ಸಚಿವ ಕೃಷ್ಣ ಭೈರೇಗೌಡರಿಂದ ಸಾವಯವ ಮೇಳ ಉದ್ಘಾಟನೆ

0
49
loading...

ಕನ್ನಡಮ್ಮ ಸುದ್ದಿ- ಶಿರಸಿ : ಸಾವಯವ ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯದ 75 ಸಾವಿರ ಹೆಕ್ಟೆರ್ ಪ್ರದೇಶವನ್ನು ಸಾವಯವ ಕೃಷಿ ಕ್ಷೇತ್ರವನ್ನಾಗಿ ಪರಿವರ್ತಿಸಿದ್ದು, ಕರ್ನಾಟಕದ ಸಾವಯವ ಉತ್ಪನ್ನವನ್ನು ಪ್ರತ್ಯೇಕ ಬ್ರಾಂಡ್ ಅಡಿ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸಲು ಚಿಂತನೆ ನಡೆದಿದೆ ಎಂದು ರಾಜ್ಯದ ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಶಿರಸಿಯ ಅರಣ್ಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಸಾವಯವ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಸಾವಯವ ಭಾಗ್ಯ ಯೋಜನೆಯಡಿಯಲ್ಲಿ 2015-16 ರಲ್ಲಿ 68 ಕೋಟಿ ಹಣ ನೀಡಲಾಗಿದ್ದು, ಈ ಬಾರಿ 90 ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಸಾವಯವ ಕೃಷಿಗೆ ಒತ್ತು ನೀಡುತ್ತಿರುವ ಸರ್ಕಾರವು ಹಲವು ಯೋಜನೆ ಅನುಷ್ಠಾನಗೊಳಿಸುತ್ತಿದೆ. ರಾಜ್ಯದಲ್ಲಿ 1.25 ಲಕ್ಷ ಹೆ. ಸಾವಯವ ಕೃಷಿ ಜಮೀನಿದ್ದು 75 ಸಾವಿರ ಹೆ. ಈಗಾಗಲೇ ಪರಿವರ್ತನೆಯಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಜ್ಯದ ಸಾವಯವ ಉತ್ಪನ್ನವನ್ನು ಪ್ರತ್ಯೇಕ ಬ್ರಾಂಡ್ ನೇಮ್ ಅಡಿ ದೇಶ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುವ ಕಾರ್ಯ ಮಾಡಲಾಗುವುದು ಎಂದರು.
ಕಾರ್ಮಿಕರ ಕೊರತೆಯಿಂದ ಹಾಗೂ ದುಭಾರಿಯಾಗುತ್ತಿರುವ ಖರ್ಚು, ವೆಚ್ಚದ ಹಿನ್ನೆಲೆಯಲ್ಲಿ ಕೃಷಿಯೆಡೆಗೆ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಾಗಿ ಕೃಷಿಯತ್ತ ಆಸಕ್ತಿ ಹೆಚ್ಚಿಸಲು ಸರ್ಕಾರವೇ ಮುಂದಾಗಿ ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಕೇಂದ್ರಗಳನ್ನು ತೆರೆಯಲಾಗಿದ್ದು, ರೈತರು ಇವುಗಳ ಸದುಪಯೋಗ ಪಡೆದುಕೊಂಡು ಕೃಷಿಯತ್ತ ಹೆಚ್ಚಿನ ಆಸಕ್ತಿ ವಹಿಸಬೇಕು 75 ಲಕ್ಷ ರೂ. ವೆಚ್ಚದಲ್ಲಿ ಆಯಾ ಜಿಲ್ಲೆ/ತಾಲೂಕಿನ ಕೃಷಿಗೆ ಅನುಗುಣವಾಗಿ ಕೃಷಿ ಯಂತ್ರಗಳನ್ನು ಖರೀದಿಸಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ 3.25 ಲಕ್ಷ ರೈತ ಕುಟುಂಬಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 26636 ಕುಟುಂಬಗಳು ಯಂತ್ರೋಪಕರಣಗಳ ಪ್ರಯೋಜನ ಪಡೆದುಕೊಂಡಿವೆ ಎಂದ ಅವರು, ವೈಜ್ಞಾನಿಕ ಬೆಲೆ ಕೇಳುವ ರೈತರು ಪುರಾತನ ಬೇಸಾಯ ಪದ್ಧತಿಯ ಬದಲಾಗಿ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೇ ತಾನಾಗಿಯೇ ಆದಾಯ ಬರುತ್ತದೆ ಎಂದರು.
ಸಾವಯವ ಉತ್ಪನ್ನವು ಸಂಪೂರ್ಣ ಸಾವಯವ ಪದಾರ್ಥ ಎಂದಾಗದಿದ್ದರೆ ದರ ಕಡಿಮೆಯಿದೆ. ಹೀಗಾಗಿ ಸಮಗ್ರ ಸಾವಯವ ಎಂದು ಪ್ರಮಾಣೀಕರಣ ಆಗಬೇಕು. ಹಾಗಾದರೆ ಮಾತ್ರ ಶೇ.30ರಷ್ಟು ದರ ಹೆಚ್ಚಿಗೆ ಸಿಗುತ್ತದೆ ಎಂದ ಅವರು, ಸಾವಯವ ಭಾಗ್ಯ ಯೋಜನೆಯಡಿ ಜಾರಿಯಾದ ವರ್ಷ 650 ಹಳ್ಳಿಯಲ್ಲಿ ಇತರ ಕೃಷಿ ಭೂಮಿಯನ್ನು ಸಾವಯವವಾಗಿ ಪರಿವರ್ತನೆ ಮಾಡಲಾಗಿದೆ. ಪ್ರಮಾಣೀಕರಣ ಸಾವಯವ ಪದಾರ್ಥಕ್ಕೆ ಮಾರುಕಟ್ಟೆ ಬೇಕು. ಸಾವಯವ ಬೆಳೆಯುವುದೆಷ್ಟು ಮುಖ್ಯವೋ ಮಾರುಕಟ್ಟೆ ಸಂಪರ್ಕವೂ ಅಷ್ಟೇ ಮುಖ್ಯ. ಹೀಗಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಮೇಳ ಆಯೋಜಿಸಲಾಗಿದೆ. ಬೇಡಿಕೆ ಸಾಕಷ್ಟಿದ್ದರೂ ಮಾರುಕಟ್ಟೆ ಸಂಪರ್ಕ ಕಷ್ಟವಾಗುವ ಕಾರಣ ಒಕ್ಕೂಟಗಳ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆಗೆ ಖಾಸಗಿಯಾಗಿ ಉತ್ಪನ್ನ ನೀಡುವ ಸಂಸ್ಥೆಗಳ ಮೂಲಕ ಸಾವಯವ ಉತ್ಪನ್ನ ಮಾರಾಟಕ್ಕೆ ಪ್ರಯತ್ನ ನಡೆದಿದೆ. ಈ ಬಗ್ಗೆ ಖಾಸಗಿ ಸಂಸ್ಥೆಗಳು ಹಾಗೂ ಒಕ್ಕೂಟಗಳ ಸಭೆ ನಡೆಸಿ ಹೆಜ್ಜೆ ಇಡಲಾಗಿದೆ ಎಂದ ಅವರು, ನಗರಗಳಲ್ಲಿ ಮಾರುಕಟ್ಟೆ ವಿಸ್ತರಿಸಲು ಉತ್ತಮ ಪ್ಯಾಕಿಂಗ್, ಲೇಬಲ್, ಗುಣಮಟ್ಟ ಇರಬೇಕು. ಈ ಕಾರಣ ಒಕ್ಕೂಟಗಳಿಗೆ ಬೇಕಾದ ಸೌಲಭ್ಯಗಳ ಕುರಿತು ವಿಸ್ತøತ ಯೋಜನಾ ವರದಿ ತಯಾರಿಸಲು ಸೂಚಿಸಲಾಗಿದೆ. ಈ ಬಗ್ಗೆ ಸರ್ಕಾರದಿಂದ ಅನುದಾನ ಕೂಡ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕೃಷಿಯಲ್ಲಿ ಹೊಸತನದ ಯೋಚನೆ ಆಗಬೇಕು. ಕ್ರಷಿ ಸಂಬಂಧಿತ ಎಲ್ಲ ಇಲಾಖೆಗಳ ಸಂಘಟನೆ ಆಗಬೇಕು. ಸರ್ಕಾರವು ಜನಪರ ಯೋಜನೆ ಅನುಷ್ಠಾನಕ್ಕೆ ತರಬೇಕು. ಕೃಷಿ ಯಂತ್ರಧಾರೆ ಯೋಜನೆ ಉತ್ತಮವಾಗಿದೆ. ಕೃಷಿ ಯಾಂತ್ರೀಕರಣಕ್ಕೆ ಸಹಾಯವಾಗಿದ್ದು ಬಡ ರೈತರಿಗೆ ಅನುಕೂಲವಾಗಿದೆ. ಹೀಗಾಗಿ ಸ್ಥಾನಿಕ ಅಗತ್ಯತೆಗೆ ಅನುಗುಣವಾಗಿ ಯಂತ್ರಗಳ ಲಭ್ಯತೆ ಸಿಗಬೇಕು ಎಂದ ಅವರು, ಗುತ್ತಿಗೆ ಪಡೆದ ಕಂಪನಿಗೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಸೂಚಿಸಬೇಕು. ಅಲ್ಲದೇ, ಯೋಜನೆಗೆ ಹೆಚ್ಚಿನ ಅನುದಾನ ಒದಗಿಸಬೇಕು. ಜಿಲ್ಲೆಯ ರೈತರು ಹಲವು ಸಮಸ್ಯೆ ಅನುಭವಿಸುತ್ತಿದ್ದಾರೆ ಕ್ರಷಿ ಸಾಲ, ಮಳೆ ಅಭಾವ, ಉತ್ಪನ್ನಗಳ ಇಳುವರಿ ಕುಂಟಿತವಾಗಿದೆ. ಹೀಗಾಗಿ ಅಂತರ್ಜಲ ಹೆಚ್ಚಿಸಲು ಕೃಷಿ ಭಾಗ್ಯ ಯೋಜನೆಗಳನ್ನು ರಾಜ್ಯದಲ್ಲಿ ಉಳಿದ 5 ಜಿಲ್ಲೆಗಳಿಗೆ ವಿಸ್ತರಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಲು ಹಣವಿದ್ದರೂ ಕಾರ್ಯವಾಗುತ್ತಿಲ್ಲ. ಹೀಗಾಗಿ ಈ ನೀತಿ ಸರಳೀಕರಿಸಬೇಕು. ಕಳೆದ ಬಾರಿ ಜಿಲ್ಲೆಯ ಕೆಲ ತಾಲೂಕುಗಳು ಬರಗಾಲಕ್ಕೆ ತುತ್ತಾಗಿದ್ದರೆ ಈ ಬಾರಿ ಜಿಲ್ಲೆಯನ್ನೇ ಬರಗಾಲ ಪೀಡಿತ ಪಟ್ಟಿಗೆ ಸೇರ್ಪಡೆ ಮಾಡಬೇಕಾದ ಸಂದರ್ಭವಿದೆ. ಸರ್ಕಾರ ಈ ಬಗ್ಗೆ ಗಮನ ನೀಡಬೇಕು. ಜಿಲ್ಲೆಯಲ್ಲಿ ಆಹಾರ ಉತ್ಪನ್ನಗಳ ಸಂಸ್ಕರಣೆ ಘಟಕಗಳು ಸ್ಥಾಪಿತವಾಗಬೇಕು. ಇಲಾಖೆಯಲ್ಲಿ ಇರುವ ಸಿಬ್ಬಂದಿ ಕೊರತೆ ಮುಗಿಸಬೇಕು. ಕಾಡುಪ್ರಾಣಿ ಹಾವಳಿ ನಿಯಂತ್ರಿಸಲು ಇಲಾಖೆ ಮಟ್ಟದಲ್ಲಿ ಚಿಂತನೆಯಾಗಬೇಕು. ಸಮಸ್ಯೆಗಳ ನಡುವೆ ರೈತರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯವಾಗಬೇಕು ಎಂದರು.
ವೇದಿಕೆಯಲ್ಲಿ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಹೆಗಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ, ಕೃಷಿ ವಿವಿ ಕುಲಪತಿ ಡಾ. ಡಿ.ಪಿ.ಬಿರಾದಾರ್, ತಾ.ಪಂ.ಅಧ್ಯಕ್ಷೆ ಶ್ರೀಲತಾ ಕಾಳೆರಮನೆ, ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ಜಿ.ಪಂ ಸದಸ್ಯರಾದ ಉಷಾ ಹೆಗಡೆ, ಪ್ರಭಾವತಿ ಗೌಡ, ಜಿ.ಎನ್.ಹೆಗಡೆ ಮುರೇಗಾರ, ರೂಪಾ ನಾಯ್ಕ, ಎಪಿಎಂಸಿ ಅಧ್ಯಕ್ಷ ರಾಜಶೇಖರ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಶಾಂತಾರಾಮ ಹೆಗಡೆ ಶೀಗೇಹಳ್ಳಿ ಉಪಸ್ಥಿತರಿದ್ದರು. ಕೃಷಿ ಇಲಾಖೆ ಆಯುಕ್ತ ಪಾಡುರಂಗ ನಾಯಕ ಪ್ರಾಸ್ತಾವಿಕ ಮಾತನಾಡಿದರು. ವಿನಾಯಕ ಭಟ್ಟ ನಿರೂಪಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ಸ್ವಾಗತಿಸಿದರು. ಮಾರಿಕಾಂಬಾ ದೇವಾಲಯದ ಅಧ್ಯಕ್ಷ ವೆಂಕಟೇಶ ನಾಯ್ಕ ವಂದಿಸಿದರು.

loading...

LEAVE A REPLY

Please enter your comment!
Please enter your name here