ಕಾರವಾರ ಉದ್ಯೋಗ ಮೇಳ ಪ್ರಚಾರಕ್ಕೆ ಬೆಂಗಳೂರಿನಲ್ಲಿ ರೋಡ್ ಶೋ ಹಾಗೂ ಸಂವಾದ

0
31
loading...

ಕನ್ನಡ್ಮಮ ಸುದ್ದಿ-ಕಾರವಾರ : ನವೆಂಬರ್ 12ಮತ್ತು 13ರಂದು ಕಾರವಾರದಲ್ಲಿ ನಡೆಯಲಿರುವ ಉದ್ಯೋಗ ಮೇಳದ ಪ್ರಚಾರ ರೋಡ್ ಶೋ ಹಾಗೂ ವಿವಿಧ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಶನಿವಾರ ಆಯೋಜಿಸಲಾಯಿತು.
ರೋಡ್ ಶೋ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಇದೇ ಮೊದಲ ಬಾರಿಗೆ ಉದ್ಯೋಗ ಮೇಳವನ್ನು ಬೃಹತ್ ಪ್ರಮಾಣದಲ್ಲಿ ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಈ ಪ್ರಯೋಗ ಯಶಸ್ವಿಯಾದರೆ ಇತರ ಜಿಲ್ಲೆಗಳಲ್ಲಿಯೂ ಈ ರೀತಿಯ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕಾರವಾರ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಈಗಾಗಲೇ 10275 ಮಂದಿ ಆನ್‍ಲೈನ್ ಮೂಲಕ ತಮ್ಮ ಹೆಸರು ನೊಂದಾಯಿಸಿದ್ದಾರೆ. 160ಕ್ಕೂ ಅಧಿಕ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಲು ಒಪ್ಪಿಕೊಂಡಿವೆ. ಉದ್ಯೋಗ ಆಕಾಂಕ್ಷಿಗಳು ಹಾಗೂ ಕಂಪೆನಿಗಳ ನಡುವೆ ಕೊಂಡಿಯಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.
ಕಾರವಾರ ಉದ್ಯೋಗ ಮೇಳದಲ್ಲಿ ಬಂಡವಾಳ ಹೂಡಿಕೆ ಮಾಡುವ ಅವಕಾಶಗಳ ಬಗ್ಗೆಯೂ ವಿವಿಧ ಕಂಪೆನಿಗಳಿಗೆ ಮನವರಿಕೆ ಮಾಡಿಕೊಡಲಾಗುವುದು. ಕೇವಲ ಬಂಡವಾಳ ಹೂಡಿಕೆಯಿಂದ ಜಿಲ್ಲೆಯ ಪ್ರಗತಿ ಸಾಧ್ಯವಿಲ್ಲ. ಇದರ ಜತೆಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾದರೆ ಮಾತ್ರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.
ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ನೈಸರ್ಗಿಕವಾದ ಕಾಡು, ಸುಂದರ ಕಡಲ ತೀರಗಳು, ಪ್ರವಾಸಿ ತಾಣಗಳು, ನದಿ, ಜಲಪಾತಗಳಿಂದ ಕೂಡಿರುವ ಉತ್ತರಕನ್ನಡ ಜಿಲ್ಲೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇದರೊಂದಿಗೆ ನೌಕಾನೆಲೆ, ವಿವಿಧ ವಿದ್ಯುತ್ ಯೋಜನೆಗಳು, ಅಣುಸ್ಥಾವರ, ಅಣೆಕಟ್ಟೆಗಳು ಹೀಗೆ ಅನೇಕ ಆಕರ್ಷಣೆಗಳನ್ನು ಹೊಂದಿದ್ದು, ಈ ಜಿಲ್ಲೆಯತ್ತ ಲಕ್ಷ್ಯ ವಹಿಸಬೇಕು ಎಂದು ಕೈಗಾರಿಕೋದ್ಯಮಿಗಳಿಗೆ ಕರೆ ನೀಡಿದರು.
ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳನ್ನು ಒದಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕುಮಟಾದಲ್ಲಿ ಏರ್‍ಸ್ಟ್ರಿಪ್ ನಿರ್ಮಿಸಲಾಗುತ್ತಿದ್ದು, ಈ ಮೂಲಕ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ ಕೈಗಾರಿಕೋದ್ಯಮಕ್ಕೆ ಸಹ ಒತ್ತು ದೊರೆಯಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಜಿಲ್ಲೆಯ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಒದಗಿಸಿದರು. ಶಾಸಕ ಸತೀಶ್ ಸೈಲ್, ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ದಿನೇಶ್, ಸುಧಾಕರ ಶೆಟ್ಟಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಕೈಗಾರಿಕಾ ಇಲಾಖೆಯ ಆಯುಕ್ತ ಗೌರವ್ ಗುಪ್ತಾ ವೇದಿಕೆಯಲ್ಲಿದ್ದರು. ಉತ್ತರಕನ್ನಡ ಜಿಲ್ಲೆಯ ಪ್ರಗತಿ ವೈಶಿಷ್ಟ್ಯಗಳ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ಟೊಯೊಟಾ, ಎಲ್‍ಪಿಜಿ, ಎಸಿಸಿ ಸಿಮೆಂಟ್, ಕಾಸಿಯಾ, ಸಗಾಸ್ ಸೇರಿದಂತೆ ಪ್ರಮುಖ ಕಂಪೆನಿಗಳ ಮುಖ್ಯಸ್ಥರು ಮೇಳದಲ್ಲಿ ಭಾಗವಹಿಸಿದ್ದರು.

loading...

LEAVE A REPLY

Please enter your comment!
Please enter your name here