ಸಿಂಗಟಾಲೂರ ಏತನೀರಾವರಿ ಯೋಜನೆಯ ನೀರೆತ್ತುವ ಘಟಕಕ್ಕೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ

0
24
loading...

ಕನ್ನಡಮ್ಮ ಸುದ್ದಿ- ಮುಂಡರಗಿ : ತಾಲೂಕಿನ ಚಿಕ್ಕವಡ್ಡಟ್ಟಿ, ಕೆಲೂರ, ಮುರುಡಿ, ಮುರುಡಿತಾಂಡೆ, ಗುಡ್ಡದಬೂದಿಹಾಳ, ಬಾಗೇವಾಡಿ, ಜಾಲವಾಡಗಿ, ಮಲ್ಲಿಕಾರ್ಜುನಪುರ ಗ್ರಾಮದ ಕೆರೆಗಳಿಗೆ ಕಾಲುವೆ ಮೂಲಕ ತುಂಬಿಸಬೇಕೆಂದು ಒತ್ತಾಯಿಸಿ ಸೋಮವಾರ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಎಡಭಾಗದ ಮೊದಲನೇ ಹಂತದ ನೀರೆತ್ತುವ ಘಟಕಕ್ಕೆ ಆಯಾ ಗ್ರಾಮದ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್.ಗೌಡರ ಮಾತನಾಡಿ, ಕಳೆದ 10 ವರ್ಷಗಳಿಂದ ಮುರುಡಿ, ಕೆಲೂರ, ಸೇರಿದಂತೆ ಆಯಾ ಭಾಗದ ರೈತರು ಅಲ್ಲಿನ ಕೆರೆಗಳನ್ನು ತುಂಗಭದ್ರೆ ನದಿಯಿಂದ ಕಾಲುವೆ ಮೂಲಕ ತುಂಬಿಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದರು, ಇದುವರೆಗೂ ಯಾವುದೇ ರೀತಿಯ ಪ್ರಯೋಜನೆಯಾಗಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರಿಗೆ ಸ್ಪಂದಿಸುವಂತ ಕೆಲಸ ಮಾಡುತ್ತಿಲ್ಲ ಎಂದರು.
ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಣಜಿ ಮಾತನಾಡಿ, ಸತತ ಬರಗಾಲದಿಂದ ಕೆರೆಗಳು ಬತ್ತಿವೆ. ಬೋರ್‍ವೆಲ್‍ಗಳು ಸಹ ಬಂದ್ ಆಗಿವೆ. ಜೊತೆಗೆ ಮಳೆ ಇಲ್ಲದೇ ಬೆಳೆಗಳೇಲ್ಲ ಒಣಗಿ ನಾಶವಾಗಿವೆ. ರೈತರ ಸ್ಥಿತಿಯಂತೂ ತುಂಬಾನೇ ಕಷ್ಟಕರವಾಗಿದೆ. ಆದ್ದರಿಂದ, ಕನಿಷ್ಠ ಪಕ್ಷ ಕಾಲುವೆ ಮೂಲಕ ತುಂಗಭದ್ರೆಯ ನದಿ ನೀರನ್ನು ಕೆರೆಗಳಿಗೆ ತುಂಬಿಸಿದರೆ, ಕೆರೆಯ ಸುತ್ತ-ಮುತ್ತಲಿನ ರೈತರ ಜಮೀನುಗಳ ಬೋರ್‍ವೆಲ್‍ಗಳು ಮರುಪೂರ್ಣಗೊಳ್ಳುತ್ತವೆ. ಹಾಗೇ ಜಾನುವಾರಗಳು ನೀರು ಕುಡಿಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಸಿಂಗಟಾಲೂರ ಏತ ನೀರಾವರಿ ಯೋಜನೆಯ ಸಹಾಯಕ ಇಂಜಿನೀಯರ್ ಉಮಾ ಶಂಕರ ಮಾತನಾಡಿ, ಈ ಬಗೆಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು. ಅಲ್ಲಿವರೆಗೂ ರೈತರು ಸಹಕಾರ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವೈ.ಎನ್.ಗೌಡರ, ಇನ್ನು 15 ದಿನಗೊಳಗಾಗಿ ವಿಶೇಷ ಯೋಜನೆ ರೂಪಿಸಿ ಈ ಭಾಗದ ಎಲ್ಲ ಕೆರೆಗಳನ್ನು ತುಂಬಿಸುವ ಕ್ರಮ ಕೈಗೊಳ್ಳದಿದ್ದರೇ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಸಿದರು.
ಬಾಗೇವಾಡಿ ಗ್ರಾ.ಪಂ. ಅಧ್ಯಕ್ಷ ವೀರನಗೌಡ ಪಾಟೀಲ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ವೀರನಗೌಡ ಕೊಟ್ರಗೌಡ ಪಾಟೀಲ, ಹನುಮಂತ ಶೆಲ್ಲಿಕೇರಿ, ಮುಂತಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ರೈತರು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಉಪತಹಸೀಲ್ದಾರ ಕೆ.ಬಿ.ಕೋರಿಶೆಟ್ಟರ ಮನವಿ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ವಿಠಲ ಗಣಾಚಾರಿ, ವಿ.ಸಿ.ಪಾಟೀಲ, ಈಶಣ್ಣ ರಂಗಪ್ಪನವರ, ವೀರನಗೌಡ ಪಾಟೀಲ, ಎನ್.ಎಮ್.ವಾರದ, ತೋಟನಗೌಡ ಪಾಟೀಲ, ಪರುಶುರಾಮ ರಾಠೋಡ, ಶಂಕರ ಕಂತಿ, ರಮೇಶ ಕವಲೂರ, ಶ್ರೀಕಾಂತ ಕಟ್ಟಿ, ಶಿವಪ್ಪ ಪವಾರ, ಸಿದ್ದೇಶ್ವರಪ್ಪ ತಳವಾರ, ಮಾರುತಿ ಕೊಡ್ಲಿ, ಬಸಣ್ಣ ಸನಂದಿ, ಹನುಮಂತಗೌಡ ಪಾಟೀಲ, ಮಲ್ಲಪ್ಪ ಮಾಚೆನಹಳ್ಳಿ, ಯಲ್ಲಪ್ಪ, ಮುತ್ತಯ್ಯ ಹರ್ತಿ, ಮಲ್ಲಪ್ಪ ಮಾಚಳ್ಳಿ, ಸೇರಿದಂತೆ ನೂರಾರು ರೈತರು ಇದ್ದರು.

loading...

LEAVE A REPLY

Please enter your comment!
Please enter your name here