇರಿದಂತೆ ಇತರರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here