ಸಿಂಧೂ ನೀರನ್ನು ಪಾಕ್‍ಗೆ ಕೊಟ್ಟ ಕಾಂಗ್ರೆಸ್ ದೇಶಕ್ಕೆ ಶಾಪವಾಗಿದೆ: ಸಂಸದ ಅಂಗಡಿ

0
19
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:27 ಸಿಂಧೂನದಿ ನೀರನ್ನು ನಮ್ಮ ದೇಶಕ್ಕೆ ಕೊಡದೇ ಪಾಕಿಸ್ತಾನಕ್ಕೆ ಕೊಟ್ಟ ಕಾಂಗ್ರೆಸ್ ಈ ದೇಶಕ್ಕೆ ಶಾಪವಾಗಿ ಪರಿಣಮಿಸಿದೆ ಎಂದು ಸಂಸದ ಸುರೇಶ ಅಂಗಡಿ ಇಂದಿಲ್ಲಿ ಆರೋಪಿಸಿದರು.
ಅವರು ಮಂಗಳವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಸಿಂಧೂನದಿ ನೀರಿನ ಹಂಚಿಕೆಯಲ್ಲಿ ಕಾಶ್ಮೀರಕ್ಕೆ ಕೊಡದೇ ಹೆಚ್ಚಿನ ಪಾಲನ್ನು ಪಾಕಿಸ್ತಾನಕ್ಕೆ ನೀಡಿದ್ದರು. ಆದರೆ, ಈಗ ಕಾಂಗ್ರೆಸ್ ಪಕ್ಷ ಕಾವೇರಿ ನದಿನೀರಿನ ವಿಷಯದಲ್ಲಿ ಪ್ರಧಾನಿ ಮಧ್ಯಸ್ಥಿಕೆ ಮಾಡಬೇಕು ಎಂದು ಹೇಳಿ ಅವರನ್ನು ಅಪರಾಧ ಸ್ಥಾನದಲ್ಲಿ ತಂದು ನಿಲ್ಲಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಕಾವೇರಿ ನದಿನೀರು ಹಂಚಿಕೆ ವಿಷಯದಲ್ಲಿ ಕೇಂದ್ರ ಸರಕಾರ ಕರ್ನಾಟಕದ ವಿರುದ್ಧವಾಗಿಲ್ಲ. ಕೇಂದ್ರ ತಮಿಳುನಾಡನ್ನು ಸರಕಾರ ಬೆಂಬಲ ನೀಡುತ್ತದೆ ಎಂದು ಭಾವಿಸುವುದು ತಪ್ಪು. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಜಿಎಸ್‍ಟಿ ಕಾಯಿದೆಗೆ ತಮಿಳುನಾಡು ಬೆಂಬಲ ನೀಡಲಿಲ್ಲ. ಇಷ್ಟಕ್ಕೂ ಬಿಜೆಪಿ ಸರಕಾರ ತಮಿಳುನಾಡನ್ನು ಬೆಂಬಲಿಸುವ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾತನಾಡಿ, ಮಹದಾಯಿ ಹಾಗೂ ಕಾವೇರಿ ನದಿ ನೀರಿನ ವಿಷಯದಲ್ಲಿ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ. ಆದರೆ, ರಾಜ್ಯ ಸರಕಾರ ನ್ಯಾಯಾಲಯಕ್ಕೆ ಸಮರ್ಪಕ ಮಾಹಿತಿ ನೀಡದೇ ಇರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ತಮಿಳುನಾಡು ನ್ಯಾಯಾಲಯದಲ್ಲಿ ಸಮರ್ಥ ವಾದ ಮಂಡಿಸುವಲ್ಲಿ ಯಶಸ್ವಿಯಾಗಿದೆ. ಆದರೆ, ನಮ್ಮ ರಾಜ್ಯ ಸರಕಾರ ಪರಿಸ್ಥಿತಿಯನ್ನು ವಿವರಿಸಲು ವಿಫಲಗೊಂಡಿದೆ. ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಹೇಳಿದ್ದರೂ ಮುಖ್ಯಮಂತ್ರಿ ನೀರು ಬಿಡುವ ನಿರ್ಧಾರ ತೆಗೆದುಕೊಂಡರು. ಕೊನೆಯ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸದ ಬಿಜೆಪಿ ಮೇಲೆ ಆರೋಪ ಸರಿಯಲ್ಲ. ಬಿಜೆಪಿ ಹೇಳಿದಂತೆ ಮೊದಲೇ ತಮಿಳುನಾಡಿಗೆ ನೀರು ಬಿಡಬಾರದಾಗಿತ್ತು ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಹೊಲಸು ರಾಜಕಾರಣ ಮಾಡುವುದನ್ನು ಬಿಡಬೇಕು. ನ್ಯಾಯಾಲಯದಲ್ಲಿ ತಪ್ಪು ಮಾಡಿರುವ ಕಾಂಗ್ರೆಸಿಗರು ತಮ್ಮ ತಪ್ಪು ಮರೆ ಮಾಚಲು ನ್ಯಾಯಾಲಯದಲ್ಲಿರುವ ವಿಷಯವನ್ನು ಪ್ರಧಾನಿ ಮಧ್ಯಸ್ಥಿಕೆ ಹೆಸರಿನಲ್ಲಿ ಎಳೆದು ತರುವ ಪ್ರಯತ್ನ ಮಾಡುತ್ತಿದ್ದಾರೆ. ಜನತೆ ಇದನ್ನು ಗಮನಿಸುತ್ತಿದ್ದಾರೆ ಎಂದರು.
ಕೆ.ಜೆ.ಜಾರ್ಜ್‍ರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವ ವಿಷಯದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಸಕ ಡಾ.ವಿ.ಐ. ಪಾಟೀಲ, ಮಾಜಿ ಸಚಿವ ಶಶಿಕಾಂತ ನಾಯಕ, ಶಾಸಕ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಅನಿಲ್ ಬೆನಕೆ, ಶಂಕರಗೌಡ ಪಾಟೀಲ, ರಾಜೀವ ಟೋಪಣ್ಣವರ, ರಾಜು ಚಿಕ್ಕನಗೌಡರ ಸೇರಿದಂತೆ ಮೊದಲಾದವರು ಹಾಜರಿದ್ದರು.

loading...

LEAVE A REPLY

Please enter your comment!
Please enter your name here