ಪುರಸಭೆಯ ಮಾಸಿಕ ಸಭೆ- ಪ್ರತಿ ಕಾರ್ಯ ನಿಯಮದಂತೆ ಮಾಡಲಾಗುವುದು: ಅಧ್ಯಕ್ಷ ಬೋಳಶೆಟ್ಟಿ

0
28
loading...

ಹಳಿಯಾಳ: ಪುರಸಭೆಯ ಮಾಸಿಕ ಸಾಧಾರಣ ಸಭೆಯು ಅ. 3 ರಂದು ಪುರಸಭೆಯ ಅಧ್ಯಕ್ಷ ಉಮೇಶ ಬೋಳಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ನಿಗದಿತ ಹಲವಾರು ವಿಷಯಗಳ ಬಗ್ಗೆ ಸಭೆಯಲ್ಲಿ ವ್ಯವಸ್ಥಿತವಾಗಿ ಚರ್ಚೆ ನಡೆಯಿತು.
ತಾಲೂಕಾ ಕೇಂದ್ರವಾಗಿರುವ ಹಳಿಯಾಳ ಪಟ್ಟಣವು ದಿನೇ-ದಿನೇ ಸರ್ವಾಂಗೀಣ ಅಭಿವೃದ್ಧಿಯತ್ತ ಮುನ್ನಡೆದಿದೆ. ಸಚಿವ ಆರ್.ವಿ. ದೇಶಪಾಂಡೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ ಇವರ ಮಾರ್ಗದರ್ಶನ ದೊರೆಯುತ್ತಿದೆ. ಈ ಕಾರ್ಯಗಳಿಗೆ ಸರ್ವ ಸದಸ್ಯರ ಸಹಕಾರ ಅಗತ್ಯವಾಗಿದೆ ಎಂದು ಕೋರಿದ ಅಧ್ಯಕ್ಷ ಬೋಳಶೆಟ್ಟಿ ಪ್ರತಿಯೊಂದು ಕಾರ್ಯಗಳನ್ನು ನಿಯಮಗಳ ಚೌಕಟ್ಟಿನಲ್ಲಿಯೇ ಮಾಡಲಾಗುವುದು. ಪುರಸಭೆಯ ಕಾರ್ಯಾಂಗದ ಎಲ್ಲಾ ವಿಭಾಗದ ಕೆಲಸಗಳು ತೆರೆದ ಅಂಚೆಯಂತಿರಬೇಕು, ಪಾರದರ್ಶಕವಾಗಿರುತ್ತದೆ ಎಂದು ಸಭೆಗೆ ತಿಳಿಸಿದರು.
ಪಟ್ಟಣದಲ್ಲಿ ಹಾಯ್ದು ಹೋಗುವ ಹೆದ್ದಾರಿ ಅಕ್ಕ-ಪಕ್ಕದಲ್ಲಿ ಗ್ಯಾರೇಜ್‍ಗಳ ಕಾರಣ ರಸ್ತೆ ಸಂಚಾರ ಸುಗಮವಾಗಿಲ್ಲ. ಇದರಿಂದ ಹಲವಾರು ಅವಘಡಗಳಿಗೂ ಕೂಡ ನಾಂದಿಯಾಗುತ್ತಿದೆ. ಹೀಗಾಗಿ ಈ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಅಧ್ಯಕ್ಷರು ತಿಳಿಸಿದರು.
ಸಭೆಯ ಆರಂಭದಲ್ಲಿಯೇ ಆಡಳಿತ ಪಕ್ಷದ ಸದಸ್ಯ ಸತ್ಯಜೀತ ಗಿರಿ ಗಮನ ಸೆಳೆಯುವ ವಿಷಯ ಮಂಡನೆ ಮಾಡಿ ತಮ್ಮ ಸಲಹೆಗಳನ್ನು ಲಿಖಿತ ರೂಪದಲ್ಲಿ ನೀಡಿದರು. ಹಳಿಯಾಳವು ಶೀಘ್ರವಾಗಿ ಬೆಳೆಯುತ್ತಿರುವ ಊರಾಗಿದ್ದು, ಹೊಸದಾಗಿ ಹಲವಾರು ಕಟ್ಟಡಗಳು ನಿರ್ಮಾಣಗೊಳ್ಳುತ್ತಿವೆ. ಹೀಗಾಗಿ ನಗರ ಅಭಿವೃದ್ಧಿ ಯೋಜನೆಯ ಸಂಬಂಧಪಟ್ಟ ಸಿಬ್ಬಂದಿ ಇಲ್ಲಿ ಹೆಚ್ಚಿನ ಸಮಯ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಸಭೆಗಳಲ್ಲಿ ಚರ್ಚಿಸಲ್ಪಟ್ಟ ವಿಷಯಗಳನ್ನು ಪತ್ರಿಕಾ ಮಾಧ್ಯಮದವರಿಗೆ ಸವಿಸ್ತಾರವಾಗಿ ತುರ್ತಾಗಿ ಒದಗಿಸಬೇಕು. ಸಭಾಭವನದಲ್ಲಿ, ಅಧ್ಯಕ್ಷರ, ಮುಖ್ಯಾಧಿಕಾರಿಗಳ, ಅಭಿಯಂತರ ಕೊಠಡಿಗಳಲ್ಲಿ, ಪ್ರಾಂಗಣದಲ್ಲಿ ಸಿಸಿ ಕ್ಯಾಮರಾ ಹಾಗೂ ಧ್ವನಿ ಸಂಗ್ರಹಣ ಉಪಕರಣಗಳನ್ನು ಅಳವಡಿಸಿ ತ್ವರಿತ ಮತ್ತು ಉತ್ತಮ ಆಡಳಿತವನ್ನು ಸಾರ್ವಜನಿಕರಿಗೆ ನೀಡಬೇಕು. ಜಮಾ ಹಾಗೂ ಖರ್ಚಿನ ವಿವರನ್ನು ಮಾಸಿಕ ಸಭೆಯಲ್ಲಿ ಒದಗಿಸಬೇಕು ಎಂದು ಕೋರಿದರು.
ಆಡಳಿತ ಪಕ್ಷದ ಇನ್ನೋರ್ವ ಸದಸ್ಯ ಸುರೇಶ ತಳವಾರ ಮಾತನಾಡುತ್ತಾ ಸಕ್ಕರೆ ಕಾರ್ಖಾನೆಗೆ ತೆರಳುವ ರಸ್ತೆಯನ್ನು ಡಾಂಬರೀಕರಣ ಇಲ್ಲವೇ ಕಾಂಕ್ರೀಟ್ ಮಾಡಿ ಧೂಳು ಮುಕ್ತ ರಸ್ತೆಯನ್ನಾಗಿಸುವದಾಗಿ ಹೇಳಿರುವ ಕಾರ್ಖಾನೆಯವರ ಭರವಸೆ ಶೀಘ್ರ ಈಡೇರಿಸುವಂತೆ ಸಂಬಂಧಿಸಿದವರಿಗೆ ಕಟ್ಟುನಿಟ್ಟಿನ ತಾಕೀತು ನೀಡುವಂತೆ ಆಗ್ರಹಿಸಿದರು. ಪರಿಶಿಷ್ಟರಿಗಾಗಿ ಮೀಸಲಿಟ್ಟ ಅನುದಾನದಲ್ಲಿ ಕಾಮಗಾರಿಗಳನ್ನು ಪರಿಶಿಷ್ಟರ ಜನಸಂಖ್ಯೆಯ ಹೆಚ್ಚಿನ ಸಾಂದ್ರತೆ ಇರುವಲ್ಲಿ ಮಾಡುವದನ್ನು ಬಿಟ್ಟು ಇತರೆಡೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಆಡಳಿತ ಪಕ್ಷದ ಹಿರಿಯ ಸದಸ್ಯ ಶಂಕರ ಬೆಳಗಾಂವಕರ, ಪ್ರತಿಪಕ್ಷದ ಎಸ್.ಎಂ. ಹೂಲಿ, ಸೈಯದಅಲಿ ಅಂಕೋಲೆಕರ, ಸುಬಾನಿ ಹುಬ್ಬಳ್ಳಿ ಮೊದಲಾದವರಿಂದ ಬಂದ ವಿವಿಧ ಸಲಹೆ-ಸೂಚನೆಗಳಿಗೆ ಸ್ಪಂದಿಸಿದ ಅಧ್ಯಕ್ಷ ಬೋಳಶೆಟ್ಟಿ ಪ್ರತಿಯೊಬ್ಬ ಸದಸ್ಯರು ನೀಡಿದ ಮಹತ್ವಪೂರ್ಣ ಸಲಹೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಲು, ಹಂದಿಗಳ ನಿರ್ಮೂಲನೆಗೆ, ಬೀದಿ ನಾಯಿಗಳ ಸಂತಾನಹರಣ ಕಾರ್ಯಗಳನ್ನು ಮಾಡಿಸಲು ಕ್ರಮ ಕೈಗೊಳ್ಳುವದಾಗಿ ತಿಳಿಸಿದರು.
ಉಪಾಧ್ಯಕ್ಷ ಅರುಣ ಬೋಬಾಟಿ, ಸ್ಥಾಯಿ ಸಮಿತಿ ಚೇರಮನ್ ಮಂಜುಳಾ ವಡ್ಡರ ವೇದಿಕೆಯಲ್ಲಿದ್ದರು. ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಎಂ.ಐ. ಕೋಳಿ ಸ್ವಾಗತಿಸಿದರು. ಆಡಳಿತ ವಿಭಾಗದ ಚಂದ್ರು ನಿಂಗನಗೌಡಾ ಸಭೆಯನ್ನು ನಿರ್ವಹಿಸಿದರು.

loading...

LEAVE A REPLY

Please enter your comment!
Please enter your name here